ಔರಾದ್ ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಾಹಿತ್ಯಿಕ ಚಟುವಟಿಕೆ, ಮಹಾತ್ಮರ ಜಯಂತಿ, ಸನ್ಮಾನ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಇದೀಗ ನೂತನ ವರ್ಷದ ಹೊತ್ತಿನಲ್ಲಿ ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿ ನುಡಿ ತೇರು ಎಳೆಯಲು ಸಿದ್ಧತೆ ನಡೆಸಿದೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತ್ರತ್ವದಲ್ಲಿ ಗುರುವಾರ ಪಟ್ಟಣದ ಕನ್ನಡ ಭವನದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಸಾಹಿತ್ಯಾಸಕ್ತರು, ಚಿಂತಕರು, ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡು ಗಡಿ ಭಾಗದಲ್ಲಿ ಅಕ್ಷರ ಜಾತ್ರೆ ಆಯೋಜನೆಗೆ ನಿರ್ಧರಿಸಿದ್ದು, ಸಾಹಿತ್ಯಾಸಕ್ತರ ವಲಯದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ಒಂದೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಈ ಹಿಂದೆ ಒಂದೇ ಅವಧಿಯಲ್ಲಿ ಮೂರು ತಾಲೂಕು ಸಾಹಿತ್ಯ ಸಮ್ಮೇಳನ, ಒಂದು ವಲಯ ಸಮ್ಮೇಳನ ನಡೆದಿದ್ದವು. 2021ರಲ್ಲಿ ಆರನೇ ತಾಲೂಕು ಸಾಹಿತ್ಯ ಸಮ್ಮೇಳನ ನಡೆದಿತ್ತು. ಬಳಿಕ ರಚನೆಯಾದ ಹೊಸ ತಾಲೂಕು ಕಸಾಪ ಘಟಕದಿಂದ ನುಡಿ ತೇರು ಎಳೆಯಲು ಸಾಧ್ಯವಾಗಲಿಲ್ಲ. ಕಸಾಪ ಘಟಕದ ನಿರಾಸಕ್ತಿ, ಸ್ಥಳೀಯ ಸಂಪನ್ಮೂಲ ಕೊರತೆಯಿಂದ ಸಾಹಿತ್ಯ ಸಮ್ಮೇಳನ ನಡೆಯದೇ ಇರುವುದು ಸಾಹಿತ್ಯ ವಲಯದಲ್ಲಿ ಸಹಜವಾಗಿ ಅಸಮಧಾನ ಉಂಟಾಗಿತ್ತು.
2004 ರಿಂದ 2021ರವರೆಗೆ ತಾಲೂಕಿನಲ್ಲಿ ಒಟ್ಟು ಆರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು ಐತಿಹ್ಯ. ಕಳೆದ 21 ವರ್ಷದಲ್ಲಿ ಇಲ್ಲಿಯವರೆಗೆ ಕೇವಲ ಆರು ಸಮ್ಮೇಳನ ಮಾತ್ರ ನಡೆದಿವೆ. 2004ರಲ್ಲಿ ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ಬಸವರಾಜ ಸ್ವಾಮಿ ಹೆಡಗಾಪುರ ಅವಧಿಯಲ್ಲಿ ಅಂದಿನ ಶಾಸಕ ಗುಂಡಪ್ಪ ವಕೀಲ ಅವರ ನೇತ್ರತ್ವದಲ್ಲಿ ಪ್ರಥಮ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯಿತು.
