ಮಹಿಳೆಯರ ಸಬಲೀಕರಣವೇ ಸಮಾಜದ ಪ್ರಗತಿಯ ಮೂಲವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬೀದರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ ಜಿಲ್ಲಾ ಮಟ್ಟದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ʼತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು ಎಂಬ ಮಾತಿನಂತೆ ಮಹಿಳೆಯರು ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಉಕ್ಕಿನ ಮಹಿಳೆ ಎಂದು ಖ್ಯಾತಿ ಪಡೆದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ದಿಟ್ಟ ಆಡಳಿತ ದೇಶದ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆʼ ಎಂದು ಹೇಳಿದರು.
ʼಕ್ರೀಡಾ ಕ್ಷೇತ್ರದಲ್ಲಿ ಪಿ.ಟಿ.ಉಷಾ, ಸ್ನೇಹಾ ಅಗರವಾಲ್ ಸೇರಿದಂತೆ ಅನೇಕ ಮಹಿಳಾ ಕ್ರೀಡಾಪಟುಗಳು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅಂತರಿಕ್ಷ ಕ್ಷೇತ್ರದಲ್ಲಿ ಕಲ್ಪನಾ ಚಾವ್ಲಾ ಹಾಗೂ ಸುನೀತಾ ವಿಲಿಯಮ್ಸ್ ಅವರು ಭಾರತದ ಹೆಸರನ್ನು ವಿಶ್ವದ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆʼ ಎಂದು ಸಚಿವರು ಉಲ್ಲೇಖಿಸಿದರು.
ʼಕರ್ನಾಟಕ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ತಿಂಗಳಿಗೆ ₹2000 ಆರ್ಥಿಕ ನೆರವು ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ರಾಜ್ಯದ ಕೋಟ್ಯಂತರ ಮಹಿಳೆಯರು ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದಾರೆʼ ಎಂದು ತಿಳಿಸಿದರು.
ಇದನ್ನೂ ಓದಿ : ನ್ಯಾಯಮೂರ್ತಿ ಹುದ್ದೆಗೆ ಅರ್ಹ ಮಹಿಳಾ ವಕೀಲರನ್ನು ಪರಿಗಣಿಸಿ: ಸಿಜೆಐ ಸಲಹೆ
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಜಿಲ್ಲಾ ಪಂಚಾಯತ್ ಸಿಇಒ ಗಿರೀಶ ಬದೋಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್ ಸೇರಿದಂತೆ ಅಧಿಕಾರಿಗಳು ಹಾಗೂ ಜಿಲ್ಲೆಯ ಅನೇಕ ಮಹಿಳೆಯರು ಉಪಸ್ಥಿತರಿದ್ದರು.





