ಬಸವಣ್ಣನವರ ʼಕಾಯಕವೇ ಕೈಲಾಸʼ ಎಂಬಂತೆ ನಿಷ್ಠೆಯಿಂದ ದುಡಿತಿನಿ, ಮಾರುಕಟ್ಟೆ ವ್ಯವಸ್ಥೆಗಾಗಿ ಅಲೆದಾಡುವುದಿಲ್ಲ, ಖುದ್ದು ನಾನೇ ಊರೂರು ಅಲೆದಾಡಿ ತರಕಾರಿ ಮಾರಾಟ ಮಾಡ್ತೀನಿ, ಒಮ್ಮೊಮ್ಮೆ ಪ್ರಕೃತಿ ಕೈಕೊಟ್ಟರೂ ಬೇಜಾರಿಲ್ಲ. ಮೈಮುರಿದು ದುಡಿಯುವುದು ನಮ್ಮ ಮುಖ್ಯ ಕಸುಬು, ಕೃಷಿಯಿಂದ ನಮ್ಮ ಬದುಕು ಹಸನಾಗಿದೆ…..
ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ಗ್ರಾಮದ ರೈತ ಚಂದ್ರಶೇಖರ ಪಾಟೀಲ್ ಅವರು ಮಾತುಗಳಿವು. ಚಂದ್ರಶೇಖರ ಪಾಟೀಲ್ ಅವರಿಗೆ ತಮ್ಮ ಗ್ರಾಮದಲ್ಲಿ 8 ಎಕರೆ ಭೂಮಿಯಿದ್ದು, ವಿವಿಧ ಬೆಳೆ ಬೆಳೆಯುತ್ತಾರೆ. ಸಾಂಪ್ರದಾಯಕ ಬೆಳೆಗಳೊಂದಿಗೆ ತರಕಾರಿ, ಹಣ್ಣು, ಸಿರಿಧಾನ್ಯ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಪಿಯುಸಿವರೆಗೆ ಓದಿದ ಬಳಿಕ ಕೆಲ ವರ್ಷಗಳ ಕಾಲ ಕೈತುಂಬ ಸಂಬಳ ಇರುವ ವಿವಿಧ ಸಂಘ-ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿದರು, ಇಲ್ಲಿನ ಶ್ರಮ ಬೇಸಾಯಕ್ಕೆ ಹಾಕಿದರೆ ಹೆಚ್ಚಿನ ಆದಾಯ ಸಿಕ್ಕೇ ಸಿಗುತ್ತದೆ ಎಂದು ಯೋಚಿಸಿದ ಅವರು ನೇರವಾಗಿ ಹೊಲದ ಹಾದಿ ಹಿಡಿದರು.

ಒಣ ಬೇಸಾಯದ ಕೃಷಿಯನ್ನು ನೀರಾವರಿ ಬೇಸಾಯವನ್ನಾಗಿ ಪರಿವರ್ತಿಸಬೇಕೆಂಬ ಅವರ ಕನಸು ಬೇಗ ಫಲಿಸಲಿಲ್ಲ. ಒಂದು, ಎರಡಲ್ಲ, ಆರು ಬೋರವೆಲ್ ಕೊರೆಸಿದರೂ ಹನಿ ನೀರು ಚಿಮ್ಮಲಿಲ್ಲ. ಆದರೂ ಅವರ ಆತ್ಮಸ್ಥೈರ್ಯ ಮಾತ್ರ ಎಳಷ್ಟು ಕುಗ್ಗಲಿಲ್ಲ. ಹೊಲ ಸದಾ ಹಸಿರು ಹೊದಿಕೆಯಿಂದ ನಳನಳಿಸುವಂತೆ ಮಾಡಬೇಕೆಂಬ ಅವರ ಆಸೆಯನ್ನು ಏಳನೇ ಕೊಳವೆಬಾವಿ ಈಡೇರಿಸಿತು. ಅಲ್ಲಿಂದ ಶುರುವಾದ ಪಾಟೀಲ್ ಅವರ ಕೃಷಿ, ಯಶಸ್ಸಿನವರೆಗೂ ಸಾಗಿತು.