ಬಳಿಕ ಏಳು ವರ್ಷದ ನಂತರ ಬಳಿಕ ಶಾಸಕ ಪ್ರಭು ಚವ್ಹಾಣ ಅವರ ನೇತ್ರತ್ವದಲ್ಲಿ 2011ರಲ್ಲಿ ದ್ವಿತೀಯ ಸಾಹಿತ್ಯ ಸಮ್ಮೇಳನ ಜರುಗಿತು. ನಂತರ 2014, 2017, 2018 ಹಾಗೂ 2021ರಲ್ಲಿ ಗಡಿಯಲ್ಲಿ ಸಾಹಿತ್ಯ ಜಾತ್ರೆ ನಡೆದವು. ಜೊತೆಗೆ ತಾಲೂಕಿನ ಯನಗುಂದಾ, ಜಮಗಿಯಲ್ಲಿ ವಲಯ ಸಾಹಿತ್ಯ ಸಮ್ಮೇಳನ ನಡೆಸಿ ಗಡಿ ಭಾಗದ ಜನರಲ್ಲಿ ಕನ್ನಡ ನಾಡು-ನುಡಿ-ಭಾಷೆ, ಸಂಸ್ಕೃತಿ ಅಭಿಮಾನ ಬಿತ್ತುವ ಕಾರ್ಯ ನಡೆಯಿತು.

ಇಲ್ಲಿಯವರೆಗೆ ಜರುಗಿದ 6 ಕನ್ನಡ ಸಾಹಿತ್ಯ ಸಮ್ಮೇಳನ ವಿವರ ಹೀಗಿದೆ :
2004ರಲ್ಲಿ ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ಬಸವರಾಜ ಸ್ವಾಮಿ ಅವರ ನೇತ್ರತ್ವದಲ್ಲಿ ಸಿದ್ದರಾಮ ಶರಣರು ಬೆಲ್ದಾಳ ಸರ್ವಾಧ್ಯಕ್ಷತೆಯಲ್ಲಿ ಔರಾದ್ ಪಟ್ಟಣದಲ್ಲಿ ನಡೆಯಿತು. 2011ರಲ್ಲಿ ಠಾಣಾಕುಶನೂರ ಮೂಲದ ಡಾ.ರಾಜೇಂದ್ರ ಯರನಾಳೆ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಔರಾದ್‌ನಲ್ಲಿ ನುಡಿ ಜಾತ್ರೆ ಜರುಗಿತು. ಆಗ ಪ್ರಶಾಂತ ಮಠಪತಿ ಔರಾದ ಕಸಾಪ ಅಧ್ಯಕ್ಷರಾಗಿದ್ದರು. 2014ರಲ್ಲಿ ಔರಾದ ಪಟ್ಟಣದಲ್ಲಿ ಜರುಗಿದ ಮೂರನೇ ಸಾಹಿತ್ಯ ಸಮ್ಮೇಳನವು ಚಂದ್ರಕಾಂತ ನಿರ್ಮಳೆ ಅವರ ಸಾರಥ್ಯದಲ್ಲಿ ನಡೆಯಿತು. ಆವಾಗ ಔರಾದ್ ಪಟ್ಟಣದ ಶಿವಕುಮಾರ ಕಟ್ಟೆ ಅವರನ್ನು ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಮೂರು ಸಮ್ಮೇಳನ ಎರಡು ದಿನಗಳ ಕಾಲ ಅರ್ಥಪೂರ್ಣವಾಗಿ ಜರುಗಿದವು. ಆಗ ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆ ಅವರು ಕಸಾಪ ಜಿಲ್ಲಾಧ್ಯಕ್ಷರಾಗಿದ್ದರು.
