ಭೀಮಣ್ಣ ಖಂಡ್ರೆಯವರೊಬ್ಬ ಹುಟ್ಟು ಹೋರಾಟಗಾರರು. ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯೂ ಸೇರಿದಂತೆ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡವರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾಜಿ ಸಚಿವ, ಮುತ್ಸದ್ದಿ ನಾಯಕ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬೀದರ್ ಜಿಲ್ಲೆಯ ಭಾಲ್ಕಿಗೆ ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಹೇಳಿದರು.

ʼಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿ, ಕರ್ನಾಟಕ ಏಕೀಕರಣದಲ್ಲಿ ಸಹ ಭಾಗವಹಿಸಿದ್ದರು. ಜನಪರವಾದ ಹೋರಾಟಗಾರ ಎಂದೇ ಗುರುತಿಸಿಕೊಂಡಿದ್ದ ಅವರು ಅನ್ಯಾಯವಾದ ಕಡೆಗೆಲ್ಲಾ ತೆರಳಿ ನ್ಯಾಯದ ಪರವಾಗಿ ಧ್ವನಿ ಎತ್ತಿದವರು. ಇಂದು ಬೀದರ್ ಕರ್ನಾಟಕದಲ್ಲಿ ಉಳಿದಿದ್ದರೆ ಅದು ಭೀಮಣ್ಣ ಖಂಡ್ರೆ ಅವರು ಏಕೀಕರಣಕ್ಕಾಗಿ ಹೋರಾಟ ಮಾಡಿದ್ದರ ಫಲ. ಅವರು ಕೇವಲ ರಾಜಕಾರಣಿಯಾಗಿರದೇ ಸಮಾಜಸೇವಕರೂ ಆಗಿದ್ದರು. ದೀರ್ಘ ಕಾಲ ಸಮಾಜ ಸೇವೆಯಲ್ಲಿ ತೊಡಗಿದ್ದರು. ಎಲ್ಲ ವರ್ಗದ ಜನರನ್ನು ಪ್ರತಿನಿಧಿಸುವ ಛಾತಿ ಅವರಲ್ಲಿತ್ತುʼ ಎಂದರು.

ʼಎರಡು ವರ್ಷಗಳ ಹಿಂದೆ ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳ ಸಂತಸದಲ್ಲಿ ಭಾಗಿಯಾಗಿದ್ದೆ. ಅವರ ಬದುಕಿನ ರೀತಿ ಯುವಜನರಿಗೆ ದಾರಿದೀಪ. ಭೀಮಣ್ಣ ಖಂಡ್ರೆ ಅವರ ಸಾವಿನಿಂದ ದುಃಖದಲ್ಲಿರುವ ಎಲ್ಲರಿಗೂ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆʼ ಎಂದರು.

ಇದನ್ನೂ ಓದಿ : ಬೀದರ್ | ಕಂಬನಿ ತುಂಬಿದ ಕಣ್ಣು, ತಂದೆ ಭೀಮಣ್ಣ ಖಂಡ್ರೆ ಕಾರ್ಯ ಸ್ಮರಿಸಿದ ಈಶ್ವರ ಖಂಡ್ರೆ