ಚಂದ್ರಶೇಖರ ಅವರದು ಯೋಜನಾಬದ್ಧ ಕೃಷಿ ಚಟುವಟಿಕೆ, ನೀರು-ಜಮೀನು ಎಲ್ಲವನ್ನೂ ಲೆಕ್ಕ ಹಾಕಿ ಬಳಸುತ್ತಾರೆ. ಸೂರ್ಯ ಹುಟ್ಟುವ ಮುನ್ನ ಆರಂಭವಾಗುವ ಅವರ ಕೃಷಿಚಟುವಟಿಕೆಗಳು ಬಿಸಿಲು ನೆತ್ತಿಗೇರುವ ತನಕ ಇರುತ್ತದೆ. ನಡುವೆ ಒಂದಿಷ್ಟು ಬಿಡುವು, ವಿಶ್ರಾಂತಿ ಮುಂದಿನ ದಿನದ ಯೋಜನೆ. ಸಂಜೆ ಮತ್ತೆ ಶುರುವಾದರೆ ರಾತ್ರಿ ಹತ್ತು ಗಂಟೆಯಾದರೂ ಹೊಲದಲ್ಲಿ ಕೆಲಸ..ಕೆಲಸ…..
ಸೋಯಾ, ಕಡಲೆ, ತೊಗರಿ, ನುಗ್ಗೆಕಾಯಿ, ಕಲ್ಲಂಗಡಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆ ತೆಗೆದು ಆದಾಯ ಗಳಿಸಿರುವ ಇವರು ಕೃಷಿಯಲ್ಲಿ ಹೊಸ ಬೆಳೆಗಳನ್ನು ಪ್ರಯೋಗಾತ್ಮಕವಾಗಿ ಬೆಳೆದು ಯಶಸ್ಸು ಕಂಡಿದ್ದಾರೆ. ಅದರ ಭಾಗವಾಗಿಯೇ ಕಳೆದ ವರ್ಷದಿಂದ ಪ್ರಮುಖ ಸಿರಿಧಾನ್ಯ ಬೆಳೆಯಾದ ಚಿಯಾ ಬೆಳೆಯುವತ್ತ ಮುಖ ಮಾಡಿ ಕಡಿಮೆ ಖರ್ಚು, ಕಡಿಮೆ ಅವಧಿಯಲ್ಲಿ ಅಧಿಕ ಆದಾಯ ತೆಗೆದು ಮಾದರಿ ರೈತನಾಗಿ ಗಮನ ಸೆಳೆದಿದ್ದಾರೆ.
ಬೇರೆ ಬೆಳೆಗಿಂತ ಚಿಯಾ ಬೆಳೆಯುವತ್ತ ಮುಖ ಮಾಡಲು ಕಾರಣವೇನು ಎಂಬ ಪ್ರಶ್ನೆಗೆ, ʼಚಿಯಾ ಬೀಜಗಳು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಇತ್ತೀಚೆಗೆ ದೇಶ-ವಿದೇಶಗಳ ಮಾರುಕಟ್ಟೆಗಳಲ್ಲಿ ಇದರ ಬೇಡಿಕೆ ಹೆಚ್ಚುತ್ತಿದೆ. ಆರೋಗ್ಯಪರ ಆಹಾರವಾಗಿ ಬಳಸುವ ಚಿಯಾ ಬೀಜಗಳಲ್ಲಿ ಔಷಧೀಯ ಗುಣಲಕ್ಷಣಗಳು ಹಾಗೂ ಫೈಬರ್, ಪ್ರೋಟೀನ್ ಹೆಚ್ಚು ಇರುವುದರಿಂದ ಇದಕ್ಕೆ ಉತ್ತಮ ಮಾರುಕಟ್ಟೆ ದೊರೆಯುತ್ತಿದೆʼ ಎಂದು ಮಾಹಿತಿ ನೀಡಿದರು.

