ಕರ್ನಾಟಕ ರಾಜ್ಯದಲ್ಲಿ ಮರ್ಯಾದೆ ಹತ್ಯೆ ತಡೆ ಕಾಯ್ದೆ ಕೂಡಲೇ ಜಾರಿಗೆ ತರುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಯಿತು.
ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಒಕ್ಕೂಟದ ಪದಾಧಿಕಾರಿಗಳು ಮೊದಲಿಗೆ ಹೋರಾಟ ಗೀತೆಗಳು ಹಾಡಿದರು. ಬಳಿಕ ʼಜಾತಿವಾದಿಗಳಿಗೆ ಧಿಕ್ಕಾರʼ, ʼಮರ್ಯಾದೆ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗಲೇಬೇಕುʼ ಎಂಬ ಘೋಷಣೆ ಕೂಗುತ್ತಾ ಭಗತ್ ಸಿಂಗ್ ವೃತ್ತದ ಮಾರ್ಗವಾಗಿ ತಹಸೀಲ್ ಕಚೇರಿಗೆ ತೆರಳಿದರು.
ಪ್ರತಿಭಟನೆ ನೇತ್ರತ್ವ ವಹಿಸಿದ ಹಿರಿಯ ಹೋರಾಟಗಾರ ಬಾಬುರಾವ ಹೊನ್ನಾ ಮಾತನಾಡಿ, ʼಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದಿಂದ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ದಲಿತ ಸಮುದಾಯದ ಹುಡುಗನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವತಿಯ ತಂದೆ ಮಗಳನ್ನು ಕೊಲೆ ಮಾಡಿರುವುದು ಅತ್ಯಂತ ಅಮಾನವೀಯ ಕೃತ್ಯ. ಸಮಸಮಾಜ ರೂಪಿಸಲು ಹೋರಾಡಿದ ಅನೇಕ ಮಾಹಾತ್ಮರ ನೆಲದಲ್ಲಿ ಇಂಥ ಪ್ರಕರಣ ನಡೆದಿರುವುದು ಆತಂಕಕಾರಿಯಾಗಿದೆʼ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಶೀಲಾ ಸಾಗರ ಮಾತನಾಡಿ, ʼದೇಶದಲ್ಲಿ ಇತ್ತೀಚೆಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹುಬ್ಬಳ್ಳಿಯಲ್ಲಿ ಅನ್ಯ ಜಾತಿಯ ಯುವಕನನ್ನು ಮದುವೆ ಆಗಿರುವ ಕಾರಣಕ್ಕೆ ಹೆತ್ತ ಮಗಳನ್ನೇ ತಂದೆ ಕೊಲೆಗೈದ ಘಟನೆ ನಿಜಕ್ಕೂ ಘನಘೋರ. ಇಂತಹ ಘಟನೆ ಮರುಕಳಿಸದಂತೆ ರಾಜ್ಯದಲ್ಲಿ ಕಠಿಣ ಕಾನೂನು ರೂಪಿಸಬೇಕು. ಮಗಳು ʼಮಾನ್ಯʼಳನ್ನು ಕೊಂದಿರುವ ಆರೋಪಿ ತಂದೆಗೆ ಉಗ್ರಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯ, ದೇಶದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತದೆʼ ಎಂದು ಎಚ್ಚರಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಜಗದೀಶ್ವರ ಬಿರಾದರ್, ಓಂಪ್ರಕಾಶ ರೊಟ್ಟೆ, ರಾಜಕುಮಾರ ಮೂಲಭಾರತಿ, ನಿಜಾಮೋದ್ದಿನ್, ಮಹೇಶ ಗೊರನಾಳಕರ್, ಸಂದೀಪ ಕಾಂಟೆ ಮಾತನಾಡಿ, ʼಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಆರು ತಿಂಗಳ ಗರ್ಭಿಣಿ ಮಗಳನ್ನು ತಂದೆಯೊಬ್ಬ ಮೃಗೀಯವಾಗಿ ಕೊಂದಿರುವುದು ತೀವ್ರ ಖಂಡನೀಯ. ಇಂತಹ ಹೇಯ ಕೃತ್ಯವನ್ನು ಜಾತಿವಾದಿ ಸಮಾಜ ಸಮರ್ಥಿಸುತ್ತಿದೆ. ಜಾತಿ ದೌರ್ಜನ್ಯ, ಮರ್ಯಾದೆಗೇಡು ಹತ್ಯೆ ಹಾಗೂ ಜಾತೀಯತೆಯನ್ನು ತೊಡೆದು ಹಾಕಲು ಎಲ್ಲ ಸರ್ಕಾರಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಇಂತಹ ಪ್ರಕರಣ ಮುಂದೆ ರಾಜ್ಯದಲ್ಲಿ ಮತ್ತೆ ಪುನರಾವರ್ತನೆ ಆಗದಂತೆ ಮರ್ಯಾದೆ ಹತ್ಯೆ ತಡೆ ಕಾಯ್ದೆ ಜಾರಿಗೆ ತರಬೇಕುʼ ಎಂದು ಆಗ್ರಹಿಸಿದರು.
