ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಬೀದರ್ ಜಿಲ್ಲಾ ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ʼದೇಶ ಸ್ವಾತಂತ್ರ‍್ಯ ಪಡೆದು 75 ವರ್ಷಗಳಾದರೂ, ಸಂವಿಧಾನ ಜಾರಿಗೆ ಬಂದು ದೀರ್ಘಕಾಲವಾದರೂ ಪರಿಶಿಷ್ಟ ಜಾತಿ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ. ಹಲವು ಸರ್ಕಾರಗಳು ಅಧಿಕಾರಕ್ಕೆ ಬಂದರೂ ಸಮುದಾಯಕ್ಕೆ ನೀಡುವ ಅನುದಾನಗಳು ಸಮರ್ಪಕವಾಗಿ ತಲುಪುತ್ತಿಲ್ಲʼ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ʼಪರಿಶಿಷ್ಟರಿಗೆ ಮೀಸಲಾದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಬಾಬಾ ಸಾಹೇಬರ ಹಾಗೂ ಸಂವಿಧಾನದ ಹೆಸರಿನಲ್ಲಿ ಮತ ಪಡೆದ ಸರ್ಕಾರ ಅಧಿಕಾರಕ್ಕೆ ಬಂದು 3 ಕಳೆದರೂ ರಾಜ್ಯ ಸರ್ಕಾರ ಸಮುದಾಯದಕ್ಕೆ ಹೆಚ್ಚು ಪ್ರಾತಿನಿದ್ಯ ನೀಡಿಲ್ಲʼ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ʼಒಟ್ಟು ಬಜೆಟ್‌ನಲ್ಲಿ ಶೇ.30ರಷ್ಟು ಅನುದಾನವನ್ನು ಪರಿಶಿಷ್ಟ ಜಾತಿಗೆ ಮೀಸಲಿಡಬೇಕು. ಕಳೆದ ಮೂರು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆ ಬಳಸಿದ ಪರಿಶಿಷ್ಟರ ಹಣವನ್ನು ಹಿಂದಿರುಗಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ನಂತರದ ವಸತಿ ಶಾಲೆಗಳ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು. ವಿದ್ಯಾರ್ಥಿ ನಿಲಯಗಳ ಗ್ರಂಥಾಲಯಗಳ ಡಿಜಿಟಲೀಕರಣ ಹಾಗೂ 2 ವಿದ್ಯಾರ್ಥಿಗಳಿಗೆ 1 ಕಂಪ್ಯೂಟರ್ ವ್ಯವಸ್ಥೆ ನೀಡಬೇಕುʼ ಎಂದು ಬೇಡಿಕೆಯಿಟ್ಟಿದ್ದಾರೆ.
ʼವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಊಟದ ವೆಚ್ಚವನ್ನು ಮಾಸಿಕ 2,500ಕ್ಕೆ ಹೆಚ್ಚಿಸುವುದು. ಪ್ರತಿ ಜಿಲ್ಲೆಯಲ್ಲಿ ಡಾ.ಅಂಬೇಡ್ಕರ್ ತರಬೇತಿ ಕೇಂದ್ರ’ ಸ್ಥಾಪಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಬೇಕು. ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುವುದು, ಪದವಿ ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ಉಚಿತ ಗುಣಮಟ್ಟದ ಲ್ಯಾಪ್‌ಟಾಪ್ ಮರುಜಾರಿ, ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ಬಗರ್ ಹುಕುಂ ಭೂಮಿಗೆ ಹಕ್ಕುಪತ್ರ ನೀಡುವುದು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯವನ್ನು ಜಿಲ್ಲೆಗೆ ಕನಿಷ್ಠ 100 ಮಂದಿಗೆ ತಲುಪಿಸಿ ಶೇ.70ರಷ್ಟು ಸಬ್ಸಿಡಿ ನೀಡಬೇಕು ಎಂಬುದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ಕುಡಿಯುವ ನೀರಿನ ಸಮಸ್ಯೆಯೇ? : ನೇರವಾಗಿ ಅಧಿಕಾರಿಗಳಿಗೆ ಸಂಪರ್ಕಿಸಲು ಮನವಿ
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ಜಿಲ್ಲಾ ಸಂಚಾಲಕ ಸಂದೀಪ್ ಕಾಂಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಮಾಲೆ, ಜಿಲ್ಲಾ ಕಾರ್ಯದರ್ಶಿ ಅನೀಲ ಮಡ್ಡೆ, ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ, ಬಹುಜನ ಯುತ್ ಪ್ಯಾಂಥರ್ ಜಿಲ್ಲಾಧ್ಯಕ್ಷ ಜನಾರ್ಧನ ದೀನೆ, ಯುವ ಮುಖಂಡ ಸಾಯಿ ಕೌರವ ಉಪಸ್ಥಿತರಿದ್ದರು.