ʼಕಡಿಮೆ ನೀರು ಮತ್ತು ಕಡಿಮೆ ರಾಸಾಯನಿಕ ಬಳಕೆಯೊಂದಿಗೆ ಸುಮಾರು 90 ರಿಂದ 100 ದಿನಗಳಲ್ಲಿ ಈ ಬೆಳೆ ಬೆಳೆಯುತ್ತದೆ. ಕಡಿಮೆ ಅವಧಿಯಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಚಿಯಾ ಬೆಳೆಗಾಗಿ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ. ಒಂದು ಎಕರೆಗೆ ಅರ್ಧ ಕೆಜಿಯಷ್ಟು ಬೀಜ ಬೇಕು. ಉಳಿದ ಖರ್ಚುಗಳನ್ನು ಸೇರಿಸಿ ಪ್ರತಿ ಎಕರೆಗೆ ₹12-15 ಸಾವಿರ ಖರ್ಚು ಬರುತ್ತದೆ. ಸರಿಯಾದ ನಿರ್ವಹಣೆ ಮಾಡಿದರೆ ಎಕರೆಗೆ 4-5 ಕ್ವಿಂಟಲ್‌ನಷ್ಟು ಇಳುವರಿ ದೊರೆಯುತ್ತಿದ್ದು, ಮಾರುಕಟ್ಟೆಯಲ್ಲಿ ಚಿಯಾ ಬೀಜಗಳಿಗೆ ಉತ್ತಮ ಬೆಲೆ ಸಿಗುತ್ತದೆ. ಅಷ್ಟೇ ಅಲ್ಲದೆ ಮೈಸೂರು ಭಾಗದಿಂದ ಜಮೀನಿಗೇ ಬಂದು ಖರೀದಿಸಿದ್ದಾರೆʼ ಎಂದು ಅನುಭವ ಹಂಚಿಕೊಂಡರು.
ಕೃಷಿ ಬದುಕಿನ ಮುಖ್ಯ ಕಸುಬು, ಕೇವಲ ಆದಾಯ ತರುವ ವೃತ್ತಿ ಮಾತ್ರ ಆಗಿ ಉಳಿದಿಲ್ಲ. ಬೀಜ ಮೊಳಕೆಯೊಡೆದು ಸಸಿಯಾಗಿ, ಗಿಡವಾಗಿ ಬೆಳೆಯುತ್ತ ಹೋಗುವ ಪರಿ ಚಂದ್ರಶೇಖರ ಅವರಿಗೆ ಪ್ರಿಯವಾಗಿದೆ. ವೃತ್ತಿ, ಹವ್ಯಾಸ ಎರಡೂ ಕೃಷಿ ಚಟುವಟಿಕೆಗಳಲ್ಲಿಯೇ ತೊಡಗಿಸಿಕೊಳ್ಳುವುದಾಗಿದೆ. ಕೃಷಿ ಮಾಡಿಸುವ ಕೆಲಸ ಅಲ್ಲ, ನಾವೇ ಖುದ್ದಾಗಿ ಮಾಡುವ ಕೆಲಸ ಎಂಬುದು ಅವರ ಹೃದಯಾಳದ ಮಾತು.
