ಕಾರಂಜಾ ಜಲಾಶಯ ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಮಾನವೀಯತೆಯ ಮಾನದಂಡ ಹಾಗೂ ವೈಜ್ಞಾನಿಕ ಆಧಾರದ ಮೇಲೆ ಸಮರ್ಪಕ ಪರಿಹಾರ ವಿತರಿಸಬೇಕೆಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯು ಒತ್ತಾಯಿಸಿದೆ.
ಬೇಡಿಕೆಗೆ ಸಂಬಂಧಿಸಿ ರಾಜ್ಯ ಸರ್ಕಾರ ರಚಿಸಿರುವ ಉನ್ನತ ಮಟ್ಟದ ತಾಂತ್ರಿಕ ಸಮಿತಿಯ ವರದಿಯನ್ನು ಆಧರಿಸಿ, ಸಂತ್ರಸ್ತರಿಗೆ ಕಾಲಮಿತಿಯಲ್ಲಿ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ್ ಜಿಲ್ಲಾ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ನಿಯೋಗವು ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ನಿವಾಸಕ್ಕೆ ಭೇಟಿ ನೀಡಿ ಮನವಿ ಪತ್ರವನ್ನು ಸಲ್ಲಿಸಿದೆ.
ʼಕಾರಂಜಾ ಸಂತ್ರಸ್ತರ ದೀರ್ಘಕಾಲದ ಹೋರಾಟವನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತಾಂತ್ರಿಕ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯ ಅಧಿಕೃತ ವರದಿಯನ್ನು 2025ರ ಡಿಸೆಂಬರ್ ಅಂತ್ಯದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ವರದಿ ಈಗಾಗಲೇ ಸರ್ಕಾರದ ಕೈ ಸೇರಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತರಿಗೆ ಪರಿಹಾರ ವಿತರಿಸಬೇಕುʼ ಎಂದು ಒತ್ತಾಯಿಸಿದರು.
ಸಂತ್ರಸ್ತರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಅವರು ಕಾರಂಜಾ ಸಂತ್ರಸ್ತರ ಸಮಸ್ಯೆಯ ಬಗ್ಗೆ ತಾವು ವಿಶೇಷ ಕಾಳಜಿ ವಹಿಸಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ : ಬೀದರ್ | ಫೆ.3ರಂದು SIR ವಿರೋಧಿಸಿ ಚಿಂತನ-ಮಂಥನ ಸಮಾವೇಶ
ನಿಯೋಗದಲ್ಲಿ ಪ್ರಮುಖರಾದ ರಾಜಪ್ಪ ಕಮಲಪೂರೆ, ಡಾ.ರಾಜಶೇಖರ ರಂಜೋಳ, ಮಾದಪ್ಪ ಕೌದೆ, ಇಸೂಫ್‌ಮಿಯ್ಯಾ ರೇಕುಳಗಿ, ಮಹಮ್ಮದ್ ಸೋಲಾಪೂರೆ, ಮಹೇಶ ಕಮಲಪೂರೆ, ಚಂದ್ರಶೇಖರ ಮುತ್ತಣ್ಣ, ಶಂಕರೆಪ್ಪ ಮೂಲಗಿ, ಲಕ್ಷ್ಮೀ ಕೌದೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





