ಬೀದರ್ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ವತಿಯಿಂದ ಬೀದರ ವಿಶ್ವವಿದ್ಯಾಲಯದ ವಿವಿಧ ಪದವಿ ತರಗತಿಗಳ 5 ಪಠ್ಯಪುಸ್ತಕಗಳ ಲೋಕಾರ್ಪಣೆ ಹಾಗೂ ಐಎಎಸ್ ಪರೀಕ್ಷೆಯ ಸಂಪನ್ಮೂಲ ತಜ್ಞ ನಿಖಿಲ್ ಎನ್.ನಾವದಗೇರಿ ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ ಮಾತನಾಡಿ, ʼಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕಲ್ಪವೃಕ್ಷವಾಗಿದ್ದು, ಯಾವುದೇ ಗೈಡ್‌ಗಳನ್ನು ಬಳಸದೆ ಪಠ್ಯಪುಸ್ತಕಗಳನ್ನೇ ಆಧಾರ ಮಾಡಿಕೊಂಡು ಅಧ್ಯಯನ ಮಾಡಿದಾಗ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲು ಸಾಧ್ಯʼ ಎಂದು ಅಭಿಪ್ರಾಯಪಟ್ಟರು.
ಪಠ್ಯಪುಸ್ತಕಗಳನ್ನು ತಜ್ಞರು ಸರಳ ಮತ್ತು ಅರ್ಥಪೂರ್ಣವಾಗಿ ರಚಿಸಿದ್ದಾರೆ. ಪ್ರೊ. ಜಗನ್ನಾಥ ಹೆಬ್ಬಾಳೆ, ಡಾ.ಶಿವಕುಮಾರ ನಾಗವಾರ, ಡಾ.ಸುನಿತಾ ಕೂಡ್ಲಿಕರ್, ಡಾ.ಅಶೋಕ ಕೋರೆ, ಎಂ.ಜಿ. ದೇಶಪಾಂಡೆ ಮತ್ತು ಡಾ.ಹೇಮಲತಾ ವಡ್ಡೆ ಅವರು ವಿಶ್ವವಿದ್ಯಾಲಯಕ್ಕೆ ಅತ್ಯುತ್ತಮ ಗ್ರಂಥಗಳನ್ನು ನೀಡಿದ್ದಾರೆ. ಅವುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಅಧ್ಯಯನ ಮಾಡಬೇಕುʼ ಎಂದು ಹೇಳಿದರು.
ʼ16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸಬಾರದೆಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಸ್ವಾಗತಿಸಿದರು. ಆದರೆ ಉಪಯುಕ್ತ ವೆಬ್‌ಸೈಟ್‌ಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕುʼ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಪ್ರೊ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ʼಆರ್.ವಿ.ಬಿಡಪ್, ಹಣಾದಿ, ಸರ್ವಜ್ಞನ ತ್ರಿಪದಿಗಳು, ಆಧುನಿಕ ಸಾಹಿತ್ಯ ಸಂಗ್ರಹ ಮತ್ತು ಕಲ್ಯಾಣ ಕರ್ನಾಟಕದ ಕಥೆಗಳು ಎಂಬ ಐದು ಕೃತಿಗಳು ಬೀದರ ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳಾಗಿವೆ. ವಿದ್ಯಾರ್ಥಿಗಳು ಈ ಕೃತಿಗಳನ್ನು ಅಧ್ಯಯನ ಮಾಡುವುದರ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳೆಸಿ ಜೀವನದಲ್ಲಿ ಯಶಸ್ಸು ಸಾಧಿಸಬೇಕುʼ ಎಂದು ತಿಳಿಸಿದರು.
ಐಎಎಸ್ ಪರೀಕ್ಷೆಯ ಸಂಪನ್ಮೂಲ ತಜ್ಞ ನಿಖಿಲ್ ಎನ್.ನಾವದಗೇರಿ ಮಾತನಾಡಿ, ʼವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ ಪರಿಶ್ರಮಪಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ಪಾಲಕರ ಶ್ರಮವನ್ನು ಗೌರವಿಸಿ, ಗುರುವಿನ ಮಾರ್ಗದರ್ಶನವನ್ನು ಅನುಸರಿಸಿ, ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡಿಕೊಂಡು ಗುರಿಯತ್ತ ಪ್ರಯತ್ನಿಸಬೇಕುʼ ಎಂದು ಸಲಹೆ ನೀಡಿದರು.
ಇದನ್ನೂ ಓದಿ : ಬೀದರ್ | ಒಳ ಮೀಸಲಾತಿ ಅನ್ಯಾಯ ಖಂಡಿಸಿ ಮಾ.17ರಂದು ಬಲಗೈ ಸಮುದಾಯಗಳ ಪ್ರತಿಭಟನೆ
ನಟ-ನಿರ್ದೇಶಕ ವಿಷ್ಣುಕಾಂತ ಬಿ.ಜೆ., ಹಿರಿಯ ಸಾಹಿತಿ ಶಿವಕುಮಾರ ನಾಗವಾರ, ಕನಕ ಪ್ರಶಸ್ತಿ ಪುರಸ್ಕೃತ ರವೀಂದ್ರ ಲಂಜವಾಡಕರ್, ಸಾವಿತ್ರಿಬಾಯಿ ಹೆಬ್ಬಾಳೆ, ಅಶೋಕ ಕೋರೆ, ಮಹಾರುದ್ರ ಡಾಕುಳಗಿ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಉಪಸ್ಥಿತರಿದ್ದರು. ಸಾಹಿತಿ ಎಸ್.ಬಿ.ಕುಚಬಾಳ ನಾಡಗೀತೆ ನಡೆಸಿಕೊಟ್ಟರು. ಸುನಿತಾ ಕೂಡ್ಲಿಕರ್ ನಿರೂಪಿಸಿದರು. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ನಿಜಲಿಂಗಪ್ಪ ತಗಾರೆ ವಂದಿಸಿದರು.