ಮೆಟ್ರೊ ನಗರಗಳಿಗೆ ವಲಸೆ ಹೋಗಿ ಸೀರಿಯಸ್ ಆಗಿ ಕೆಲಸ ಮಾಡುವಂತೆ ತನ್ನ ಜಮೀನಿನಲ್ಲಿಯೇ ಮೈಮುರಿದು ದುಡಿದರೆ ಖಂಡಿತ ಲಾಭ ಗಳಿಸಲು ಸಾಧ್ಯ. ಬೀಜ ಬಿತ್ತಿ ಕುಳಿತು ಒಮ್ಮೆಲೆ ರಾಶಿ ಮಾಡಲು ಹೋದರೆ ಫಲ ಸಿಗಲು ಸಾಧ್ಯವಿಲ್ಲ. ಬೆಳೆಯ ಜೊತೆ ನಾವೂ ಬೆಳೆಯುತ್ತ ಹೋಗಬೇಕು. ನಾವು ಹೊಲದಲ್ಲಿ ಬೆವರು ಸುರಿಸಿದರೆ, ಅದರ ಫಲ ರಾಶಿ ಮಾಡುವಾಗ ಸಿಗುತ್ತದೆ. ಕೃಷಿಯಲ್ಲಿ ಮಾನ, ಮರ್ಯಾದೆ, ನಾಚಿಕೆ, ಶ್ರೀಮಂತಿಕೆ ಯಾವುದೂ ಇರಬಾರದು. ಎಲ್ಲಾ ಕೆಲಸಗಳಿಗೂ ಹಿಂಜರಿಯದೆ ದುಡಿಯಬೇಕು.

ಮೆಕ್ಷಿಕೊ ಮೂಲದ ಚಿಯಾ ಬೆಳೆ ಇತ್ತೀಚೆಗೆ ಎಲ್ಲೆಡೆ ಬೆಳೆಯಲಾಗುತ್ತಿದೆ. ಸಿರಿಧಾನ್ಯ ಬೆಳೆಯಾಗಿ ಗುರುತಿಸಿಕೊಂಡಿರುವ ಈ ಬೆಳೆಗೆ ರೋಗ ಮತ್ತು ಕೀಟಬಾಧೆ ಸಮಸ್ಯೆ ಕಡಿಮೆ ಇರುವುದರಿಂದ ನಿರ್ವಹಣೆ ಸುಲಭವಾಗುತ್ತದೆ. ಇನ್ನು ಕಾಡು ಪ್ರಾಣಿಗಳು ಬೆಳೆ ಮುಟ್ಟದೇ ಇರುವುದರಿಂದ ಬೆಳೆ ಸಂರಕ್ಷಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ʼಕಳೆದ ವರ್ಷ ಒಂದು ಎಕರೆಯಲ್ಲಿ ಚಿಯಾ ಬೆಳೆದಿದ್ದೆ, ನಾಲ್ಕೂವರೆ ಕ್ವಿಂಟಲ್ ಇಳುವರಿ ಬಂದಿತು. ಪ್ರತಿ ಕ್ವಿಂಟಲ್‌ಗೆ ₹12 ಸಾವಿರದಂತೆ ಮಾರಾಟ ಮಾಡಿದ್ದೇನೆ. ಎಲ್ಲ ಖರ್ಚು ಕಳೆದು ₹40-45 ಸಾವಿರ ನಿವ್ವಳ ಆದಾಯ ಗಳಿಸಲು ಸಾಧ್ಯವಾಗಿದೆ. ವನ್ಯಜೀವಿಗಳ ಕಾಟವಿಲ್ಲ, ಹೆಚ್ಚಿನ ಔಷಧ, ಗೊಬ್ಬರದ ಅಗತ್ಯವಿಲ್ಲ. ಒಮ್ಮೆ ಕಳೆ ತೆಗೆಯುವುದು, ಔಷಧ ಸಿಂಪಡಣೆ, ವಾರಕ್ಕೊಮ್ಮೆ ನೀರು ಹರಿಸಿದರೆ ಸಾಕು, ಹೆಚ್ಚುಕಮ್ಮಿ 3 ತಿಂಗಳಲ್ಲಿ ಹುಲುಸಾಗಿ ಬೆಳೆದ ಫಸಲು ಕೈಹಿಡಿಯುತ್ತದೆ. ಸದ್ಯ 3 ಎಕರೆ ಚಿಯಾ ಇದೆ. ಈ ಬಾರಿ ಪ್ರತಿ ಕ್ವಿಂಟಲ್ ₹20 ಸಾವಿರವರೆಗೆ ದರವಿದೆ. ಇದರಿಂದ ನಮಗೂ ಹೆಚ್ಚಿನ ಆದಾಯದ ನಿರೀಕ್ಷಿಯಿದೆʼ ಎಂದು ಹೇಳಿದರು.
