ಬೀದರ್ ನಗರದ ನೌಬಾದ್-ಅಲಿಯಾಬಾದ್ ಸಮೀಪದ ಪುರಾತನ ಕಾಲದ ʼಕರೇಜ್ʼ ಸುತ್ತಮುತ್ತ ಖಾಸಗಿಯವರು ನೆಲ ಅಗೆಯುತ್ತಿದ್ದು, ಇದರಿಂದ ‘ಕರೇಜ್’ನ ಸ್ವರೂಪಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ.
ಅಲಿಯಬಾದ್ ಸಮೀಪ ಇರುವ ʼಕರೇಜ್ ದ್ವಾರʼ ಎದುರಲ್ಲೇ ಜೆಸಿಬಿಯಿಂದ ನಾಲೆ ತೆಗೆಯುತ್ತಿರುವ ಕಾಮಗಾರಿ ಎಗ್ಗಿಲದೇ ನಡೆಯುತ್ತಿದೆ. ಇದರಿಂದ ನೆಲದಾಳದ ನೀರಿನ ಮಾರ್ಗಕ್ಕೂ ಧಕ್ಕೆಯಾಗುವ ಸಾಧ್ಯತೆಯಿದೆ. ಸುರಂಗ ಬಾವಿ ಮೂಲಕ ಹೋಗುವ ಸಮೀಪದ ಕಿರು ಪುಷ್ಕರಣಿಯನ್ನು ಅಗೆಯಲಾಗಿದೆ. ವರ್ಷಪೂರ್ತಿ ಒಂದೇ ಮಟ್ಟದಲ್ಲಿ ನೀರು ಹರಿಯುವುದು ಕರೇಜ್ ವಿಶೇಷ. ಈಗ ಖಾಸಗಿಯವರು ನೆಲ ಅಗೆದಿರುವುದರಿಂದ ನೀರು ವೇಗವಾಗಿ ಹರಿಯುತ್ತಿದ್ದು, ಕರೇಜ್‌ನ ನೀರು ಖಾಲಿಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ವಿನಯ್ ಕುಮಾರ್ ಮಾಳಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ :
ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಪುರಾತನ ಕರೇಜ್ ದ್ವಾರ ಸಮೀಪದಲ್ಲಿ ನೆಲ ಅಗೆಯುತ್ತಿದ್ದು, ಇದರಿಂದ ಸುರಂಗ ಬಾವಿ (ಕರೇಜ್) ಹಾನಿಯಾಗಿ ನೀರಿನ ಹರಿವಿನ ವ್ಯವಸ್ಥೆ ಅಡ್ಡಿಪಡಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬುಧವಾರ ಅಲಿಯಾಬಾದ್ ಸಮೀಪದ ಕರೇಜ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.

ʼಅನಧಿಕೃತವಾಗಿ ನೆಲ ಅಗೆಯುವುದರಿಂದ ಪುರಾತನ ಕರೇಜ್‌ಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ನೆಲ ಅಗೆಯುವ ಖಾಸಗಿ ವ್ಯಕ್ತಿಗಳಿಗೆ ತಿಳಿಸಿದ ಅವರು ʼಈ ಬಗ್ಗೆ ನಾಳೆ ಸಭೆ ಕರೆದು ಪರಿಶೀಲಿಸಲಾಗುವುದುʼ ಎಂದಿದ್ದಾರೆʼ ಎಂದು ತಿಳಿದು ಬಂದಿದೆ.
ʼಬೀದರ್ ಕರೇಜ್ ಪ್ರವಾಸಿ ಸ್ಥಳವಷ್ಟೇ ಅಲ್ಲ, ಅದು ಅಂತರ್ಜಲಾಶಯ. ದೀರ್ಘಕಾಲೀನ ಯೋಜನೆ ರೂಪಿಸಿ, ಅದನ್ನು ಸಂರಕ್ಷಿಸಬೇಕಿದೆ. ಕರೇಜ್ ಅಭವೃದ್ಧಿಪಡಿಸಿ, ಸಂರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗಿದೆʼ ಎಂದು ವಿನಯ ಮಾಳಗೆ ತಿಳಿಸಿದ್ದಾರೆ.
