ಬಿಸಿಲಿನಲ್ಲಿ ನಿಲ್ಲಿಸಿದ ಎರಡು ಕಾರುಗಳಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತು ಉರಿದು ಕರಕಲಾಗಿರುವ ಘಟನೆ ಬಸವಕಲ್ಯಾಣ ಸಮೀಪದ ನಾರಾಯಣಪುರ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ನಾರಾಯಣಪುರ ಗ್ರಾಮದ ಪೂಜಾ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಿತಾರ್ಥ ಸಮಾರಂಭ ಇತ್ತು.ಕಲ್ಯಾಣ ಮಂಟಪ ಎದುರು ನಿಲ್ಲಿಸಿದ ಎರಡು ಕಾರು ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿವೆ.
ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಡೌಡಾಯಿಸಿ ಬೆಂಕಿ ಆರಿಸಲು ಸಾಹಸ ಪಟ್ಟರು. ಆದರೆ, ಅಷ್ಟೊತ್ತಿಗಾಗಲೇ ಎರಡು ಕಾರು ಸಂಪೂರ್ಣ ಸುಟ್ಟು ಭಸ್ಮ ಆಗಿದವು.
ಯಾದಗಿರಿ ಜಿಲ್ಲೆ ಶಹಾಪುರ ಮೂಲದವರಿಗೆ ಸೇರಿದ ಎರಡು ಕಾರು ಬೆಂಕಿಗಾಹುತಿಯಾಗಿವೆ ಎಂಬುದು ತಿಳಿದು ಬಂದಿದೆ.
ಬೆಂಕಿಗೆ ಕಾರು ಆಹುತಿಯಾಗಲು ಕಾರಣವೇನು ಅಂತ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಬಸವಕಲ್ಯಾಣ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಬೀದರ್ | ಚಂದಾ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ : ನಾಲ್ವರ ಬಂಧನ