ಕೃಷಿಯಲ್ಲಿ ಲಾಭವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಚಂದ್ರಶೇಖರ ಅವರು, ʼಕೃಷಿಯಲ್ಲಿ ಹೊಸ ಬೆಳೆಗಳನ್ನು ಅಳವಡಿಸಿಕೊಂಡರೆ ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ಗಳಿಸಬಹುದೆಂಬುದನ್ನು ಈ ಪ್ರಯೋಗಾತ್ಮಕ ಕೃಷಿ ತೋರಿಸಿದೆ. ಕೃಷಿ ತಜ್ಞರ ಮಾರ್ಗದರ್ಶನದಲ್ಲಿ ಚಿಯಾ ಬೆಳೆ ಬೆಳೆಯುವ ಮೂಲಕ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಕುಟುಂಬ ತೊರೆದು ಕನಿಷ್ಠ ವೇತನಕ್ಕೆ ದುಡಿಯುವ ಯುವ ಸಮೂಹ ಕೃಷಿಯಲ್ಲಿ ತೊಡಗಿಸಿಕೊಂಡರೆ ಡಬಲ್ ಆದಾಯ ಪಕ್ಕಾ ಸಿಗುತ್ತದೆʼ ಎಂದು ಅಭಿಪ್ರಾಯಪಟ್ಟರು.
ನನಗೆ ಇಬ್ಬರು ಹುಡುಗರು, ಒಬ್ಬ ಮಗ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ, ಇನ್ನೋರ್ವ ಮಗ ಭಾಲ್ಕಿಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ. ಕೃಷಿ ಆದಾಯದಿಂದಲೇ ಮಕ್ಕಳ ಓದು, ಮನೆ ಖರ್ಚು, ಚಂದದ ಮನೆ ಕಟ್ಟಿಸಿದ್ದೇನೆ. ಕೃಷಿ ಬಿಟ್ಟು ಬೇರೆ ಕೆಲಸ ಮಾಡುವುದಿಲ್ಲ. ಸ್ವಂತ ಜಮೀನು ಜೊತೆಗೆ ಆರೇಳು ಎಕರೆ ಲಾವಣಿ ಪಡೆದಿದ್ದೇನೆ. ಅಲ್ಲಿಯೂ ಗೋಧಿ, ಪೆರಲೆಹಣ್ಣು, ಈರುಳ್ಳಿ ಇತ್ಯಾದಿ ಬೆಳೆಯುತ್ತೇನೆ. ಕೃಷಿಯೊಂದಿಗೆ ನಾಲ್ಕು ಆಕಳು ಇವೆ. ಏನಿಲ್ಲವೆಂದರೂ ವರ್ಷಕ್ಕೆ ನಾಲ್ಕೈದು ಲಕ್ಷ ಆದಾಯ ಇದ್ದೇ ಇರುತ್ತದೆ. ಇದೆಲ್ಲವೂ ʼಕೈ ಕೆಸರಾದರೆ ಬಾಯಿ ಮೊಸರುʼ ಎಂಬಂತೆ ಬೆವರಿನ ಫಲವಲ್ಲವೇ? ಸರ್ ಎಂದು ತಂಪು ಮಜ್ಜಿಗೆಯ ಗ್ಲಾಸ್ ನನ್ನ ಕೈಗಿಟ್ಟು ತಮ್ಮ ಬದುಕಿನ ಕಥೆ ವಿವರಿಸಿದರು.

ಚಂದ್ರಶೇಖರ ಅವರ ಇನ್ನೊಂದು ವಿಶೇಷತೆ ಏನೆಂದರೆ ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತರಕಾರಿ, ಈರುಳ್ಳಿ ಇತರ ಏನೇ ಬೆಳೆದರೂ ಬೈಕ್ ಅಥವಾ ಬಾಡಿಗೆ ವಾಹನ ಹತ್ತಿ ಸುತ್ತಲಿನ ಹಳ್ಳಿಗೆ ಅವರೇ ಖುದ್ದಾಗಿ ತೆರಳಿ ಮಾರಾಟ ಮಾಡ್ತಾರೆ. ಇದು ಹೆಚ್ಚಿನ ಆದಾಯ ಜೊತೆ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ ಎಂಬುದು ಅವರ ಅನುಭವದ ಮಾತು.
