ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿ, ಕರ್ತವ್ಯ ಲೋಪ ಎಸಗಿದ ಆರೋಪ ಹಿನ್ನಲೆಯಲ್ಲಿ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶಿವಮಂಗಲಾ ಮಹಾದೇವ ಎಂಬುವರನ್ನು ಅಮಾನತುಗೊಳಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ.
ಕಾರ್ಯಕರ್ತೆ ಶಿವಮಂಗಲಾ ಅವರು ಹಾರಕೂಡ-ಸಿ ಅಂಗನವಾಡಿ ಕೇಂದ್ರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಡುಗೆ ಕೋಣೆಯ ಕಟ್ಟೆಯ ಕೆಳಗಡೆ ಇಟ್ಟು ಅವಮಾನ ಮಾಡಲಾಗಿದೆ. ಈ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರನ್ನು ಅಮಾನತು ಮಾಡಬೇಕೆಂದು ಬಿಎಸ್‌ಪಿ ಗ್ರಾಮ ಘಟಕದ ಅಧ್ಯಕ್ಷ ದಿಲೀಪ ಶಿರೋಳೆ ಅವರು ಬಸವಕಲ್ಯಾಣ ಸಿಡಿಪಿಓ ಗೌತಮ ಸಿಂಧೆ ಅವರಿಗೆ ದೂರು ಸಲ್ಲಿಸಿದರು.
ಈ ಬಗ್ಗೆ ಇಲಾಖೆ ಕಾರಣ ಕೇಳಿ ನೋಟಿಸ್ ನೀಡಿದರೆ ಲಿಖಿತ ರೂಪದಲ್ಲಿ ಸಮಜಾಯಿಸಿ ಉತ್ತರ ನೀಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿ, ತಮ್ಮ ಕರ್ತವ್ಯದಲ್ಲಿ ನಿಷ್ಕಾಳಜಿ, ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತೋರಿದ ಹಿನ್ನಲೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಿವಮಂಗಲಾ ಅವರನ್ನು ಗೌರವಧನ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ಮೊಳಕೇರಾ ಆಕಸ್ಮಿಕ ಸ್ಪೋಟಕ್ಕೆ ಕಾರಣವೇನು : ಎಸ್ಪಿ ಪ್ರದೀಪ ಗುಂಟಿ ಹೇಳಿದ್ದೇನು?





