ಕಳೆದ ಮುಂಗಾರು ಹಂಗಾಮಿನಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ಸಂಭವಿಸಿದ ಬೆಳೆ ಹಾಗೂ ಮೂಲಭೂತ ಸೌಕರ್ಯಗಳ ಹಾನಿಯ ಕುರಿತು ಸೋಮವಾರ ಬೀದರ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಸರ್ಕಾರದ ತಂಡಕ್ಕೆ ಜಿಲ್ಲಾಡಳಿತ ಮನವರಿಕೆ ಮಾಡಿಕೊಡಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಕೇಂದ್ರ ಸರಕಾರದ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಜಂಟಿ ಕಾರ್ಯದರ್ಶಿ ರಾಜೀವಕುಮಾರ ನೇತೃತ್ವದ ತಂಡವು ಸೋಮವಾರ ಬೀದರನಲ್ಲಿ ಮುಂಗಾರು ಪ್ರವಾಹದ ಹಾನಿ ಕುರಿತಾದ ಮಾಹಿತಿಯನ್ನು ಪಡೆದರು. ಕೇಂದ್ರ ಸರಕಾರದ ಕೃಷಿ ಹಾಗೂ ಎಣ್ಣೆ ಕಾಳು ಅಭಿವೃದ್ಧಿ ನಿಗಮದ ನಿರ್ದೇಶಕ ಡಾ.ಪೊನ್ನುಸ್ವಾಮಿ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಜಯಶ್ರೀ ಕಕ್ಕರ್ ಉಪಸ್ಥಿತರಿದ್ದರು.
ರಾಜ್ಯ ಸರಕಾರದ ಕಂದಾಯ ಇಲಾಖೆಯ ವಿಪತ್ತು ನಿರ್ವಹಾಣಾ ಪ್ರಧಾನ ಕಾರ್ಯದರ್ಶಿ ಮೌನೀಶ ಮೌದಗೀಲ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಕೇಂದ್ರ ತಂಡಕ್ಕೆ ಮುಂಗಾರು ಮಳೆಯಿಂದಾದ ಹಾನಿಯ ತೀವೃತೆ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಆರಂಭದಲ್ಲಿ ಕೇಂದ್ರ ತಂಡದ ಜೊತೆ ವಿಡಿಯೋ ಸಂವಾದದ ಮೂಲಕ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಾತನಾಡಿ, ʼರಾಜ್ಯದಲ್ಲಿ ಆಗಿರುವ ಒಟ್ಟಾರೆ ಹಾನಿಯ ಸಮೀಕ್ಷಾ ವರದಿ ಹಾಗೂ ಪ್ರಸ್ತಾವನೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಆಧುನಿಕ ತಂತ್ರಜ್ಞಾನ ಬಳಸಿ ಹಾನಿಯ ವರದಿಯನ್ನು ಆಯಾ ಜಿಲ್ಲೆಗಳು ಸಿದ್ಧಪಡಿಸಿವೆ. ಅಗತ್ಯ ಛಾಯಾಚಿತ್ರ ಹಾಗೂ ಪತ್ರಿಕಾ ವರದಿಗಳನ್ನು ಮಂಡಿಸಲಾಗಿದೆʼ ಎಂದರು.
ಮೌನೀಶ ಮೌದಗಿಲ್ ಅವರು ಮಾತನಾಡಿ, ʼರಾಜ್ಯದ ಕಲ್ಯಾಣ ಕರ್ನಾಟಕದಲ್ಲಿ ಆಗಿರುವ ಹೆಚ್ಚಿನ ಮಳೆ ಹಾಗೂ ಹಾನಿಯ ಬಗ್ಗೆ ತಂತ್ರಜ್ಞಾನ ಬಳಸಿ ಸಿದ್ದಪಡಿಸಿದ ವರದಿ ಹಾಗೂ ಅಗತ್ಯ ಅನುದಾನದ ಬೇಡಿಕೆ ಬಗ್ಗೆ ತಿಳಿಸಿದ ಅವರು, ಬದಲಾದ ಹವಾಮಾನ ವೈಪರಿತ್ಯದ ಪರಿಣಾಮದಿಂದ ಕಳೆದ ರಾಜ್ಯಾದ್ಯಂತ ಸತತ ಪ್ರವಾಹ ಹಾಗೂ ಬರಗಾಲ ಸಂಭವಿಸುತ್ತಿದೆʼ ಎಂದರು.