ʼನಾವು ʼಪಾಟೀಲ್ʼ ಮನೆತನದವರು ಎಂಬ ಪ್ರತಿಷ್ಠೆ ನಮಗಿಲ್ಲ. ಬಸವಾದಿ ಶರಣರ ʼಕಾಯಕವೇ ಕೈಲಾಸʼ ಎಂಬಂತೆ ಯಾವುದೇ ಕೆಲಸವಿದ್ದರೂ ಮೇಲು-ಕೀಳು ಎನ್ನದೆ ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡುವುದು ನನ್ನ ಸ್ವಭಾವ. ಶ್ರಮದಿಂದ ಬಂದ ಆದಾಯ ಬದುಕಿನ ಯಶಸ್ಸಿಗೆ ಕಾರಣ. ಆಗ ಜೀವನ ಸಾರ್ಥಕವಾಗುತ್ತದೆʼ ಎಂದು ಹೇಳುತ್ತಾರೆ.
ಕೃಷಿಯಲ್ಲಿ ಬಂಡವಾಳ ಹಾಕಿ ಬೆವರು ಸುರಿಸಿದರೆ ಭೂಮಿತಾಯಿ ಒಲಿಯುತ್ತಾಳೆ ಎಂಬ ದೃಢವಾದ ನಂಬಿಕೆಯೊಂದಿಗೆ ಬೇಸಾಯದಲ್ಲಿ ತೊಡಗಿಸಿಕೊಂಡಿರುವ ಚಂದ್ರಶೇಖರ ಅವರಿಗೆ ಪತ್ನಿ ಶಿಲ್ಪಾ ಪಾಟೀಲ್ ಅವರು ಹೆಗಲು ಕೊಟ್ಟಿದ್ದಾರೆ. ಪತಿಯೊಂದಿಗೆ ಹಗಲಿರುಳು ದುಡಿಯುತ್ತಾರೆ. ಕೃಷಿಯ ಎಲ್ಲ ಕೆಲಸಗಳಿಗೂ ಸಾಥ್ ನೀಡಿರುವ ಶಿಲ್ಪಾ ಅವರು ಟ್ರ್ಯಾಕ್ಟರ್ ಓಡಿಸುವ ಕಲಿಕೆಯಲ್ಲಿ ತೊಡಗಿದ್ದಾರೆ. ಮುಂದೆ ಸ್ವಂತ ಟ್ರ್ಯಾಕ್ಟರ್ ಖರೀದಿಸುವ ಯೋಜನೆ ಹಾಕಿದ್ದಾರೆ.
ಚಂದ್ರಶೇಖರ ಅವರು ಅನ್ಯ ಕೆಲಸಕ್ಕೆ ಎಲ್ಲೇ ಹೋದರೂ ಹೊಲದಲ್ಲಿ ನೀರು ಹರಿಸುವುದು, ಕಳೆ ತೆಗೆಸುವುದು ಸೇರಿ ತೋಟದ ಎಲ್ಲ ರೇಖ್ ದೇಖ್ ನೋಡುವುದು ಶಿಲ್ಪಾ ಅವರೇ, ಒಮ್ಮೊಮ್ಮೆ ರಾತ್ರಿಯಾದರೂ ಪತಿಯೊಂದಿಗೆ ನೀರು ಹರಿಸಲು ಸಹಕಾರ ನೀಡುತ್ತಾರೆ. ಈ ಹಿಂದೆ ಮಕ್ಕಳು ಊರಲ್ಲಿ ಇದ್ದಾಗ ಹೊಲದಲ್ಲಿ ಪೋಷಕರಿಗೆ ಸಹಕಾರ ನೀಡುತ್ತಿದ್ದರು. ಮಕ್ಕಳನ್ನು ಓದಿನ ಬಿಡುವಿನಲ್ಲಿ ಅನ್ಯಗತ್ಯವಾಗಿ ಓಡಾಡದಂತೆ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಮಾತು ಹೇಳಿದರು.