ಕಸಾಪ ಜಿಲ್ಲಾ ಘಟಕಕ್ಕೆ ಸುರೇಶ ಚನ್ನಶೆಟ್ಟಿ ಅವರು ಜಿಲ್ಲಾಧ್ಯಕ್ಷರಾದ ಬಳಿಕ ಜಗನ್ನಾಥ ಮೂಲಗೆ ಅವರು ಔರಾದ ತಾಲೂಕು ಕಸಾಪ ಅಧ್ಯಕ್ಷರಾಗಿ ನೇಮಕರಾದರು. ತಾಲೂಕು ಕೇಂದ್ರ ಹೊರತುಪಡಿಸಿ ಬೇರೆಡೆ ಮಾಡಬೇಕೆಂಬ ಉದ್ದೇಶದಿಂದ ಜಗನ್ನಾಥ ಮೂಲಗೆ ಅವರ ಅವಧಿಯಲ್ಲಿ 2017ರಲ್ಲಿ ಠಾಣಾಕುಶನೂರನಲ್ಲಿ ಸಮ್ಮೇಳನ ನಡೆಯಿತು. ಕಮಲನಗರದ ಬಾ.ನಾ.ಸೋಲಾಪುರೆ ಅವರ ಸರ್ವಾಧ್ಯಕ್ಷರಾಗಿದ್ದರು. 2018ರಲ್ಲಿ ಸಂತಪೂರನ ಚನ್ನಬಸವ ಹೇಡೆ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ನೇಮಿಸಿ ಗಡಿಗ್ರಾಮ ಚಿಂತಾಕಿಯಲ್ಲಿ ಐದನೇ ಸಮ್ಮೇಳನ ನಡೆಸಲಾಯಿತು. 2021ರಲ್ಲಿ ಮತ್ತೆ ಔರಾದ್ ಪಟ್ಟಣದಲ್ಲಿ ಆರನೇ ಅಕ್ಷರ ಜಾತ್ರೆ ನೆರವೇರಿತು. ಸಂತಪೂರ ಗ್ರಾಮದ ಸಂಜುಕುಮಾರ ಜುಮ್ಮಾ ಅವರ ಸರ್ವಾಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನಡೆಯಿತು.
ಔರಾದ್ ತಾಲೂಕು ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಇಲ್ಲಿ ಮರಾಠಿ, ತೆಲುಗು ಮಾತನಾಡುವವರ ಸಂಖ್ಯೆ ವಿರಳವಾಗಿದೆ. ಆದರೂ ಇಲ್ಲಿ ಕನ್ನಡವೇ ಸಾರ್ವಭೌಮ. ಮರಾಠಿ ಭಾಷೆಯ ಪ್ರಭಾವದೊಳಗೂ ಇಲ್ಲಿನ ಜನರ ಕನ್ನಡಾಭಿಮಾನ ಅನನ್ಯ. ಇನ್ನು ಗಡಿ ಭಾಗದ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆ ಪ್ರಬಲವಾಗಬೇಕು. ಕನ್ನಡ ಮಾಧ್ಯಮಗಳಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆ ಭರ್ತಿ ಮಾಡುವುದು, ಕನ್ನಡ ಭಾಷೆ, ಕಲೆ, ಸಾಹಿತ್ಯಕ್ಕಾಗಿ ಕೆಲಸ ಮಾಡುವ ಸಂಘ-ಸಂಸ್ಥೆಗಳಿಗೆ ಸರ್ಕಾರದ ಅನುದಾನ ಮೀಸಲಿಡುವುದು, ಗಡಿ ಭಾಗದ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ನೀಡಿ ಆಧುನಿಕ ಸ್ಪರ್ಶ ನೀಡುವುದು. ಸ್ಥಳೀಯ ಹೊಸ ತಲೆಮಾರಿನ ಕಲಾ, ಸಾಹಿತಿ ಸೇರಿದಂತೆ ಸಾಹಿತ್ಯಾಸಕ್ತರನ್ನು ಗುರುತಿಸುವ ಕೆಲಸ ಆಗಬೇಕೆಂಬುದು ಗಡಿ ಕನ್ನಡಿಗರ ಒತ್ತಾಸೆ.
ಜನವರಿಯಲ್ಲಿ ಸಮ್ಮೇಳನ !