ʼಕರೇಜ್ ಸಂರಕ್ಷಣೆ ಸಂಬಂಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಸ್ಪಂದಿಸಿ ಭೇಟಿ ನೀಡಿ ಪರಿಶೀಲಿಸಿದ್ದು ಸ್ವಾಗತಾರ್ಹ. ಖಾಸಗಿ ವ್ಯಕ್ತಿಗಳು ಕರೇಜ್ ಹತ್ತಿರ ನೆಲ ಅಗೆಯುತ್ತಿರುವುದನ್ನು ಅವರು ಗಂಭೀರವಾಗಿ ತೆಗೆದುಕೊಂಡಿದ್ದು ಕರೇಜ್ ಸಂರಕ್ಷಣೆ ಹಾಗೂ ಅಭಿವೃದ್ಧಿ ಬಗ್ಗೆ ಆಸಕ್ತಿ ತೋರಿದ್ದಾರೆ. ಭವಿಷ್ಯದ ದೃಷ್ಟಿಯಿಂದ ನೌಬಾದ್-ಅಲಿಯಾಬಾದ್ ಹತ್ತಿರದ ಪುರಾತನ ʼಕರೇಜ್ʼ ಅಭಿವೃದ್ಧಿಪಡಿಸಿ ವಿಶ್ವ ಪಾರಂಪರಿಕ ತಾಣವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕುʼ ಎಂದು ಕೋರಿದ್ದಾರೆ.
14-15ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ನಿರ್ಮಾಣಗೊಂಡಿರುವ ‘ಕರೇಜ್’ ನಿಜಕ್ಕೂ ಒಂದು ವಿಸ್ಮಯ. ಸುಮಾರು 3 ಕಿ.ಮೀ ಪ್ರದೇಶದವರೆಗೆ ವ್ಯಾಪಿಸಿಕೊಂಡಿದೆ. ಕರೇಜ್ ನಿರ್ವಹಣೆ ಹಾಗೂ ಗಾಳಿ, ಬೆಳಕಿನ ವ್ಯವಸ್ಥೆಗೆ ಅಲ್ಲಲ್ಲಿ 27 ತೆರೆದ ಬಾವಿಗಳನ್ನು (ವೆಂಟ್ಸ್) ನಿರ್ಮಿಸಲಾಗಿದ್ದು. ಈ ಪೈಕಿ 7 ತೆರೆದ ಬಾವಿಗಳನ್ನು ಗುರುತಿಸಲಾಗಿದೆ. 2024ರಲ್ಲಿ ಕರೇಜ್ ಹಾದು ಹೋಗಿರುವ 100 ಮೀಟರ್ ಸುತ್ತಮುತ್ತಲಿನ ಪ್ರದೇಶವನ್ನು ʼಬಫರ್ ಜೋನ್ʼ ಎಂದು ಜಿಲ್ಲಾಡಳಿತ ಗುರುತಿಸಿ ಜಾಗ ಹದ್ದುಬಸ್ತು ಮಾಡಿದೆ.
ಇದನ್ನೂ ಓದಿ : ಬೀದರ್ | ಕೋಟಿ ಖರ್ಚಾದರೂ ಉದ್ಘಾಟನೆಯಾಗದ ಪದವಿ ಕಾಲೇಜು ಹಾಸ್ಟೆಲ್ : ಕುಸಿಯುತ್ತಿದೆ ದಾಖಲಾತಿ
2017ರಲ್ಲಿ ಅಂದಿನ ಜಿಲ್ಲಾಧಿಕಾರಿ ದಿ.ಅನುರಾಗ ತಿವಾರಿ ಅವರು ಮುತುವರ್ಜಿ ವಹಿಸಿ ಕರೇಜ್‌ನಲ್ಲಿ ಹೂಳು ತೆಗೆದು ಅಭಿವೃದ್ಧಿಪಡಿಸಿದರು. ಕಳೆದ ಬಾರಿ ರಾಜ್ಯ ಸರ್ಕಾರ ಬೀದರ್-ವಿಜಯಪುರನಲ್ಲಿರುವ ಪುರಾತನ ಕರೇಜ್ ಅಭಿವೃದ್ಧಿಗಾಗಿ 15 ಕೋಟಿ ಅನುದಾನ ನೀಡಿತು. ಆದರೆ, ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ʼಕರೇಜ್ʼ ಅಭಿವೃದ್ಧಿ ಕನಸಾಗಿಯೇ ಉಳಿದಿದೆ. 2013ರಿಂದ ಬೀದರ್‌ನ ಟೀ ಯುವಾ ತಂಡವು ಕರೇಜ್ ಅಭಿವೃದ್ಧಿ ಮತ್ತು ಸಂರಕ್ಷಣೆ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸಬೇಕೆಂಬ ನಿಟ್ಟಿನಲ್ಲಿ ಶ್ರಮಿಸುತ್ತಿದೆ.