ʼ125 ವರ್ಷಗಳ ಇತಿಹಾಸದಲ್ಲಿ 2025ರ ಮೇ ತಿಂಗಳಲ್ಲಿ ದಾಖಲೆಯ ಮಳೆಯಿಂದಾಗಿ ಜಲಾಶಯ ಕೆರೆ, ಹಳ್ಳ ಕೊಳ್ಳ ತುಂಬಿ, ಬಹುತೇಕ ಎಲ್ಲ ಕೃಷಿ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳು ನಾಶಗೊಂಡು ಸಾಕಷ್ಟು ಮೂಲಭೂತ ಸೌಕರ್ಯಗಳ ಹಾನಿಯಾಗಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಶೇ 90ರಷ್ಟು ಬೆಳೆ ಹಾನಿ ಸಂಭವಿಸಿದೆ ಎಂದು ಕೇಂದ್ರ ತಂಡಕ್ಕೆ ಅಂಕಿ ಸಂಖ್ಯೆಗಳ ಸಮೇತ ಮಾಹಿತಿ ನೀಡಿದರು. ಆಧುನಿಕ ತಂತ್ರಜ್ಞಾನ ಮೊಬೈಲ್ ಆಪ್ ಬಳಸಿ ಹಾನಿಯ ವರದಿ ಸಿದ್ದಪಡಿಸಲಾಗಿದೆʼ ಎಂದು ತಿಳಿಸಿದರು.
ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಸೇರಿ ಪ್ರತಿ ಗ್ರಾಮದ ಪ್ರತಿ ಜಮೀನಿಗೆ ಸರ್ವೆ ನಂಬರ್‌ವಾರು ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲಾಗಿದೆ. ಪರಿಹಾರ ಆಪ್‌ನಲ್ಲಿ ವಿವರಗಳನ್ನು ದಾಖಲಿಸಿದೆ. ಪ್ರತಿ ರೈತರಿಗೆ ಆಧಾರ ಲಿಂಕ್ ಕಡ್ಡಾಯಗೊಳಿಸಿದ ಕಾರಣ ಪರಿಹಾರವು ನೇರವಾಗಿ ರೈತರ ಖಾತೆಗೆ ಜಮೆ ಆಗುತ್ತದೆʼ ಎಂದು ಮೌನೀಶ ಮೌದಗೀಲ್ ತಿಳಿಸಿದರು.
ʼಕೇಂದ್ರ ಸರಕಾರದ ಪುನರ್ ನಿರ್ಮಾಣದ ನಿಯಮಾವಳಿಯಂತೆ ಮೂಲಭೂತ ಸೌಕರ್ಯಗಳ ಹಾನಿಯ ವರದಿಯನ್ನು ಸಿದ್ಧಪಡಿಸಲಾಗಿದೆʼ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ʼಬೀದರ ಜಿಲ್ಲೆಯ ಮಳೆ ಹಾನಿ ಕುರಿತು ಛಾಯಾಚಿತ್ರಗಳು ಹಾಗೂ ಪತ್ರಿಕಾ ವರದಿಗಳ ಮೂಲಕ ವಿವರಿಸಿದರು. ಒಟ್ಟು 1.67 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 711 ಕೋಟಿ ರೂ. ಹಾನಿಯಾದ ಬಗ್ಗೆ ತಿಳಿಸಿದರು. ರಾಜ್ಯ ಸರಕಾರದ ವಿಪತ್ತು ನಿರ್ವಹಣಾದಿಂದ ಬಿಡುಗಡೆಯಾದ 133 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಒಟ್ಟು 1,502 ಮನೆಗಳು ಹಾನಿಯಾಗಿದೆ. ರಸ್ತೆ, ಸೇತುವೆ ವಿವಿಧ ಮೂಲಭೂತ ಸೌಕರ್ಯಗಳ 231 ಕೋಟಿ ರೂ. ಹಾನಿಯಾಗಿದೆʼ ಎಂದು ವಿವರಿಸಿದರು.
ಜಿಲ್ಲಾಡಳಿತ ನೀಡಿದ ಹಾನಿಯ ವರದಿಯನ್ನು ಪರಿಗಣಿಸಿ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಕೇಂದ್ರ ಸರಕಾರದ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಜಂಟಿ ಕಾರ್ಯದರ್ಶಿ ರಾಜೀವಕುಮಾರ ತಿಳಿಸಿದರು.
ಇದನ್ನೂ ಓದಿ : ವಾಷಿಂಗ್ಟನ್ ಸುಂದರ್ ಜತೆ ತಮಿಳಿನಲ್ಲಿ ಮಾತನಾಡಿದ ಕನ್ನಡಿಗ ರಾಹುಲ್: ಕಾಮೆಂಟರಿ ಬಾಕ್ಸ್‌ನಲ್ಲಿ ‘ರಾಷ್ಟ್ರಭಾಷೆ’ ವಿವಾದ
ಬೀದರ ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್, ಬೀದರ ಸಹಾಯಕ ಆಯುಕ್ತ ಮೊಹಮ್ಮದ ಶಕೀಲ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ತಹಸೀಲ್ದಾರರು ಉಪಸ್ಥಿತರಿದ್ದರು. ಕೇಂದ್ರ ತಂಡವು ಔರಾದ್ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿತು.