ಔರಾದ್ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು 2026ರ ಜನವರಿ ತಿಂಗಳ ಕೊನೆ ವಾರದಲ್ಲಿ ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕೆಂದು ಪೂರ್ವಭಾವಿ ಸಭೆಯಲ್ಲಿ ಚರ್ಚೆಯಾಯಿತು. ಸ್ಥಳೀಯ ಶಾಸಕರಾದ ಪ್ರಭು ಬಿ.ಚವ್ಹಾಣ ಅವರೇ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ನೇಮಕವಾಗುವುದು ಬಹುತೇಕ ಖಚಿತ. ಹೀಗಾಗಿ ಕಸಾಪ ತಾಲೂಕು ಘಟಕ ಶಾಸಕರನ್ನು ಭೇಟಿಯಾಗಿ ಜನವರಿ ತಿಂಗಳ ಕೊನೆ ವಾರದಲ್ಲಿ ಸಮ್ಮೇಳನ ನಡೆಸುವ ಸಂಬಂಧ ಚರ್ಚಿಸಿ ದಿನಾಂಕ ನಿಗದಿಪಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಯಾರಿಗೆ ಸರ್ವಾಧ್ಯಕ್ಷತೆ ಪಟ್ಟ?
ಗಡಿ ಭಾಗದಲ್ಲಿ ಕಲೆ, ಸಾಹಿತ್ಯ, ಭಾಷೆ ಸೇರಿದಂತೆ ಕನ್ನಡ ನಾಡು-ನುಡಿಗಾಗಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಸ್ಥಳೀಯ ಮಹನೀಯರನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಯಾರ ಒತ್ತಡಕ್ಕೆ ಮಣಿದು ಏಕಪಕ್ಷೀಯ ನಿರ್ಧಾರ ಕೈಗೊಂಡು ಸರ್ವಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಬಾರದು. ಒಂದು ವೇಳೆ ಹಾಗೇ ನಡೆದರೆ ಸಮ್ಮೇಳನದಿಂದ ದೂರ ಉಳಿಯುತ್ತೇವೆ ಎಂದು ಸಭೆಗೆ ಕೆಲವರು ಖಾರವಾದ ಹೇಳಿದರು.
ಈ ಹಿಂದೆ ತಾಲೂಕಿನಲ್ಲಿ ಜರುಗಿದ ಆರು ಸಮ್ಮೇಳಗಳಲ್ಲಿ ನಾಲ್ಕು ಔರಾದ್ ಪಟ್ಟಣದಲ್ಲಿ ಜರುಗಿದವು. ಮೂರು ವಲಯ ಮಟ್ಟದ ಸಮ್ಮೇಳನ ಭವಾನಿ ದಾಬಕಾ, ಠಾಣಾ ಕುಶನೂರ ಹಾಗೂ ಚಿಂತಾಕಿ ಹೋಬಳಿ ಕೇಂದ್ರಗಳಲ್ಲಿ ನಡೆದವು. ಈಗ ನಡೆಸಲು ಉದ್ದೇಶಿಸಿರುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲಿ ಆಯೋಜಿಸಬೇಕು ಎಂಬ ಪ್ರಶ್ನೆ ಚರ್ಚೆಗೆ ಬಂತು. ಅದಕ್ಕೆ ಶಿಕ್ಷಕ ಗುರುನಾಥ ದೇಶಮುಖ ಮತ್ತಿತರರು ಮಾತನಾಡಿ, ʼಈ ಬಾರಿಯ ಸಮ್ಮೇಳನ ಸಂತಪೂರ ಹೋಬಳಿ ಕೇಂದ್ರದಲ್ಲಿ ಆಯೋಜಿಸಬೇಕು. ಈ ಹಿಂದೆ ಅಲ್ಲಿಯೇ ನಡೆಸಬೇಕೆಂಬುದು ಉದ್ದೇಶಿಸಿದರೂ ಆಗಲಿಲ್ಲ, ಈಗಲಾದರೂ ನಡೆಸಬೇಕುʼ ಎಂದು ಪ್ರತಿಪಾದಿಸಿದರು.
