ಕರ್ನಾಟಕ ಜಾನಪದ ಅಕಾಡೆಮಿಯು 2025ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಔರಾದ್ ತಾಲ್ಲೂಕಿನ ಜೋಜನಾ ಗ್ರಾಮದ ಇಂದ್ರಮ್ಮಾ ಶಾಮರಾವ್ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇಂದ್ರಮ್ಮಾ (77) ಅವರು, ಕಳೆದ 35 ವರ್ಷಗಳಿಂದ ಹಂತಿ ಪದ, ಮೊಹರಂ ಪದ, ಬುಲಾಯಿ ಪದಗಳ ಗಾಯನದಿಂದ ಜಿಲ್ಲೆ ಅಲ್ಲದೆ ರಾಜ್ಯದ ವಿವಿಧೆಡೆ ಜರುಗಿದ ಸಭೆ, ಸಮಾರಂಭ, ಜಾತ್ರೆ, ಉತ್ಸವಗಳಲ್ಲಿ ಭಾಗವಹಿಸಿ ಸಂಗೀತ ಸೇವೆ ಸಲ್ಲಿಸಿದ್ದಾರೆ.
ಇಂದ್ರಮ್ಮಾ ಅವರ ಜಾನಪದ ಗಾಯನ ಸೇವೆಯನ್ನು ಪರಿಗಣಿಸಿ ಬೀದರ್ ಜಿಲ್ಲೆಯಿಂದ ಪ್ರಸಕ್ತ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಇದನ್ನೂ ಓದಿ : ಶೌಚಾಲಯ ಕಾಣದ ರಾಜ್ಯದ 170 ಸರ್ಕಾರಿ ಶಾಲೆಗಳು
ʼಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದ ಅಕಾಡೆಮಿ ಅಧ್ಯಕ್ಷ ಹಾಗೂ ಅಕಾಡೆಮಿ ಸದಸ್ಯರಿಗೆ ಧನ್ಯವಾದ ಸಲ್ಲಿಸುವೆ. ಪೂರ್ವಜರಿಂದ ಬಂದ ಕಲೆಯನ್ನು ಮೈಗೂಡಿಸಿಕೊಂಡು ಎಲೆಮರೆ ಕಾಯಿಯಂತೆ ಜಾನಪದ ಕಲಾ ಸೇವೆ ಮಾಡುತ್ತಿರುವ ನನ್ನನ್ನು ಗುರುತಿಸಿ ಆಯ್ಕೆ ಮಾಡಿದ್ದು ಸಂತಸ ತಂದಿದೆʼ ಎಂದು ಪ್ರತಿಕ್ರಿಯಿಸಿದರು.






