ಬೀದರ್ ನಗರದ ನೌಬಾದ್ ಸುತ್ತಲಿನ ವಿವಿಧ ಪ್ರದೇಶಗಳಲ್ಲಿ ಕಳೆದ ಹಲವು ವರ್ಷಗಳಿಂದ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಅಲೆಮಾರಿ ಜನಾಂಗದವರನ್ನು ಸದ್ಯಕ್ಕೆ ಒಕ್ಕಲೆಬ್ಬಿಸದಂತೆ ಜಿಲ್ಲಾಡಳಿತಕ್ಕೆ ಸೂಚಿಸುವುದಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್.ತಿಳಿಸಿದರು.
ನೌಬಾದ್ ಸಮೀಪದ ಚೌಳಿ ಕಮಾನ್ ಹತ್ತಿರದ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಸಿಂಧೋಳ, ಮಾಂಗರವಾಡಿ ಅಲೆಮಾರಿ ಜನಾಂಗದವರನ್ನು ಭೇಟಿ ಮಾಡಿ ಮಾತನಾಡಿ, ʼಇಲ್ಲಿನ ಅಲೆಮಾರಿ ಜನಾಂಗದವರ ಸ್ಥಿತಿ ತೀರ ಚಿಂತಾಜನಕವಾಗಿದೆ. ವಸತಿ, ಶಿಕ್ಷಣ, ಉದ್ಯೋಗ ವಿದ್ಯುತ್ ಹಾಗೂ ಶೌಚಾಲಯ ವಂಚಿತರಾಗಿರುವ ಈ ಜನಾಂಗಕ್ಕೆ ಖಾಯಂ ವಸತಿ ದೊರಕಿಸುವ ನಿಟ್ಟಿನಲ್ಲಿ ಸರಕಾರದ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪ ಅವರ ಗಮನಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ʼಸದ್ಯ 80 ಕುಟುಂಬಗಳು ನೌಬಾದ್‌ನ ಕೆಐಡಿಬಿ ಸರಕಾರಿ ಸ್ಥಳದಲ್ಲಿ ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಈ ಸಮುದಾಯಕ್ಕೆ 2 ಎಕರೆ ಪ್ರದೇಶದಲ್ಲಿ ಖಾಯಂ ವಸತಿ ನಿರ್ಮಿಸಲು ಬೇಡಿಕೆಯಿದ್ದು, ಬೀದರ ಜಿಲ್ಲಾಡಳಿತ ಹಾಗೂ ಸರಕಾರದ ಗಮನಕ್ಕೆ ತರಲಾಗುವುದುʼ ಎಂದು ತಿಳಿಸಿದರು.
ಬಳಿಕ ನಗರದ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿ ಯಾವುದೇ ಸಮಸ್ಯೆಯಾಗದಂತೆ ಜವಾಬ್ದಾರಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜಗೊಂಡ ಕಾಲೋನಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಇದನ್ನೂ ಓದಿ : ಬೀದರ್ | ಕುರಿ, ಮೇಕೆ ಘಟಕ ಸ್ಥಾಪನೆ ಯೋಜನೆಗೆ ಅರ್ಜಿ ಆಹ್ವಾನ
ಮಾಜಿ ಎಂಎಲ್ಸಿ ಅರವಿಂದಕುಮಾರ ಅರಳಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೇಶ ಸೇರಿದಂತೆ ಅಲೆಮಾರಿ ಸಮಾಜದ ಮುಖಂಡರು ಮತ್ತಿತರರಿದ್ದರು.





