ಔರಾದ್ ಪಟ್ಟಣದ ಬೀದಿ ಬದಿಯಲ್ಲಿ ಜೋಪಡಿಗಳಲ್ಲಿ ವಾಸಿಸುವ ಅಲೆಮಾರಿ ಜನಾಂಗಕ್ಕೆ ಮಂಜೂರಾದ ನಿವೇಶನ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನವೂ ಮುಂದುವರೆಯಿತು.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರುಗಡೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಕಳೆದ ಮೂರು ದಿನಗಳಿಂದ ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿ, ಪ್ರತಿಭಟನಾಕಾರರ ಮನವೋಲಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ʼನಮಗೆ ಒಣ ಭರವಸೆ ಬೇಡ, ನಿವೇಶನದ ಲಿಖಿತ ಒಪ್ಪಿಗೆ ಪತ್ರ ಕೈಗೆ ಕೊಡಿʼ ಎಂದು ಪಟ್ಟು ಹಿಡಿದು ಧರಣಿ ಮುಂದುವರೆಸಿದ್ದಾರೆ.
ಬೀದರ್ ಎಸಿ ಮೊಹಮ್ಮದ್ ಶಕೀಲ್ ಹಾಗೂ ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಬುಧವಾರ ಸಂಜೆ ಧರಣಿ ಸ್ಥಳಕ್ಕೆ ಭೇಟಿ ನೀಡಿ, ʼಅಲೆಮಾರಿ ಜನಾಂಗದವರಿಗಾಗಿ ಮಂಜೂರಾದ ಜಾಗ ಶೀಘ್ರದಲ್ಲಿ ನೀಡಲಾಗುವುದು. ಅಲೆಮಾರಿಗಳಿಗೆ ಮೀಸಲಾದ ಸರ್ವೇ ನಂ-183 ಜಾಗ ಕೂಡ ಹಂಚಿಕೆ ಮಾಡಲಾಗುವುದುʼ ಎಂದು ಭರವಸೆ ನೀಡಿದರು.

ಒಕ್ಕೂಟದ ಮುಖಂಡ ರಾಹುಲ್ ಖಂದಾರೆ ಮಾತನಾಡಿ ʼಕಳೆದ ನಾಲ್ಕು ದಶಕಗಳಿಂದ 200ಕ್ಕೂ ಅಧಿಕ ಅಲೆಮಾರಿ ಕುಟುಂಬಗಳು ಬೀದಿಯಲ್ಲಿ ಕನಿಷ್ಠ ಸೌಲಭ್ಯ ಇಲ್ಲದೆ ನರಕಯಾತನೆ ಅನುಭವಿಸುತ್ತಿದೆ. ಆದರೂ ಜಿಲ್ಲಾಡಳಿತ ಮಾನವೀಯತೆಯಿಂದ ನಿವೇಶನ ಹಂಚಿಕೆ ಮಾಡುವ ಕೆಲಸ ಮಾಡಲಿಲ್ಲ. ವಸತಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಕೇವಲ ಭರವಸೆಗೆ ಸೀಮಿತವಾಗಿದೆ. ಮತ್ತೆ ಭರವಸೆ ಕೊಟ್ಟು ಸಮಧಾನಪಡಿಸುವ ಪ್ರಯತ್ನ ಮಾಡಬೇಡಿ, ಶಾಶ್ವತವಾಗಿ ನಿವೇಶನ ನೀಡಿ, ಆದೇಶ ಪತ್ರ ಕೈಗೆ ಕೊಡಿ. ಅಲ್ಲಿಯವರೆಗೆ ಧರಣಿ ಮುಂದುವರೆಯಲಿದೆʼ ಎಂದರು.
ಬುಧವಾರ ಧರಣಿ ಸ್ಥಳಕ್ಕೆ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಕೆ.ಪುಂಡಲಿಕರಾವ್, ಅರವಿಂದಕುಮಾರ ಅರಳಿ, ಎದ್ದೇಳು ಕರ್ನಾಟಕ ರಾಜ್ಯ ಸಮಿತಿಯ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ, ಸಾಮಾಜಿಕ ಕಾರ್ಯಕರ್ತರಾದ ಮಹೇಶ ಗೊರನಾಳಕರ್, ಜಗದೀಶ್ವರ ಬಿರಾದರ, ಸಂದೀಪ ಮುಕಿಂದೆ, ಲಕ್ಷ್ಮಣ ಮಂಡಲಗೇರಾ, ಶಕ್ತಿಕಾಂತ ಭಾವಿದೊಡ್ಡಿ, ಡಾ.ಮಕ್ತುಂಬಿ ಎಂ., ಶಿವಮೂರ್ತಿ ಬಳತ್, ರಾಮಣ್ಣಾ ಒಡೆಯರ್, ಬಸವರಾಜ ಶೆಟಕಾರ್ ಮತ್ತಿತರರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು.
