ಕರ್ನಾಟಕದ ಯುವಜನರ ಹಿತಾಸಕ್ತಿ ರಕ್ಷಣೆ ಹಾಗೂ ಅವರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ತಕ್ಷಣವೇ ‘ಕರ್ನಾಟಕ ರಾಜ್ಯ ಯುವ ಆಯೋಗʼವನ್ನು ಸ್ಥಾಪಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಸಂಘಟನೆ ಒತ್ತಾಯಿಸಿದೆ.
ಈ ಸಂಬಂಧ ಸಂಘಟನೆಯ ಪ್ರಮುಖರು ಜಿಲ್ಲೆಯ ಬೀದರ್, ಹುಲಸೂರು, ಹುಮನಾಬಾದ್, ಚಿಟಗುಪ್ಪಾ ಮತ್ತು ಬಸವಕಲ್ಯಾಣದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ʼಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಯುವ ಆಯೋಗವನ್ನು ತಕ್ಷಣ ಸ್ಥಾಪಿಸಬೇಕೆಂಬ ಬೇಡಿಕೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಸಂಘಟನೆಯು ರಾಜ್ಯಾದ್ಯಂತ ಸಂಘಟಿತ, ಸಂವಿಧಾನಾತ್ಮಕ ಹಾಗೂ ಪ್ರಜಾಪ್ರಭುತ್ವಾತ್ಮಕ ರೀತಿಯಲ್ಲಿ ಹೋರಾಟ ನಡೆಸುತ್ತಿದೆ. 2023ರ ವಿಧಾನಸಭಾ ಚುನಾವಣೆಯ ವೇಳೆ ರಾಜ್ಯ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಒತ್ತಾಯಿಸುವ ಉದ್ದೇಶದಿಂದ, ಯುವಕರ ಶಿಕ್ಷಣ, ಉದ್ಯೋಗ, ಮಾನಸಿಕ ಆರೋಗ್ಯ, ಸಾಮಾಜಿಕ ನ್ಯಾಯ ಮತ್ತು ಪ್ರತಿನಿಧಿತ್ವದಂತಹ ಗಂಭೀರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಚಳವಳಿ ನಡೆಯುತ್ತಿದೆʼ ಎಂದರು.

ಯುವ ಆಯೋಗ ಸ್ಥಾಪಿಸುವ ಸಂಬಂಧ ರಾಜ್ಯ ಮಟ್ಟದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದೆ. ರಾಜ್ಯದ 34 ಸಚಿವರಲ್ಲಿ 33 ಸಚಿವರನ್ನು ನೇರವಾಗಿ ಭೇಟಿ ನೀಡಿ ಮನವರಿಕೆ ಮಾಡಲಾಗಿದೆ. 7 ಪ್ರಮುಖ ಸಂವಿಧಾನಿಕ ಹಾಗೂ ರಾಜಕೀಯ ಹುದ್ದೆಯುಳ್ಳ ಪ್ರಮುಖರಿಗೆ ಭೇಟಿಯಾಗಿ ಚರ್ಚೆ ನಡೆಸಲಾಗಿದೆ. ಬರುವ ಬಜೆಟ್ ಅಧಿವೇಶನದಲ್ಲೇ ಕರ್ನಾಟಕ ರಾಜ್ಯ ಯುವ ಆಯೋಗದ ಘೋಷಣೆ ಮಾಡಬೇಕುʼ ಎಂದು ಆಗ್ರಹಿಸಿದ್ದಾರೆ.
ʼಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಯುವ ಜನಸಂಖ್ಯೆಯಿದ್ದು, ನಿರುದ್ಯೋಗ, ಶಿಕ್ಷಣ ಅಸಮಾನತೆ, ಮಾದಕ ದ್ರವ್ಯಗಳ ದುರುಪಯೋಗ, ಮಾನಸಿಕ ಒತ್ತಡ, ಆತ್ಮಹತ್ಯೆಗಳಂತಹ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸ್ವಾಯತ್ತ, ಶಕ್ತಿಶಾಲಿ ಮತ್ತು ಉತ್ತರದಾಯಕ ಯುವ ಆಯೋಗ ಅನಿವಾರ್ಯವಾಗಿದೆ. ಯುವ ಆಯೋಗವು ಯಾವುದೇ ಸೌಲಭ್ಯವಲ್ಲ, ಅದು ಯುವಕರ ಸಂವಿಧಾನಿಕ ಹಕ್ಕು ಮತ್ತು ರಾಜ್ಯದ ಭವಿಷ್ಯದ ಭದ್ರತೆಗೆ ಅವಿಭಾಜ್ಯ ಅಂಶವಾಗಿದೆʼ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಬೀದರ್ | ಸೂರಿಗಾಗಿ ಈ ಅಲೆಮಾರಿ ಜನಾಂಗ ಇನ್ನೆಷ್ಟು ವರ್ಷ ಹೋರಾಟ ನಡೆಸಬೇಕು?
ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಬೀದರ್ ಜಿಲ್ಲಾಧ್ಯಕ್ಷ ಶೋಯಬ್‌ಉದ್ದೀನ್, ರಫೀ ಉದ್ದೀನ್ ಶೋಯಬ್, ಸೈಯದ್ ಫರಾಜ್ ಅಲಿ ಹಾಗೂ ರಾಜ್ಯ ಕಾರ್ಯದರ್ಶಿ ಅಸದ್‌ಉಲ್ಲಾ ಖಾನ್ ಸೇರಿದಂತೆ ಪ್ರಮುಖರಾದ ರಿಯಾಜುದ್ದೀನ್, ಅಜರ್, ಸಾಹಿಲ್, ಅಲಿಂ ಮತ್ತು ಬಾಬರ್ ಅವರು ಭಾಗವಹಿಸಿದ್ದರು. ಹುಮನಾಬಾದಿನಲ್ಲಿ ತಹಸೀಲ್ದಾರ್ ಶ್ರೀಮತಿ ಅಂಜುಮ್ ತಬಸ್ಸುಮ್ ಅವರ ಮೂಲಕ ಮನವಿ ಸಲ್ಲಿಸಲಾಗಿದ್ದು, ಇಫ್ತೇಕಾರ್ ಅಹ್ಮದ್, ಜಾಕಿರ್ ಸಾಹೇಬ್, ಅಬ್ದುಲ್ ಕರೀಮ್, ಜಹೀರ್ ಸಾಹೇಬ್, ಅಸದ್‌ಉಲ್ಲಾ ಖಾನ್, ಫಿರೋಜ್ ಖಾನ್, ಜಾವೇದ್ ಖುರೇಶಿ, ಮುನವ್ವರ್ ಸಾಗೆ, ರಿಯಾಜ್ ಪಟೇಲ್, ನಗರಾಧ್ಯಕ್ಷ ಅಯ್ಯುಬ್ ಖಾನ್, ಮಾಜಿ ಅಧ್ಯಕ್ಷ ತುಫೇಲ್ ಮೊಹ್ಸಿನ್ ಹಾಗೂ ಕಾರ್ಯಕರ್ತ ಬಿಲಾಲ್ ಮತ್ತಿತರರು ಇದ್ದರು.






