ಬೀದರ್ ನಗರದ ಬಹಮನಿ ಕೋಟೆ ಆವರಣದಲ್ಲಿ ಇಲ್ಲಿನ ಭಾರತೀಯ ವಾಯುಪಡೆ, ಸೂರ್ಯಕಿರಣ ವಿಮಾನಗಳ ಏರೋಬ್ಯಾಟಿಕ್ ತಂಡದಿಂದ ಶುಕ್ರವಾರ ಆಯೋಜಿಸಿದ ʼಏರ್ ಶೋʼ ನೋಡುಗರನ್ನು ಮಂತ್ರಮುಗ್ದರಾಗಿಸಿದವು.
ಕೋಟೆ ಆವರಣದ ಬಾನಲ್ಲಿ ಲೋಹದ ಹಕ್ಕಿಗಳ ಹೊರಸೂಸಿದ ಹೊಗೆಯಲ್ಲಿ ತ್ರಿವರ್ಣ ಧ್ವಜದ ಬಣ್ಣಗಳ ಚಿತ್ತಾರ, ವಿವಿಧ ಸಾಹಸಮಯ ಕಸರತ್ತುಗಳನ್ನು ಪ್ರದರ್ಶಿಸಿ ನೋಡುಗರ ಕಣ್ಮನ ಸೆಳೆದವು. ಲೋಹದ ಹಕ್ಕಿಗಳ ಕಲರವ ಮತ್ತು ಕಸರತ್ತು ನೋಡಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಕರತಾಡನ ಮುಗಿಲು ಮುಟ್ಟಿತ್ತು.

ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಮೇಲಿನಿಂದ ಕೆಳಗೆ, ಪರಸ್ಪರ ಮುಖಾಮುಖಿಯಾಗಿ ಕ್ರಾಸಿಂಗ್. ಬ್ಯಾರಲ್ ರೋಲ್, ರಾಷ್ಟ್ರ ಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣದ ಹೊಗೆ ಹೊರಹಾಕುತ್ತ ಚಿತ್ರಗಳನ್ನು ಬಿಡಿಸುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಮೂಲಕ ಆಕಾಶದಲ್ಲಿ ಚಿತ್ತಾರಗಳನ್ನು ಮೂಡಿಸಿದವು. ಕೆಲವೊಂದು ಸಲ ಒಂಟಿ, ಜೋಡಿ ಮತ್ತು ತಂಡವಾಗಿ ಬರುತ್ತಿದ್ದ ವಿಮಾನಗಳು ಯಾವ ದಿಕ್ಕಿನಿಂದ ವಿಮಾನಗಳು ಆಕಾಶದಲ್ಲಿ ಬರುತ್ತಿವೆ ಎನ್ನುವುದನ್ನು ಜನರು ಕುತೂಹಲದಿಂದ ವೀಕ್ಷಿಸಿದರು.
ಸೂರ್ಯಕಿರಣ ಗ್ರೂಪ್ ತಂಡ ಅಜಯ ದಶರಥಿ, ಗ್ರೂಪ್ ಕ್ಯಾಪ್ಟನ್ ಬೀರೇಂದ್ರ ಸಿಂಗ್ ಹಾಘೂ ವಾಯುಪಡೆ ತಂಡದ ಪಾರಗ್ ಲಾಲ್, ವೈಶಾಲಿ ಲಾಲ್, ವಿವೇಕ ಅಗರವಾಲ್, ಟಿ.ಜೆ.ಸಿಂಗ್ ನೇತ್ರತ್ವದಲ್ಲಿ ಏರ್ ಶೋ ನಡೆಯಿತು.

ಇದನ್ನೂ ಓದಿ : ಬೀದರ್ | ಮಾಂಜಾ ದಾರದಿಂದ ವ್ಯಕ್ತಿ ಸಾವು : ನಿವಾಸಕ್ಕೆ ಸಚಿವ ಖಂಡ್ರೆ ಭೇಟಿ, ವೈಯಕ್ತಿಕ ನೆರವು
ʼಏರ್ ಶೋʼ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಸಿಇಒ ಡಾ.ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಬೀದರ್ ಏರ್ ಪೋರ್ಸ್ ಸ್ಟೇಷನ್ ಅಧಿಕಾರಿಗಳು ಹಾಗೂ ಅವರ ಪರಿವಾರದ ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.