ಅದಕ್ಕೆ ಸಂಘಟಕರು ಪ್ರತಿಕ್ರಿಯಿಸಿ ʼಮುಂದಿನ ದಿನಗಳಲ್ಲಿ ಸಂತಪೂರನಲ್ಲಿ ಮಾಡೋಣ, ಸದ್ಯಕ್ಕೆ ಔರಾದ್ ಪಟ್ಟಣದಲ್ಲಿ ನಡೆಸಿದರೆ ಎಲ್ಲ ರೀತಿಯ ಸಹಕಾರ, ಜನಬೆಂಬಲ ದೊರಕಿ ಅಭೂತಪೂರ್ವ ಯಶಸ್ಸು ಸಾಧ್ಯ. ಕಳೆದ ಬಾರಿ ನಡೆದಂತೆ ಪಟ್ಟಣದ ಗುರುಪ್ಪಾದಪ್ಪಾ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಆಯೋಜಿಸೋಣʼ ಎಂದು ನಾಗರಿಕ ಸಮಿತಿ ಮುಖಂಡ ಶಿವರಾಜ ಅಲ್ಮಾಜೆ ಸೇರಿದಂತೆ ಉಳಿದ ಸಂಘಟಕರು ಅಭಿಪ್ರಾಯಪಟ್ಟರು. ಅದಕ್ಕೆ ಎಲ್ಲರೂ ಸಹಮತ ಸೂಚಿಸಿ, ಔರಾದ್‌ನಲ್ಲಿಯೇ ಆಯೋಜಿಸುವ ನಿರ್ಣಯ ಫಲಿಸಿತು.

ಯಾವುದೇ ಸಾಹಿತ್ಯ ಸಮ್ಮೇಳನ ಎಂದಾಕ್ಷಣ ಅಲ್ಲಿನ ಕೇಂದ್ರಬಿಂದು ಸಮ್ಮೇಳನ ಸರ್ವಾಧ್ಯಕ್ಷರು ಯಾರು ಎಂಬ ಮಾತು ಬಹು ಕುತೂಹಲ ಮೂಡಿಸಿ, ಚರ್ಚೆಗೆ ಒಳಪಡುವುದು ನಿರೀಕ್ಷಿತ. ಇಲ್ಲಿಯ ಪೂರ್ವಭಾವಿ ಸಭೆಯಲ್ಲಿ ನಿರೀಕ್ಷೆಯಂತೆ ಸರ್ವಾಧ್ಯಕ್ಷ ಆಯ್ಕೆ ವಿಚಾರ ಚರ್ಚೆಗೆ ಒಳಪಟ್ಟಿತ್ತು. ಈ ಹಿಂದೆ ಕೆಲ ಸಮ್ಮೇಳನಗಳಲ್ಲಿ ಏಕಪಕ್ಷೀಯ ನಿರ್ಧಾರದಿಂದ ಆಯ್ಕೆ ಪ್ರಕ್ರಿಯೆ ನಡೆದಿದೆ. ಈಗ ಹಾಗಾಗಲು ನಾವು ಒಪ್ಪುವುದಿಲ್ಲ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿ, ಸಭೆಯಲ್ಲಿ ಚರ್ಚಿಸಿ, ಪಟ್ಟಿ ಮಾಡಿದ ಹೆಸರನ್ನೇ ಪರಿಗಣಿಸಿ ಆಯ್ಕೆ ನಡೆಯಬೇಕೆಂಬುದು ಎಲ್ಲರೂ ಒತ್ತಾಯಿಸಿದರು.
ಕಸಾಪ ತಾಲೂಕಾಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, ʼಈ ಸಭೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷತೆ ಆಯ್ಕೆ ಪ್ರಕ್ರಿಯೆ ಮಾಡಲು ಅವಕಾಶ ಇಲ್ಲ. ಯಾರಿಗೆ ಆಯ್ಕೆ ಮಾಡಬೇಕೆಂಬುದು ಎಲ್ಲರೂ ಮುಕ್ತವಾಗಿ ಹೆಸರು ಸೂಚಿಸಿ, ಅದನ್ನು ಜಿಲ್ಲಾಧ್ಯಕ್ಷರ ನೇತ್ರತ್ವದಲ್ಲಿ ನಡೆಯುವ ಕಾರ್ಯಕಾರಿ ಸಭೆಯಲ್ಲಿ ಪರಿಶೀಲಿಸಿ ಸೂಕ್ತ ವ್ಯಕ್ತಿಯನ್ನೇ ಆಯ್ಕೆ ಮಾಡಲಾಗುವುದುʼ ಎಂದು ತಿಳಿಸಿದರು.
ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಕಾರ್ಯಗಳಿಗಾಗಿ ಶ್ರಮಿಸಿದ ಹಿಂದಿನ ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಜಗನ್ನಾಥ ಮೂಲಗೆ ಅವರನ್ನು ಸರ್ವಾಧ್ಯಕ್ಷತೆ ಮಾಡಬೇಕೆಂಬುದು ಚರ್ಚೆಗೆ ಬಂತು, ಇನ್ನು ಸಾಹಿತ್ಯ ರಚನೆ ಸೇರಿದಂತೆ ಸಾಮಾಜಿಕ, ಶೈಕ್ಷಣಿಕವಾಗಿ ಸೇವೆಗೈದ ಡಾ.ಮನ್ಮಥ ಡೋಳೆ ಅವರನ್ನು ಆಯ್ಕೆ ಮಾಡಬೇಕೆಂಬುದು ಹೆಸರು ಸೂಚಿಸಿದರು. ಈ ಭಾಗದಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ಗಡಿ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿರುವ ಶರಣಪ್ಪ ಚಿಟಮೆ ಹಾಗೂ ಮನ್ಮಥ ಸ್ವಾಮಿ ಅವರನ್ನು ಸಮ್ಮೇಳನ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ವಿಷಯಗಳು ಸಭೆಯಲ್ಲಿ ಚರ್ಚಿತವಾದವು.
ಮಹಿಳೆಯರಿಗೂ ಸಿಗಲಿ ಪ್ರಾತಿನಿಧ್ಯ :
ಈ ಭಾಗದಲ್ಲಿ ಇಲ್ಲಿಯವರೆಗೆ ಆರು ಸಮ್ಮೇಳನ ಜರುಗಿವೆ. ಆದರೆ ಆರು ಸಮ್ಮೇಳನಗಳಲ್ಲಿ ಪುರುಷರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉದ್ದೇಶಿಸಿದ ಏಳನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಕೂಗು ಕೇಳಿ ಬಂದಿತು.

ಅದಕ್ಕೆ ಕಸಾಪ ಗೌರವಾಧ್ಯಕ್ಷರಾದ ಡಾ.ವೈಜಿನಾಥ ಬುಟ್ಟೆ ಅವರು ಪ್ರತಿಕ್ರಿಯಿಸಿ, ʼಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡುವುದು ನಮ್ಮೆಲ್ಲರ ಕರ್ತವ್ಯ. ಒಂದು ವೇಳೆ ಮಹಿಳೆಯರಿಗೆ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದಾದರೆ ನಿವೃತ್ತ ಪ್ರಾಚಾರ್ಯರಾದ ಜಗದೇವಿ ತೇಲಿ ಅವರನ್ನು ಆಯ್ಕೆ ಮಾಡಬೇಕುʼ ಎಂದು ಸೂಚಿಸಿದರು.
ಸಮ್ಮೇಳನ ಹೀಗಿರಲಿ :
ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ಅಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪರಂಪರೆ, ಸ್ಥಳೀಯ ಸಮಸ್ಯೆಗಳ ಮೇಲೆ ಗಂಭೀರವಾದ ಚರ್ಚೆ ನಡೆಯಬೇಕು. ಅಲ್ಲದೆ ಸ್ಥಳೀಯ ಕವಿ, ಲೇಖಕ, ಕಲಾವಿದರನ್ನು ಗುರುತಿಸುವ ಬಗ್ಗೆ ಮಹತ್ವದ ನಿರ್ಣಯ ಮಂಡನೆಯಾಗಬೇಕು. ಸಮ್ಮೇಳನಗಳಲ್ಲಿ ಚರ್ಚಿತ ವಿಷಯಗಳು ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯುವಲ್ಲಿ ಇಚ್ಚಾಶಕ್ತಿ ತೋರುವ ಮುಖಾಂತರ ಪರಿಹಾರಕ್ಕೆ ಹಕ್ಕೊತ್ತಾಯ ನಡೆಸುವ ಕೆಲಸಗಳಾದರೆ ಮಾತ್ರ ಕನ್ನಡ ನುಡ-ಸಂಸ್ಕೃತಿ ಬೆಳೆಯಲು, ಸಮ್ಮೇಳನ-ಸಮಾರಂಭಗಳ ಸಾರ್ಥಕವೂ ಹೌದು.
