ಪುಸ್ತಕ ಸಂಸ್ಕೃತಿ, ಪುಸ್ತಕೋದ್ಯಮ ಬೆಳವಣಿಗೆಗೆ ಶಿಕ್ಷಣ ಕ್ಷೇತ್ರ ಬಹಳ ಮುಖ್ಯವಾಗಿದೆ. ಆದರೆ, ಸರ್ಕಾರಗಳು ಬರವಣಿಗೆಯನ್ನೇ ಕಡಿತಗೊಳಿಸುವ ಪರೀಕ್ಷಾ ಪದ್ಧತಿ ಅನುಸರಿಸುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯಪಟ್ಟರು.
ಬೀದರ್ ನಗರದ ಸಾಯಿ ಸ್ಕೂಲ್ ಮೈದಾನದಲ್ಲಿ ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜ.24 ರಿಂದ ಮೂರು ದಿನಗಳ ಕಾಲ ಆಯೋಜಿಸಿದ ಪುಸ್ತಕ ಸಂತೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಆಂತರೀಕ ಮೌಲ್ಯಮಾಪನಕ್ಕೆ 20 ಅಂಕ ಇಟ್ಟು ಹಾಗೂ ಪರೀಕ್ಷೆ 13 ಅಂಕ ಬರೆದರೆ ಸಾಕು ಉತೀರ್ಣ ಆಗಬಹುದು ಎಂಬ ಪರೀಕ್ಷಾ ಪದ್ಧತಿಯನ್ನು ತಂದರೆ ಓದುವ ಅಭಿರುಚಿ, ಪುಸ್ತಕ ಸಂಸ್ಕೃತಿ ಹೇಗೆ ಬೆಳೆಸುತ್ತದೆ. ಮಕ್ಕಳು ಮೊದಲು ಓದು-ಬರಹ ಕಲಿಯಬೇಕು. ಅದಕ್ಕೆ ಮೂಲ ಶಿಕ್ಷಣ ಕ್ಷೇತ್ರವಾಗಿದೆ. ನಾವು ಫಲಿತಾಂಶ ದಾಖಲೆ ಮಾಡುವ ಭರದಲ್ಲಿದ್ದೇವೆ. ಆದರೆ, ಮಕ್ಕಳ ಮನಸ್ಸಿನೊಳಗೆ ಪುಸ್ತಕ ಪ್ರೇಮ, ಸಾಮಾಜಿಕ ಬದ್ಧತೆ, ಮಾನವೀಯ ಮೌಲ್ಯ ಬೆಳೆಸುವಲ್ಲಿ ದಾಖಲೆ ಮಾಡಬೇಕಾಗಿದೆʼ ಎಂದರು.
ʼಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಶಿಕ್ಷಣ ಕ್ಷೇತ್ರದಲ್ಲಿ ಜಾತ್ಯತೀತ ಶಿಕ್ಷಕರ ಅಗತ್ಯವಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಸಗಟು ಪುಸ್ತಕಗಳ ಖರೀದಿ ನಡೆದಿಲ್ಲ. ಗ್ರಂಥಾಲಯ ಕೂಡ ಖರೀದಿ ಮಾಡಿಲ್ಲ. ರಾಜ್ಯದಲ್ಲಿ ಗ್ರಂಥಾಲಯಗಳಿಗೆ ಪುಸ್ತಕ ಪೂರೈಸುವ ಇಚ್ಚಾಶಕ್ತಿ ಸರ್ಕಾರ ತೋರಬೇಕು. ಬಜೆಟ್‌ನಲ್ಲಿ ಗ್ರಂಥಾಲಯಗಳಿಗೂ ವಿಶೇಷ ಅನುದಾನ ಮೀಸಲಿಡಬೇಕುʼ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಬೆರಳ ತುದಿಯಲ್ಲಿ ಮಾಹಿತಿ ಸಿಗುವ ಈ ಕಾಲದಲ್ಲಿಯೂ, ಆಳವಾದ ತಿಳುವಳಿಕೆ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಪುಸ್ತಕ ಓದುವಿಕೆಯೇ ನಿಜವಾದ ಮಾರ್ಗ. ಪುಸ್ತಕಗಳು ನಮ್ಮ ಚಿಂತನೆಗೆ ದಿಕ್ಕು ನೀಡುತ್ತವೆ, ಬದುಕಿನ ಮೌಲ್ಯಗಳನ್ನು ಅರಿಯುವ ದೃಷ್ಟಿಯನ್ನು ವಿಸ್ತರಿಸುತ್ತವೆ. ಯುವ ಪೀಳಿಗೆ ದಿನವೂ ಸ್ವಲ್ಪ ಸಮಯವನ್ನು ಓದಿಗೆ ಮೀಸಲಿಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಓದುವ ಸಂಸ್ಕೃತಿ ಬೆಳೆದರೆ ಜ್ಞಾನಸಂಪನ್ನ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣ ಸಾಧ್ಯ’ ಎಂದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ʼಇಂದಿನ ಡಿಜಿಟಲ್ ಯುಗದಲ್ಲಿಯೂ ಪುಸ್ತಕಗಳ ಮಹತ್ವ ಕಡಿಮೆಯಾಗಿಲ್ಲ. ಪುಸ್ತಕ ಓದುವ ಹವ್ಯಾಸವು ಚಿಂತನಾ, ವಿವೇಕ, ಶಕ್ತಿ, ಸಂಸ್ಕಾರ ಹಾಗೂ ಸೃಜನಶೀಲತೆಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ಪುಸ್ತಕಗಳನ್ನು ತಮ್ಮ ಜೀವನದ ಅವಿಭಾಜ್ಯ ಭಾಗವಾಗಿಸಿಕೊಂಡು, ದಿನನಿತ್ಯ ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ಇಂತಹ ಪುಸ್ತಕ ಸಂತೆಗಳು ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ವೇದಿಕೆಗಳಾಗಿವೆʼ ಎಂದರು.
ಇದನ್ನೂ ಓದಿ : ಬೀದರ್ | ʼಮನರೇಗಾʼ ದುರ್ಬಲಗೊಳಿಸಲು ‘ವಿಬಿ-ಜಿ ರಾಮ್ ಜಿ’ ಮಸೂದೆ ಜಾರಿ : ಸಚಿವ ಈಶ್ವರ ಖಂಡ್ರೆ
ಪೌರಾಡಳಿತ ಸಚಿವ ರಹೀಂ ಖಾನ್, ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ವೀರಲೋಕ ಬುಕ್ಸ್‌ನ ವೀರಕಪುತ್ರ ಶ್ರೀನಿವಾಸ, ಪುಸ್ತಕ ಸಂತೆ ಆಯೋಜಕ ಗುರುನಾಥ ರಾಜಗೀರಾ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಸೇರಿದಂತೆ ಅನೇಕರಿದ್ದರು.