ʼಈ ಹಿಂದೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಪಟ್ಟಣದ ಹೊರವಲಯದ ಸರ್ವೇ ನಂ-183ರಲ್ಲಿ 2 ಎಕರೆ ಸರ್ಕಾರಿ ಜಮೀನು ಮಂಜೂರಾಗಿದೆ. ಆದರೆ, ಅದನ್ನು ಅಲೆಮಾರಿ ಜನಾಂಗಕ್ಕೆ ಹಂಚಿಕೆ ಮಾಡದೆ ರಾಜಕೀಯ ಒತ್ತಡದಿಂದ ನಿವೇಶನ ರದ್ದುಪಡಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಪಟ್ಟಣದಿಂದ ದೂರದಲ್ಲಿರುವ ಸರ್ವೇ ನಂ-205ರಲ್ಲಿ ನಿವೇಶನ ಮಂಜೂರಾತಿ ನೀಡಲಾಗಿದೆ. ಅದಕ್ಕೆ ನಾವು ಒಪ್ಪುವುದಿಲ್ಲ. ಸರ್ವೇ ನಂ-183ರ ನಿವೇಶನ ರದ್ದತಿ ಪ್ರಸ್ತಾವನೆ ಕೂಡಲೇ ಹಿಂಪಡೆದು ಅಲೆಮಾರಿ ಸಮುದಾಯಕ್ಕೆ ಹಂಚಿಕೆ ಮಾಡಬೇಕು. ಅದೇ ಸರ್ವೇ ನಂಬರ್‌ನಲ್ಲಿ ಇನ್ನೂ 2 ಎಕರೆ ಜಮೀನು ಹೆಚ್ಚುವರಿಯಾಗಿ ನೀಡಬೇಕು. ಇಲ್ಲದಿದ್ದರೆ ಈ ಹೋರಾಟ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲʼ ಎಂದು ಆಗ್ರಹಿಸಿದರು.
ಅಧಿಕಾರಿಗಳು ಈಗಾಗಲೇ ಅನೇಕ ಸಲ ಪೊಳ್ಳು ಭರವಸೆಗಳನ್ನು ನೀಡಿದ್ದಾರೆ, ಹೊರತು ಯಾವುದೂ ಅನುಷ್ಠಾನ ಕೈಗೊಂಡಿಲ್ಲ. ಈಗ ನೀಡುವ ಭರವಸೆಗಳು ಘೋಷಣೆಯಾಗಲಿ. ಮಂಜೂರಾದ ಜಾಗದಲ್ಲಿ ಅಧಿಕೃತವಾಗಿ ನಾಮಫಲಕ ಅಳವಡಿಸಬೇಕು. ಇಲ್ಲದಿದ್ದರೆ ಹೋರಾಟ ಜಿಲ್ಲಾ, ರಾಜ್ಯಮಟ್ಟಕ್ಕೆ ಕೊಂಡೊಯ್ಯಲಾಗವುದುʼ ಎಂದು ಹೋರಾಟಗಾರರು ಎಚ್ಚರಿಸಿದರು.

ಅದಕ್ಕೆ ಎಸಿ ಮೊಹಮ್ಮದ್ ಶಕೀಲ್ ಅವರು ಪ್ರತಿಕ್ರಿಯಿಸಿ, ʼಸರ್ಕಾರದಿಂದ ಮಂಜೂರಾದ ಜಾಗ ಅನ್ಯರಿಗೆ ಹಂಚಿಕೆಯಾಗಿಲ್ಲ. ಅಲೆಮಾರಿ ಸಮುದಾಯಕ್ಕೆ ಮಂಜೂರಾದ ಜಾಗ ರದ್ದತಿ ಕೋರಿ ತಾಲೂಕು ಆಡಳಿತದಿಂದ ಸಲ್ಲಿಕೆಯಾದ ಪ್ರಸ್ತಾವನೆ ಹಿಂಪಡೆಯಲು ಸೂಚಿಸಲಾಗುವುದು. ಆದರೆ, ಅದಕ್ಕೆ ನಾಲ್ಕೈದು ದಿನಗಳ ಸಮಯ ಬೇಕಾಗುತ್ತದೆʼ ಎಂದು ಉತ್ತರಿಸಿ ಧರಣಿ ಅಂತ್ಯಗೊಳಿಸುವಂತೆ ಮನವೋಲಿಸಿದರು.
ಅದಕ್ಕೆ ಧರಣಿನಿರತರು ಮಾತನಾಡಿ ʼನಾಲ್ಕು ದಿನಗಳಾದರೂ ಪರವಾಗಿಲ್ಲ. ತ್ವರಿತವಾಗಿ ಸರ್ಕಾರದ ಪ್ರಕ್ರಿಯೆಯಂತೆ ಆದೇಶಿಸಿ, ಅದರ ಪ್ರತಿ ನಮ್ಮ ಕೈಗೆ ಕೊಡಿʼ, ಬರೀ ಭರವಸೆಯಿಂದ ಧರಣಿ ಸ್ಥಳದಿಂದ ಕದಲುವುದಿಲ್ಲʼ ಎಂದು ಖಡಕ್ ಆಗಿ ಹೇಳಿದ ನಂತರ ಅಧಿಕಾರಿಗಳು ಅಲ್ಲಿಂದ ವಾಪಸ್ ತೆರಳಿದರು.
ಇದನ್ನೂ ಓದಿ : ಬೀದರ್ | ಅಧಿಕಾರಿಗಳ ಮನವೋಲಿಕೆ ವಿಫಲ : ಮುಂದುವರೆದ ಅಲೆಮಾರಿಗಳ ಧರಣಿ
ಒಕ್ಕೂಟದ ಪ್ರಮುಖರಾದ ನಾಗನಾಥ ವಾಕೋಡೆ, ಸುಭಾಷ ಲಾಧಾ, ಸಿದ್ದಾರ್ಥ ಭೋಸ್ಲೆ, ಸಂತೋಷ ಸಿಂಧೆ, ಪ್ರವೀಣ ಕಾರಂಜೆ, ಸಂತೋಷ ಸೂರ್ಯವಂಶಿ, ಪ್ರವೀಣ್ ಕಾರಂಜೆ, ಸುಂದರ ಮೇತ್ರೆ ಹಾಗೂ ಅಲೆಮಾರಿ ಸಮುದಾಯದವರು ಮಹಿಳೆಯರು, ಮಕ್ಕಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.





