ಮಹಾಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬಲವಂತದಿಂದ ಚಂದಾ ವಸೂಲಿಗೆ ಯತ್ನಿಸಿ, ಹಣ ನೀಡದಿದ್ದಕ್ಕೆ ಮೂವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೀದರ್ ನಗರದ ಮೈಲೂರು ಬಡಾವಣೆಯಲ್ಲಿ ಶನಿವಾರ ನಡೆದಿದೆ.
ಗಾಯಾಳು ಮಹೇಶ ಬಿರಾದರ್ ನೀಡಿದ ದೂರಿನ ಮೇರೆಗೆ ಏಳು ಜನ ಹಾಗೂ ಇತರರ ಗಾಂಧಿ ಗಂಜ ಠಾಣೆಯಲ್ಲಿ ವಿರುದ್ಧ ಪ್ರಕರಣ ದಾಖಲಾಗಿದ್ದು. ವಿದ್ಯಾನಗರ ಕಾಲೋನಿಯ ಕೃಷ್ಣ, ನರೇಂದ್ರ, ಕಿರಣ್ ಮತ್ತು ನಿಖಿಲ್ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಘಟನೆ ಏನು?
ಬೀದರ್ ನಗರದ ಮೈಲೂರು ಕ್ರಾಸ್ ಬಳಿ ಮಹೇಶ್ ಜಗದೀಶ್ ಬಿರಾದಾರ ಎಂಬುವವರ ಫೋಟೋ ಸ್ಟುಡಿಯೋ ಇದೆ. ಮಹೇಶ್, ಇವರ ಸಹೋದರ ಸಚಿನ್ ಹಾಗೂ ವಿಷ್ಣು, ರೋಹಿತ್ ಮೈಕಲ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಾರೆ. ನಿನ್ನೆ (ಫೆ.7) ರಂದು ಸಂಜೆ ಕೃಷ್ಣ, ನರೇಂದ್ರ, ಕಿರಣ್ ಮತ್ತು ನಿಖಿಲ್ ಸೇರಿ ಏಳೆಂಟು ಜನ ಮಹೇಶ ಅವರ ಫೋಟೋ ಸ್ಟುಡಿಯೋಗೆ ತೆರಳಿ ಶಿವರಾತ್ರಿ ಹಬ್ಬಕ್ಕೆ ಚಂದಾ (ಪಟ್ಟಿ) ಕೊಡಬೇಕೆಂದು ಮಹೇಶ ಅವರ ತಮ್ಮ ಸಚಿನ್‌ಗೆ ಕೇಳಿದ್ದಾರೆ. ಆಗ ʼನನ್ನ ಅಣ್ಣ ಇಲ್ಲ. ಆಮೇಲೆ ಬನ್ನಿ’ ಎಂದು ಹೇಳಿದ್ದಾರೆ. ಅದಕ್ಕೆ ಕೋಪಗೊಂಡು ಅವಾಚ್ಯವಾಗಿ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಹೋದ ವಿಷ್ಣುವಿಗೂ ಹೊಡೆದಿದ್ದಾರೆ.
ಸಚಿನ್ ಅವರು, ಮಹೇಶ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಮಹೇಶ ಸ್ಟುಡಿಯೋಗೆ ಧಾವಿಸಿ ಹಲ್ಲೆ ನಡೆಸಿದರನ್ನು ಮಹೇಶ್ ʼಯಾಕೆ ಹೊಡೆದಿದ್ದಿರಾʼ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದು ಮಹೇಶ್‌ಗೂ ಹೊಡೆದು, ಚಾಕುವಿನಿಂದ ಕುತ್ತಿಗೆ ಹಿಂಭಾಗದಲ್ಲಿ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆನಂತರ ಜೀವ ಬೆದರಿಕೆ ಕೂಡ ಒಡ್ಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂದು ಮಹೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಗಾಂಧಿಗಂಜ್ ಠಾಣೆಯಲ್ಲಿ 7 ಜನ ಸೇರಿ ಇತರರ ವಿರುದ್ಧ 115(5), 118(1), 109, 352, 351(2) ಜೊತೆ 109 ಬಿಎನ್‌ಎಸ್ ಅಡಿಯಲ್ಲಿ ದೂರು ದಾಖಲಾಗಿದೆ.
ʼಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಯಾರೇ ಆಗಲಿ ತೊಂದರೆ ಅಥವಾ ಅಪರಾಧ ಕೃತ್ಯ ಎಸಗಿದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಇಂತಹ ಘಟನೆಗಳು ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಲ್ಲಿ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಇಂತಹ ಕೃತ್ಯದಲ್ಲಿ ಪದೇ ಪದೇ ಭಾಗಿಯಾದವರ ವಿರುದ್ಧ ರೌಡಿ ಶೀಟರ್ ತೆರೆದು ಸೂಕ್ತ ಕಾನೂನು ಕಠಿಣ ಕ್ರಮ ಜರುಗಿಸಲಾಗುವುದುʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಗಂಡನ ಮನೆಯವರ ಕಿರುಕುಳ : 11 ತಿಂಗಳ ಮಗು ಬಿಟ್ಟು ಮಹಿಳೆ ಆತ್ಮಹತ್ಯೆ
ಠಾಣೆಯ ಪಿಐ ಆನಂದರಾವ್, ಪಿಎಸ್‌ಐ ದಶರಥ ಹಾಗೂ ಸಿಬ್ಬಂದಿಗಳಾದ ನವೀನ್, ಅನಿಲ್, ಇರ್ಫಾನ್, ಗಂಗಾಧರ್, ಸುಧಾಕರ್ ಅವರನ್ನು ಒಳಗೊಂಡ ತಂಡವು ಪ್ರಕರಣ ದಾಖಲಾದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.