ʼಸಾಹಿತ್ಯಿಕ ಸಮ್ಮೇಳನಗಳಲ್ಲಿ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಹೊರತರುವುದು ಪ್ರತೀತಿ ಇದೆ. 2021ರಲ್ಲಿ ನಡೆದ ಆರನೇ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಆಗಲಿಲ್ಲ. ಈಗ ನಡೆಯುವ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಬೇಕು. ಇಲ್ಲಿನ ನಾಡು-ನುಡಿ, ಕಲೆ, ಸಾಹಿತ್ಯ, ಕೃಷಿ, ಶಿಕ್ಷಣ, ವೈದ್ಯಕೀಯ, ವಿಜ್ಞಾನ ಸೇರಿ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಸಾರಸಂಗ್ರಹ ಮಾಡುವ ಕಾರ್ಯ ಆಗಬೇಕು. ಇದರಿಂದ ಸ್ಥಳೀಯ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸವೂ ಆಗಲಿದೆʼ ಎಂದು ಸಾಹಿತ್ಯಾಸಕ್ತರು ಸಭೆಗೆ ತಿಳಿಸಿದರು.
ಎರಡು ದಿನಗಳ ಸಮ್ಮೇಳನ ಅರ್ಥಪೂರ್ಣ :
ಈ ಹಿಂದೆ ನಡೆದ ಆರು ಸಮ್ಮೇಳನಗಳಲ್ಲಿ ಮೊದಲ ಮೂರು ಸಮ್ಮೇಳನ ಔರಾದ್ ಪಟ್ಟಣದ ಅಮರೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಮಂಟಪ ನಿರ್ಮಿಸಿ ಎರಡು ದಿನಗಳ ಅದ್ಧೂರಿ, ಅಷ್ಟೇ ಅರ್ಥಪೂರ್ಣವಾಗಿ ನಡೆದವು. ಬಳಿಕ ನಡೆದ ಮೂರು ಸಮ್ಮೇಳನ ಒಂದೇ ದಿನಕ್ಕೆ ಸೀಮಿತವಾದವು.
ʼಎರಡು ದಿನಗಳ ಸಮ್ಮೇಳನ ಆಯೋಜಿಸಿದರೆ ಮೆರವಣಿಗೆ, ವಿಶೇಷ ಉಪನ್ಯಾಸ ಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಲಾ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮ ಸುಸೂತ್ರವಾಗಿ ನಡೆಸಿದರೆ ಸಮ್ಮೇಳನ ಅರ್ಥಪೂರ್ಣ ಎನಿಸುತ್ತದೆ. ಒಂದು ದಿನದ ಸಮ್ಮೇಳನ ಆಯೋಜಿಸಿದರೆ ಮೆರವಣಿಗೆ, ಉದ್ಘಾಟನೆಗೆ ಅರ್ಧ ದಿನ ಬೇಕು. ನಿಗದಿತ ಸಮಯಕ್ಕೆ ಗೋಷ್ಠಿಗಳು ಆರಂಭವಾಗದಕ್ಕೆ ಗಡಿಭಾಗದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಆಹ್ವಾನಿತ ಉಪನ್ಯಾಸಕರನ್ನು ಸಮಯ ಅಭಾವ ಉಂಟಾಗುವ ಸಾಧ್ಯತೆ ಇರುತ್ತದೆ. ಆಗ ಅಂದಕೊಂಡಂತೆ ಸಮ್ಮೇಳನ ಯಶಸ್ಸಿನ ನಿರೀಕ್ಷೆ ಹುಸಿಯಾಗಬಹುದುʼ ಎಂದು ಹಿರಿಯ ಸಾಹಿತಿಗಳೊಬ್ಬರು ಹೇಳುತ್ತಾರೆ.

