ಇತಿಹಾಸವನ್ನು ಅವಲೋಕಿಸಿದರೆ ಹಿಂದಿನ ಎಲ್ಲಾ ಬೌದ್ಧ ವಿಹಾರಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದವು. ಅಲ್ಲಿ ಗಣಿತ, ಕೃಷಿ, ವೈಜ್ಞಾನಿಕ ಜ್ಞಾನ, ಸ್ವರಕ್ಷಣೆಯ ಕಲೆ ಸೇರಿದಂತೆ ಅನೇಕ ರೀತಿಯ ಶಿಕ್ಷಣವನ್ನು ನೀಡಲಾಗುತ್ತಿತ್ತು ಎಂದು ಬೆಂಗಳೂರಿನ ಅಕ್ಕ ಅಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ ಹೇಳಿದರು.
ಬೀದರ್ ನಗರದ ಸಿದ್ದಾರ್ಥ ಕಾಲೇಜು ಆವರಣದಲ್ಲಿ ಭಾರತೀಯ ಬೌದ್ಧ ಮಹಾಸಭೆ ಬೀದರ ಜಿಲ್ಲಾ ಘಟಕದಿಂದ ಆಯೋಜಿಸಿರುವ 8 ದಿನಗಳ ಧಮ್ಮ ಪ್ರವಚನ ಕಾರ್ಯಕ್ರಮದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ʼಅರಹಂತ ಭಿಕ್ಕು-ಭಿಕ್ಕುಣಿಯರು ಶಿಕ್ಷಕರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಸಾರ್ವಜನಿಕ ಬದುಕಿಗೆ ಅಗತ್ಯವಿರುವ ಎಲ್ಲಾ ಶಿಕ್ಷಣಗಳು ಅವರ ಬೋಧನೆಯಲ್ಲಿ ಅಡಕವಾಗಿದ್ದವು. ʼಸಿಗಾಲ ಸುತ್ತʼ ಬೋಧನೆಗಳಲ್ಲಿಯೂ ಈ ವಿಷಯ ಸ್ಪಷ್ಟವಾಗಿ ಕಾಣಿಸುತ್ತದೆʼ ಎಂದು ಅವರು ಹೇಳಿದರು.
ʼಬುದ್ಧರ ಧಮ್ಮ ಮನುಷ್ಯನ ಇಂದ್ರಿಯಗಳ ನಿಯಂತ್ರಣ ಹಾಗೂ ಸನ್ಮಾರ್ಗದ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ. ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಕೇವಲ ಸಾಂಪ್ರದಾಯಿಕ ಶಿಕ್ಷಣ ನೀಡುವುದಲ್ಲದೆ, ಇಂದಿನ ಅಗತ್ಯಗಳಿಗೆ ಹೊಂದುವ ಸಮಗ್ರ ಶಿಕ್ಷಣದ ಬೋಧನೆ ಅಗತ್ಯವಾಗಿದೆʼ ಎಂದು ಅಭಿಪ್ರಾಯಪಟ್ಟರು.
ಆಣದೂರು ವೈಶಾಲಿನಗರದ ಭಂತೆ ಜ್ಞಾನಸಾಗರ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದರು. ಇದೇ ಸಂದರ್ಭದಲ್ಲಿ ʼಬುದ್ಧ ಬಂದಾನೊ ನಮ್ಮೂರಿಗೆʼ ಎಂಬ ಹಾಡನ್ನು ಖ್ಯಾತ ಝೆನ್ ಕವಿ ಸೋಸಲೆ ಗಂಗಾಧರ ಮೈಸೂರು ಅವರು ಮನಮುಟ್ಟುವ ರೀತಿಯಲ್ಲಿ ನಡೆಸಿಕೊಟ್ಟರು.
ಇದನ್ನೂ ಓದಿ : ಸಾಮಾಜಿಕ ನ್ಯಾಯದ ಕಗ್ಗೊಲೆಗೆ ಸಿದ್ಧವಾದ ಸಿದ್ದರಾಮಯ್ಯ ಸರ್ಕಾರ
ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭೆಯ ಜಿಲ್ಲಾಧ್ಯಕ್ಷ ರಾಜಪ್ಪ ಗುನಳ್ಳಿ, ಪ್ರಮುಖರಾದ ಕಾಶಿನಾಥ ಚಲುವಾ, ವಿಠಲದಾಸ ಪ್ಯಾಗೆ, ಮಹಾಸಭಾದ ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾವತಿ ಜಂಜಿರೆ, ಬೀದರ ತಾಲೂಕಾಧ್ಯಕ್ಷ ಶಿವಕುಮಾರ ಸದಾಫೂಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಸಿಂಗೆ ಹಾಗೂ ತಾಲೂಕಾ ಪ್ರಧಾನ ಕಾರ್ಯದರ್ಶಿ ತಲವೀರ ಸಾಮ್ರಾಟ್ ಸೇರಿದಂತೆ ಅನೇಕ ಉಪಾಸಕರು ಮತ್ತು ಭಕ್ತರು ಉಪಸ್ಥಿತರಿದ್ದರು.





