ಬೀದರ್ ನಗರದ ಛತ್ರಪತಿ ಶಿವಾಜಿ ವೃತ್ತದ ಸಮೀಪ ಕಳೆದ ವರ್ಷ ನಡೆದ ಎಸ್‌ಬಿಐ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣದಲ್ಲಿ ಮೃತಪಟ್ಟ ವೆಂಕಟೇಶ ಚಿದ್ರಿ ನಿವಾಸಿ ಅವರ ಕುಟುಂಬಕ್ಕೆ ಪರಿಹಾರ ಹಾಗೂ ಸರ್ಕಾರಿ ಸೌಲಭ್ಯ ಒದಗಿಸಬೇಕೆಂದು ಬಹುಜನ ಸಮಾಜ ಪಕ್ಷ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಈ ಸಂಬಂಧ ಬಿಎಸ್ಪಿ ಜಿಲ್ಲಾಧ್ಯಕ್ಷೆ ಕಪೀಲ್ ಕಪೀಲ ಗೋಡಬೊಲೆ ನೇತ್ರತ್ವದಲ್ಲಿ ಪಕ್ಷದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಿದರು.
2025ರ ಜನವರಿ 16ರಂದು ದರೋಡೆಕೋರರು ಎಟಿಎಂ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ ಗಿರಿ ವೆಂಕಟೇಶ ಅವರನ್ನು ಹತ್ಯೆ ಮಾಡಿದ್ದರು. ಮೃತ ಗಿರಿ ವೆಂಕಟೇಶ ತಮ್ಮ ಕುಟುಂಬಕ್ಕೆ ಅವರೇ ಆಧಾರವಾಗಿದ್ದರು, ಅವರ ನಿಧನ ಬಳಿಕ ಕುಟುಂಬದ ನಿರ್ವಹಣೆ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ʼಈ ದುರ್ಘಟನೆ ನಡೆದು ಒಂದು ವರ್ಷ ಕಳೆದರೂ ದರೋಡೆಕೋರರು ಇನ್ನೂ ಪತ್ತೆಯಾಗಿಲ್ಲ. ಅಲ್ಲದೆ, ಘಟನೆಯ ನಂತರ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಮೃತರ ಕುಟುಂಬಕ್ಕೆ ಭೇಟಿ ನೀಡಿ, ಕುಟುಂಬದ ಒಬ್ಬ ಸದಸ್ಯರಿಗೆ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಉದ್ಯೋಗ ಒದಗಿಸಲಾಗಿಲ್ಲʼ ಎಂದು ಮುಖಂಡರು ಆರೋಪಿದರು.
ʼಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದರೋಡೆಕೋರರನ್ನು ಕೂಡಲೇ ಬಂಧಿಸಬೇಕು. ಘಟನೆಯಲ್ಲಿ ಮೃತಪಟ್ಟ ಗಿರಿ ವೆಂಕಟೇಶ ಅವರ ಕುಟುಂಬದ ಓರ್ವ ಸದಸ್ಯರಿಗೆ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ಒದಗಿಸಿ ಕುಟುಂಬದ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕುʼ ಎಂದು ಕೋರಿದ್ದಾರೆ.
ಇದನ್ನೂ ಓದಿ : ಲೋಕನಾಯಕ ʼಭೀಮಣ್ಣ ಖಂಡ್ರೆʼ ವಿಭೂತಿಯಲ್ಲಿ ಲೀನ
ಬಿಎಸ್ಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ ಭಾವಿದೊಡ್ಡಿ, ಜಿಲ್ಲಾ ಸಂಯೋಜಕ ರಾಜಕುಮಾರ ಮೂಲಭಾರತಿ ಸೇರಿದಂತೆ ಪ್ರಮುಖರಾದ ಕಪಿಲ, ಅಂಬಾದಾಸ ಚಕ್ರವರ್ತಿ, ಮಹೇಶ ಭೋಲಾ, ಸುರೇಶ ಜೋಜನಾಕರ್, ಸಚಿನ್ ಗಿರಿ, ಜಾಫರ್ ಖುರೇಷಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.





