ಡಾ.ಬಿ.ಆರ್.ಅಂಬೇಡ್ಕರ್ ಅವರು 1927ರ ಡಿ.25ರಂದು ಮನುಸ್ಮೃತಿ ದಹಿಸಿದ ಘಟನೆಯ ಸ್ಮರಣಾರ್ಥ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ನೇತ್ರತ್ವದಲ್ಲಿ ಬೀದರ್ ನಗರದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಗುರುವಾರ ಮನುಸ್ಮೃತಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಬಳಿಕ ಮುಖಂಡರು ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶ್ರೇಣಿಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಲಿಂಗಭೇದ, ಮಹಿಳೆಯರ ಮೇಲಿನ ದಬ್ಬಾಳಿಕೆ ಸೇರಿದಂತೆ ಅನಿಷ್ಟ ಸಾಮಾಜಿಕ ಪದ್ಧತಿಗಳ ಮೂಲವಾಗಿದ್ದ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ದಹಿಸಿದ ಐತಿಹಾಸಿಕ ದಿನಕ್ಕೆ ಇಂದು 98 ವರ್ಷಗಳು ಪೂರ್ಣಗೊಂಡಿವೆʼ ಎಂದರು.
ʼಸತಿಸಹಗಮನ, ಬಾಲ್ಯವಿವಾಹ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ಮುಂತಾದ ಅನೇಕ ಅನ್ಯಾಯಗಳಿಗೆ ಕಾರಣವಾಗಿದ್ದ ಮನುವಾದಿ ಸಂಹಿತೆಗೆ ಅಂಬೇಡ್ಕರ್ ಅವರು ಬೆಂಕಿ ಹಚ್ಚುವ ಮೂಲಕ ಸಮಾನತೆ, ಸ್ವಾತಂತ್ರ‍್ಯ ಹಾಗೂ ಭಾತೃತ್ವದ ಹೋರಾಟಕ್ಕೆ ದಿಕ್ಕು ತೋರಿಸಿದ್ದರು. ಸ್ವಾತಂತ್ರ‍್ಯ ಭಾರತಕ್ಕೆ ಸಮಾನತೆಯ ಆಶಯದ ಸಂವಿಧಾನವನ್ನು ರೂಪಿಸಿದ ಡಾ.ಅಂಬೇಡ್ಕರ್ ಅವರ ಕೊಡುಗೆ ಅಮೂಲ್ಯವಾಗಿದೆʼ ಎಂದು ತಿಳಿಸಿದರು.
ʼಸಂವಿಧಾನ ಅಂಗೀಕಾರದ ಸಂದರ್ಭದಲ್ಲಿಯೇ ಕೆಲವು ಸಂಘಟನೆಗಳು ಸಂವಿಧಾನದ ವಿರುದ್ಧ ಅಸಹನೆಯನ್ನು ವ್ಯಕ್ತಪಡಿಸಿದವು. ಇಂದಿಗೂ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸವಾಲುಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆʼ ಮುಖಂಡರು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ | ಮಹಿಳಾ ಆಯೋಗಕ್ಕೆ ಸಾವಿರ ಪುಟಗಳ ವರದಿ ಸಲ್ಲಿಸಲು ಎಸ್‌ಐಟಿ ತಯಾರಿ?
ಪ್ರಮುಖರಾದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ತುಕಾರಾಮ ಲಾಡಕರ್, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಳಕ ಸಂದೀಪ ಕಾಟೆ ಸೇರಿದಂತೆ ಪ್ರಮುಖರಾದ ಪ್ರದೀಪ ನಾಟೇಕರ್, ಶಿವಕುಮಾರ ನೀಲಕಟ್ಟಿ, ರವೀಂದ್ರ ಗೌಂಡೆ, ಸುನೀಲ ಸಂಗಮ, ಶಿವರಾಜ ಲಾಡಕರ, ರಾಜಕುಮಾರ ಚಂದನ, ವಿಠಲ ಲಾಡೆ, ಮಲ್ಲಿಕಾರ್ಜುನ ಭಂಡಾರಿ, ಶ್ರೀಪತರಾವ ದೀನೆ ಮತ್ತಿತರರು ಪಾಲ್ಗೊಂಡಿದ್ದರು.





