ಬೀದರ್ ನಗರದ ಸಿದ್ಧಾರ್ಥ ಕಾಲೇಜು ಆವರಣದಲ್ಲಿ ಫೆಬ್ರವರಿ 22ರಿಂದ ಮಾರ್ಚ್ 1ರವರೆಗೆ 8 ದಿನಗಳ ಕಾಲ ಪ್ರತಿ ದಿನ ಸಂಜೆ ನಡೆದ ಧಮ್ಮ ಪ್ರವಚನ ಮಾಲಿಕೆಯ ಸಮಾರೋಪ ಸಮಾರಂಭವು ಭಾನುವಾರ ನೆರವೇರಿತು.
ಮುಖ್ಯ ಪ್ರವಚನಕಾರ ಭಂತೆ ಡಾ.ಕಲ್ಲಯಾಣ ಸಿರಿ ಮಾತನಾಡಿ, ʼಧಮ್ಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯಗತಗೊಳಿಸಿದಾಗ ಮಾತ್ರ ಬಾಬಾ ಸಾಹೇಬರ ಕನಸು ನನಸಾಗುತ್ತದೆ. ಅಂಬೇಡ್ಕರ್ ಅವರು ಶೋಷಿತರ, ದಮನಿತರ ಶ್ರೇಯೋಭಿವೃದ್ಧಿಗಾಗಿ ಬೌದ್ಧ ಧಮ್ಮವನ್ನು ಸ್ವೀಕರಿಸಿ, ಇತರರಿಗೂ ಧಮ್ಮ ಮಾರ್ಗವನ್ನು ಅನುಸರಿಸುವಂತೆ ಕರೆ ನೀಡಿದ್ದರು. ಬೌದ್ಧ ಧಮ್ಮವನ್ನು ಬೌದ್ಧಿಕವಾಗಿ ಅರ್ಥ ಮಾಡಿಕೊಂಡು ಅನುಸರಿಸುವ ಅಗತ್ಯವಿದೆʼ ಎಂದು ಅವರು ಅಭಿಪ್ರಾಯಪಟ್ಟರು
ಭಾರತೀಯ ಬೌದ್ಧ ಮಹಾಸಭೆ ಜಿಲ್ಲಾಧ್ಯಕ್ಷ ರಾಜಪ್ಪ ಗುನ್ನಳ್ಳಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಎಂಟು ದಿನಗಳ ಕಾಲ ವಿವಿಧ ವಿಷಯಗಳ ಕುರಿತು ಭಿಕ್ಕುಗಳ ಬೋಧನೆಗಳಿಂದ ಧಮ್ಮದ ತತ್ವಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆತಿದೆ. ಬೌದ್ಧರಾದರೆ ಮೀಸಲಾತಿಗೆ ಧಕ್ಕೆಯಾಗುವುದಿಲ್ಲʼ ಎಂದು ಸ್ಪಷ್ಟಪಡಿಸಿದರು.
ʼಗ್ರಾಮೀಣ ಪ್ರದೇಶಗಳಲ್ಲಿ ಬೌದ್ಧಾಚಾರ್ಯರ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ಪ್ರತಿ ಮನೆಗೊಬ್ಬ ಸಮತಾ ಸೈನಿಕರನ್ನಾಗಿ ಮಾಡುವ ಸಂಕಲ್ಪ ಕೈಗೊಳ್ಳಬೇಕು. ಸಮುದಾಯ ಭವನಗಳು ಮತ್ತು ಬೌದ್ಧ ವಿಹಾರಗಳು ಶಿಕ್ಷಣ ಕೇಂದ್ರಗಳಾಗಿ ರೂಪುಗೊಳ್ಳಬೇಕುʼ ಎಂದು ಹೇಳಿದರು.

ಆಣದೂರು ವೈಶಾಲಿನಗರದ ಭಂತೆ ಧಮ್ಮಾನಂದ, ಹಿಪ್ಪಳಗಾಂವ ಭಂತೆ ಬೋಧಿರತ್ನ ಮತ್ತು ಭಂತೆ ವರಜ್ಯೋತಿಯ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರುಣಾ ಸಾಗರರವರ ನೇತ್ರತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಧಮ್ಮಕಾರ್ಯದಲ್ಲಿ ಜೀವನ ಸಮರ್ಪಿಸಿದ ಮಹನೀಯರಿಗೆ ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಕುಡಿಯುವ ನೀರಿನ ಸಮಸ್ಯೆಯೇ? : ನೇರವಾಗಿ ಅಧಿಕಾರಿಗಳಿಗೆ ಸಂಪರ್ಕಿಸಲು ಮನವಿ
ಭಂತೆ ಧಮ್ಮದೀಪ, ಸಂಘಜ್ಯೊತಿ, ಸಂಘ ಸೇವಕ, ಶಾಂತಿ ಸಮಣ, ಮಹಾಸಭೆಯ ಭಾಲ್ಕಿ ತಾಲೂಕಾಧ್ಯಕ್ಷ ವಿಜಯಕುಮಾರ ಗಾಯಕವಾಡ, ರಾಜ್ಯ ಪದಾಧಿಕಾರಿ ಬಾಬು ಆಣದೂರೆ, ಕಾಶಿನಾಥ ಚಲುವಾ, ಮಂಜುಳಾ ಭಾವಿದೊಡ್ಡಿ, ಸಂತೋಷ ಫುಲೆ, ತುಕಾರಾಮ ಗೌರೆ ಹಾಗೂ ಬಾಬಶೆಟ್ಟಿ ಮಂಠಾಳಕರ್ ಉಪಸ್ಥಿತರಿದ್ದರು. ಚಂದ್ರಕಲಾ ಬಡಿಗೇರ್ ನಿರೂಪಿಸಿದರು. ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಂಗೆ ಸೂರ್ಯಕಾಂತ ಸ್ವಾಗತಿಸಿದರು. ಬೀದರ ತಾಲೂಕಾಧ್ಯಕ್ಷ ಶಿವಕುಮಾರ ಸದಾಫುಲೆ ವಂದಿಸಿದರು.





