ಉತ್ತರ ಕರ್ನಾಟಕದ ಜಾನಪದ ಗೀತೆಗಳ ಹೆಸರಿನಲ್ಲಿ ಅಶ್ಲೀಲ ಸಾಹಿತ್ಯವನ್ನು ರಚಿಸಿ ಕೆಲ ಗಾಯಕರು ಹಾಡುತ್ತಿರುವುದು ಮೂಲ ಜಾನಪದ ಪರಂಪರೆಯ ಗೌರವಕ್ಕೆ ಧಕ್ಕೆ ತರುತ್ತಿದ್ದು, ಈ ದುರುಪಯೋಗಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ ಮುಖ್ಯ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಅವರು ಪ್ರಸ್ತಾಪಿಸಿದರು.
ಜಾನಪದ ಗೀತೆಗಳ ನಿಜವಾದ ಸೊಗಡು, ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಮರೆಮಾಚುವಂತೆ ಅಶ್ಲೀಲ ಪದಗಳನ್ನು ಬಳಸಿ ಹಾಡಲಾಗುತ್ತಿದ್ದು, ಇದರಿಂದ ಜಾನಪದ ಪರಂಪರೆಯ ಹೆಸರಿಗೆ ಮಸಿ ಬಳಿದಂತಾಗಿದೆ. ಅಶ್ಲೀಲ ಜಾನಪದ ಸಾಹಿತ್ಯಕ್ಕೆ ಯುವಜನತೆ ಹೆಚ್ಚು ಆಕರ್ಷಿತರಾಗುತ್ತಿರುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುವಂತಾಗಿದ್ದು, ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆಯಾಗುತ್ತಿದೆ. ಜಾನಪದದ ನಿಜವಾದ ಗೌರವ, ಘನತೆ ಹಾಗೂ ಪರಂಪರೆಯ ಅರಿವನ್ನು ಯುವಜನಾಂಗಕ್ಕೆ ಮೂಡಿಸುವ ಕಾರ್ಯ ಅತ್ಯಗತ್ಯವಾಗಿದೆʼ ಎಂದು ಹೇಳಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?
ʼಜಾನಪದದ ಹೆಸರಿನಲ್ಲಿ ಅಶ್ಲೀಲ ಸಾಹಿತ್ಯ ಬಳಸಿಕೊಂಡು ಹಾಡುತ್ತಿರುವ ಕೆಲ ಗಾಯಕರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದ್ದು, ಈ ಕುರಿತು ಕರ್ನಾಟಕ ಜಾನಪದ ಅಕಾಡೆಮಿ ಸ್ಪಷ್ಟ ಹಾಗೂ ದೃಢ ನಿಲುವು ತಾಳಬೇಕುʼ ಎಂದು ಸಭೆಯಲ್ಲಿ ಮನವಿ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