ಈ ರೀತಿಯ ನವೀನ ಕೃಷಿ ವಿಧಾನಗಳು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಹಕಾರಿ ಆಗುವುದರ ಜೊತೆ ಕೃಷಿ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಚಂದ್ರಶೇಖರ ಅವರ ಯೋಜನಾಬದ್ಧ ಬೇಸಾಯಕ್ಕೆ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಸಂಶೋಧಕರು ಕಾಲಕಾಲಕ್ಕೆ ಅಗತ್ಯ ಮಾಹಿತಿ ಒದಗಿಸುತ್ತಿದ್ದಾರೆ. ಇಲಾಖೆಗಳಿಂದ ರೈತರಿಗೆ ಇರುವ ಸಾಲಸೌಲಭ್ಯಗಳ ನೆರವು ಸಹ ಒದಗಿಸಿದ್ದಾರೆ. ಮುಂದೆ ಸಾವಯುವ ಕೃಷಿ ಮಾಡಬೇಕೆಂಬ ಅವರ ಕನಸು ಶೀಘ್ರದಲ್ಲಿಯೇ ನನಸಾಗಲಿದೆ.

ರೈತ ದಂಪತಿ ಚಂದ್ರಶೇಖರ- ಶಿಲ್ಪಾ ಪಾಟೀಲ್ ಅವರ ಪ್ರಗತಿಪರ ಕೃಷಿ ಸಾಧನೆಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ, ಕೃಷಿ ಇಲಾಖೆ ಬೀದರ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ʼಶ್ರೇಷ್ಠ ಕೃಷಿಕʼ ಪ್ರಶಸ್ತಿ ನೀಡಿ ಗೌರವಿಸಿವೆ.
ಬೀದರ್ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ಚಿಯಾ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹೆಚ್ಚು ಖರ್ಚಿಲ್ಲದೆ, ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಗಳಿಸುವುದು ಹಾಗೂ ಜಿಂಕೆ, ಕಾಡು ಹಂದಿ, ಮಂಗಗಳ ಇತರೆ ವನ್ಯಜೀವಿಗಳ ಕಾಟಕ್ಕೆ ಬೇಸತ್ತು ರೈತರು ಚಿಯಾ ಬೆಳೆಯತ್ತ ಮುಖ ಮಾಡಿರುವುದು ವ್ಯವಸಾಯದಲ್ಲಿ ಹೊಸ ಬೆಳವಣಿಗೆಯೇ ಸರಿ.
ಇದನ್ನೂ ಓದಿ : ಬೀದರ್ ಜಿಲ್ಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಸಾಕಷ್ಟು ಲಭ್ಯ; ಗಾಬರಿಗೊಳ್ಳಬೇಡಿ : ಡಿಸಿ ಶಿಲ್ಪಾ ಶರ್ಮಾ
ಬೀದರ್ ಜಿಲ್ಲೆಯಲ್ಲಿ ಈ ಬಾರಿ 2,180 ಹೆಕ್ಟೇರ್ ಪ್ರದೇಶದಲ್ಲಿ ಚಿಯಾ ಬೆಳೆಯಲಾಗಿದೆ. ಅದರಲ್ಲಿ ಹುಮನಾಬಾದ್ (574), ಹುಲಸೂರ (543), ಬೀದರ್ (209), ಬಸವಕಲ್ಯಾಣ (69), ಭಾಲ್ಕಿ (489), ಕಮಲನಗರ (37), ಔರಾದ್ (15), ಚಿಟಗುಪ್ಪ (241) ಹೆಕ್ಟೇರ್ ಪ್ರದೇಶದಲ್ಲಿದೆ ಎಂದು ಜಂಟಿ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




