ಮಾಜಿ ಸಚಿವ, ಶತಾಯಷಿ ಡಾ.ಭೀಮಣ್ಣ ಖಂಡ್ರೆ ಅವರ ಆರೋಗ್ಯದಲ್ಲಿ ಮಂಗಳವಾರ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು ಬಂದಿದೆ.
ಭೀಮಣ್ಣ ಖಂಡ್ರೆ ಅವರಿಗೆ ಈಗ 102 ವರ್ಷ ವಯಸ್ಸಾಗಿದೆ. ಕಳೆದ ಒಂದು ವಾರ ಬೀದರ್ ನಗರದ ಗುದುಗೆ ಆಸ್ಪತ್ರಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆ ಅವರನ್ನು ಸೋಮವಾರ ಭಾಲ್ಕಿ ಪಟ್ಟಣದ ತಮ್ಮ ಮನೆಗೆ ಕರೆದೊಯ್ಯಲಾಯಿತು. ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ಕಳೆದ ಎರಡ್ಮೂರು ದಿನಗಳಿಗೆ ಹೋಲಿಸಿದರೆ ಡಾ.ಭೀಮಣ್ಣ ಖಂಡ್ರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಉಸಿರಾಟದ ಮಟ್ಟ ಏರಿಕೆಯಾಗಿದೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಠಾಧೀಶರು, ಗಣ್ಯರು ಭೇಟಿ :
ನಾನಾ ಮಠಾಧೀಶರು, ಗಣ್ಯರು ಭೀಮಣ್ಣ ಖಂಡ್ರೆ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಗದಗ ಜಿಲ್ಲೆಯ ಬಾಳೆ ಹೊಸೂರ ಮಠದ ದಿಂಗಾಲೇಶ್ವರ ಸ್ವಾಮೀಜಿ, ಹಾರಕೂಡದ ಚೆನ್ನವೀರ ಶಿವಾಚಾರ್ಯರು, ಮುಗುಳಖೋಡ ಶ್ರೀಗಳು, ಹುಡುಗಿ ಶ್ರೀಗಳು, ಹಣೆಗಾಂವ ಶ್ರೀ, ಬೀದರ್ ಚಿದಂಬರ ಆಶ್ರಮ ಶಿವಕುಮಾರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಸಂಘ-ಸಂಸ್ಥೆಗಳ ಪ್ರಮುಖರು, ಅವರ ಹಿತೈಷಿಗಳು ತಂಡೋಪ ತಂಡದಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ.
ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿ ಎಂಲ್ಸಿ ವಿಜಯ ಸಿಂಗ್, ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ, ಹಿರಿಯ ಮುಖಂಡ ಗುರುನಾಥ ಕೊಳ್ಳುರು ಸೇರಿದಂತೆ ಮುಂತಾದವರು ಭೇಟಿ ನೀಡಿ ಭೀಮಣ್ಣ ಖಂಡ್ರೆ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖ ಹೊಂದಲಿ ಎಂದು ಪ್ರಾರ್ಥಿಸಿದರು.

ಇದನ್ನೂ ಓದಿ : ಬೀದರ್ | ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮ: ಬೀದಿಗೆ ಬಿದ್ದ ಅಲೆಮಾರಿ ಕುಟುಂಬ; ನೆರವು ಸಿಗುವುದೇ?
ʼನಮ್ಮ ತಂದೆ ಶತಾಯಷಿ ಡಾ.ಭೀಮಣ್ಣ ಖಂಡ್ರೆ ಅವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಯಾರು ಕಿವಿಗೂಡಬಾರದು. ಕಾರ್ಯಕರ್ತರು, ಅಭಿಮನಿಗಳು, ಹಿತೈಷಿಗಳು ನಮ್ಮ ತಂದೆಯ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಬೇಕುʼ ಎಂದು ಸಚಿವ ಈಶ್ವರ ಖಂಡ್ರೆ ಕೋರಿದ್ದಾರೆ.