ಭಾರತೀಯ ಸಂವಿಧಾನದಲ್ಲಿಯೇ ʼಸಂಗಾತಿಯ ಆಯ್ಕೆʼ ಹಕ್ಕು ಇದೆ. ʼಬಾಳ ಸಂಗಾತಿಯ ಆಯ್ಕೆʼ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಮೂರನೇ ವ್ಯಕ್ತಿಗೆ ಯಾವ ಅಧಿಕಾರವೂ ಇಲ್ಲ. ವಿವಾಹದ ಹಕ್ಕುಗಳಿಗೆ ಚ್ಯುತಿ ಉಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿದೆ. ಜಾತಿ ಪ್ರತಿಷ್ಠೆಗಾಗಿ ಇಂತಹ ಘಟನೆಗಳನ್ನು ಮರುಕಳಿಸುತ್ತಿವೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಮರ್ಯಾದೆ ಕೊಲೆ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ, ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕುʼ ಎಂದು ಒತ್ತಾಯಿಸಿದರು.
ʼಅಂತರಜಾತಿ–ಅಂತರ ಧರ್ಮ ವಿವಾಹವಾದ ದಂಪತಿಗಳಿಗೆ ಪೊಲೀಸ್ ರಕ್ಷಣೆ ಜೊತೆಗೆ ₹10 ಲಕ್ಷ ಪ್ರೋತ್ಸಾಹ ಧನ, ವಾಸಿಸಲು ಮನೆ, ಅರ್ಹತೆ ಆಧಾರದ ಮೇಲೆ ಸರ್ಕಾರಿ ಹುದ್ದೆ ಕೊಡಬೇಕು. ಧಾರ್ಮಿಕ, ಮೂಢ ನಂಬಿಕೆಯ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪ್ರಾಣಿ ಹಿಂಸೆ ತಡೆಯಬೇಕು. ಅಂತಹ ಪ್ರಕರಣ ನಡೆದರೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕುʼ ಎಂದು ಪ್ರತಿಭಟನಾಕಾರರು ಬೇಡಿಕೆಯಿಟ್ಟರು.
ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಇದನ್ನೂ ಓದಿ : ಬೀದರ್ | ಸಾವಿನಲ್ಲಿ ಒಂದಾದ ದಂಪತಿ
ಪ್ರತಿಭಟನೆಯಲ್ಲಿ ಪ್ರಮುಖರಾದ ನಜೀರ್ ಅಹ್ಮದ್, ಎಂ.ಡಿ. ಖಮರ್ ಪಟೇಲ್, ಎಂ.ಡಿ. ಶಫಾಯತ ಅಲಿ, ನಬೀ ಖುರೇಷಿ, ಜೈಶೀಲಕುಮಾರ, ಅರುಣ ಪಟೇಲ್, ರಾಜಕುಮಾರ ಸಿಂಧೆ, ಪ್ರಕಾಶ ರಾವಣ, ಮುಬಶೀರ್ ಸಿಂಧೆ, ವೀರಶೆಟ್ಟಿ ವಟಂಬೆ, ಚಂದ್ರಕಾಂತ ನಿರಾಟೆ, ಜಗನ್ನಾಥ ಹೊನ್ನಾ, ಮಾರುತಿ ಸೂರ್ಯವಂಶಿ, ಅಂಬೇಡ್ಕರ್ ಪಿ.ಬೌದ್ಧೆ, ಪ್ರಭು ತಗಣಿಕರ್, ಖದೀರಮಿಯ್ಯಾ, ರಾಜಕುಮಾರ ಗೂನಳ್ಳಿ, ಪ್ರಭು ಹೊಚಕನಳ್ಳಿ, ಮಲ್ಲಿಕಾರ್ಜುನ ಚಿಟ್ಟಾ, ರವಿರಾಜ ವಾಘಮಾರೆ, ವಸೀಮ್ ಕಿರಮಣಿ, ಸೂರ್ಯಕಾಂತ ಬರದಾಪುರ, ರಾಹುಲ್ ಡಾಂಗೆ, ಶಿವಾನಂದ ದದ್ದಾಪುರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.