ಮೊದಲಿನಂತೆ ಎರಡು ದಿನಗಳ ಸಾಹಿತ್ಯ ಸಮ್ಮೇಳನ ಆಯೋಜಿಸಿದರೆ ಅಧಿಕ ವೆಚ್ಚದ ಹೊರೆಯಾಗುವ ಮುನ್ಸೂಚನೆ ಹಿನ್ನೆಲೆ ಈಗ ಸಮ್ಮೇಳನ ಒಂದು ದಿನಕ್ಕೆ ಸೀಮಿತಗೊಳಿಸಲಾಗುತ್ತಿದೆ ಎಂಬುದು ಬಹುತೇಕರ ಅಭಿಪ್ರಾಯ. ಒಟ್ಟಾರೆ ಗಡಿ ಭಾಗದಲ್ಲಿ ಬಹುದಿನಗಳ ನಂತರ ʼಕನ್ನಡ ಡಿಂಡಿಮʼ ಮೊಳಗಿಸಲು ಸಾಹಿತ್ಯಾಭಿಮಾನಿಗಳು, ಕನ್ನಡಪರ ಮನಸ್ಸುಗಳು ಉತ್ಸಾಹದಿಂದ ಸಜ್ಜಾಗುತ್ತಿರುವುದು ಹೊಸ ಆಶಾಭಾವನೆ ಮೂಡಿಸಿದೆ.
ಇದನ್ನೂ ಓದಿ : ಔರಾದ್ ಸೀಮೆಯ ಕನ್ನಡ | ದನ ಕಾಯೋರು ತಿಂಗಳಿಗೆ ಪಗಾರ್ ಎಷ್ಟು ತಕೋತಾರ್ ಗೊತ್ತಾ!
ಪೂರ್ವಭಾವಿ ಸಭೆಯಲ್ಲಿ ಪ್ರಮುಖರಾದ ಪಂಡರಿ ಆಡೆ, ಜಗನ್ನಾಥ ಮೂಲಗೆ, ಬಾಲಾಜಿ ಕುಂಬಾರ, ಚಂದ್ರಕಾಂತ ಘುಳೆ, ರಾಜಕುಮಾರ ಡೊಂಗರೆ, ಶಿವರಾಜ ಶಟಕಾರ, ಜಗನ್ನಾಥ ದೇಶಮುಖ, ಗುರುನಾಥ ದೇಶಮುಖ, ಸಂಜೀವ ಶಟಕಾರ ಅಶೋಕ ಶೆಂಬೆಳ್ಳೆ, ಅಮರಸ್ವಾಮಿ ಸ್ಥಾವರಮಠ, ಬಸವರಾಜ ಶಟಕಾರ, ಅಮೃತರಾವ ಬಿರಾದಾರ, ಕೈಲಾಸಪತಿ ಕೇದಾರೆ,,ಸುಭಾಷ ಲಾಧಾ, ವಿರೇಶ ಅಲಮಾಜೆ, ರವಿ ಡೋಳೆ, ಶಿವಕುಮಾರ ಪಾಟೀಲ್, ತುಳಸಿರಾಮ ಬೇಂದ್ರೆ, ರಾಹುಲ ಖಂದಾರೆ, ಸಂತೋಷ ಶಿಂಧೆ, ಆನಂದ ದ್ಯಾಡೆ, ಅಂಬಾದಾಸ ನೆಳಗೆ, ಜ್ಞಾನೇಶ್ವರ ವಾಡೆಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




