ಮನೆಯಲ್ಲಿ ಗ್ರಂಥಾಲಯವಿದ್ದರೆ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಬಹುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ ʼಮನೆಗೊಂದು ಗ್ರಂಥಾಲಯʼ ಸಮಾರಂಭವನ್ನು ಬೀದರನ ಚನ್ನಬಸವ ನಗರದಲ್ಲಿರುವ ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ, ಸಾಹಿತಿ ಡಾ.ಬಸವರಾಜ ಬಲ್ಲೂರ ಅವರ ಮನೆಯಲ್ಲಿ ಸ್ಥಾಪಿಸಿದ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ʼಜನಮಾನಸದಲ್ಲಿ ಪುಸ್ತಕದ ಬಗ್ಗೆ ಅಭಿಮಾನ ಹೆಚ್ಚಿಸಿ, ಓದುವ ಅಭಿರುಚಿ ಮೂಡಿಸುವ ಅಗತ್ಯವಿರುವುದರಿಂದ ಕನ್ನಡ ಪುಸ್ತಕ ಪ್ರಾಧಿಕಾರವು ಮನೆ-ಮನೆಗೆ ಪುಸ್ತಕ ಸಂಸ್ಕೃತಿ ಪ್ರಸರಣ ಶೀರ್ಷಿಕೆಯಡಿ ‘ಮನೆಗೊಂದು ಗ್ರಂಥಾಲಯ’ ಸೇರಿ ಅನೇಕ ಯೋಜನೆಗಳನ್ನು ರೂಪಿಸಿದೆ. ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ, ಪುಸ್ತಕ ಓದಬೇಕು ಎಂದು ವೇದಿಕೆಗಳಲ್ಲಿ ಭಾಷಣ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ ಬದಲಿಗೆ ಜನರು ಪುಸ್ತಕ ಕೊಂಡು ಓದುವಂತಹ ವಾತಾವರಣ ನಿರ್ಮಿಸಬೇಕಿದೆ. ಆಗ ಓದುಗರ ಸಂಖ್ಯೆಯೂ ಹೆಚ್ಚುವುದಲ್ಲದೆ, ಲೇಖಕರು, ಪ್ರಕಾಶಕರು ಹಾಗೂ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವಿವಿಧ ವಿಭಾಗದವರ ಬದುಕು ಕೂಡ ಗಟ್ಟಿಗೊಳ್ಳುತ್ತದೆʼ ಎಂದರು.
ʼಮನೆಯಲ್ಲೊಂದು ಗ್ರಂಥಾಲಯವಿದ್ದರೆ ಪುಸ್ತಕಗಳ ಖರೀದಿಯೂ ಹೆಚ್ಚುತ್ತದೆ. ಇದರಿಂದ ಮನೆಯ ಸದಸ್ಯರ ಪುಸ್ತಕ ಪ್ರೀತಿ ದುಪ್ಪಟ್ಟಾಗುತ್ತದೆ. ಬಸವರಾಜ ಬಲ್ಲೂರ ಅವರ ಮನೆಯಲ್ಲಿನ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳ ಅಮೂಲ್ಯ ಸಂಗ್ರಹವಿದೆ. ಇದು ಇತರರಿಗೂ ಪ್ರೇರಣದಾಯಿಯಾಗಿದೆ, ಪುಸ್ತಕ ಪ್ರಾಧಿಕಾರದ ಮೂಲ ಉದ್ದೇಶವು ಇದೇ ಆಗಿದೆʼ ಎಂದರು.
ಸಾಹಿತಿ ಡಾ.ಬಸವರಾಜ ಬಲ್ಲೂರ ಮಾತನಾಡಿ, ʼಇಂದಿನ ತಂತ್ರಜ್ಞಾನದ ಕಾಲದಲ್ಲಿ ಪುಸ್ತಕಗಳು ಸುಲಭವಾಗಿ ದೊರೆಯುತ್ತಿವೆ. ಆದರೆ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಮೊಬೈಲ್ ಗೀಳಿನ ನಡುವೆ ಪುಸ್ತಕಗಳ ಓದನ್ನು ಹೆಚ್ಚಿಸಲು ಈ ರೀತಿಯ ಗ್ರಂಥಾಲಯಗಳು ಎಲ್ಲರ ಮನೆಯಲ್ಲಿರಬೇಕುʼ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಪುಸ್ತಕಗಳನ್ನು ಖರೀದಿಸಿ ಓದುವ ಪ್ರವೃತ್ತಿಯನ್ನು ಬೆಳೆಸುವುದರ ಜೊತೆಗೆ ಪುಸ್ತಕ ಪ್ರೀತಿಯನ್ನು ಹೆಚ್ಚಿಸುವುದು ಜನಸಾಮಾನ್ಯರ ಕರ್ತವ್ಯವೂ ಹೌದು. ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಉದ್ದೇಶವು ಪುಸ್ತಕ ಪ್ರೀತಿಯನ್ನು ಬೆಳೆಸುವುದಾಗಿದೆ. ಈ ನಿಟ್ಟಿನಲ್ಲಿ ಬಲ್ಲೂರ ಅವರ ಮನೆಯಲ್ಲಿನ ಗ್ರಂಥಾಲಯವು ಅನೇಕರಿಗೆ ಮಾದರಿಯಾಗಿದೆʼ ಎಂದು ಹೇಳಿದರು.
ಇದನ್ನೂ ಓದಿ : ಶೌಚಾಲಯ ಕಾಣದ ರಾಜ್ಯದ 170 ಸರ್ಕಾರಿ ಶಾಲೆಗಳು
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಸಾಹಿತಿಗಳಾದ ಗುರುನಾಥ ಅಕ್ಕಣ್ಣ, ಬಸವರಾಜ ಬಲ್ಲೂರ, ಬಾಲಾಜಿ ಕುಂಬಾರ, ವೀರಶೆಟ್ಟಿ ಪಾಟೀಲ ಬಸವಕಲ್ಯಾಣ, ಕಸಾಪ ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗಿರಾ, ನಿವೃತ್ತ ಶಿಕ್ಷಕ ಸಿದ್ದಾರೆಡ್ಡಿ ನಾಗೋರಾ ಹಾಗೂ ಬಸವ ಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ ಹಾಗೂ ಸಿದ್ದಾರೂಢ ಭಾಲ್ಕೆ, ಅನುಷಯಾ ಸಂಗಶೆಟ್ಟಿ ಉದ್ಗಿರೆ ಮೊದಲಾದವರು ಭಾಗವಹಿಸಿದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ನಿರೂಪಿಸಿದರು, ಕೋಶಾಧ್ಯಕ್ಷ ಶಿವಶಂಕರ ಟೋಕರೆ ವಂದಿಸಿದರು.





