ಭಾಲ್ಕಿ ಪಟ್ಟಣದ ಅರಣ್ಯ ಕಚೇರಿಯ ಪಕ್ಕದಲ್ಲಿರುವ ವಸತಿ ಗೃಹದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಭಾಲ್ಕಿ ತಾಲೂಕಿನ ಬೋಳೆಗಾವ ಗ್ರಾಮದ ದಲಿತ ಅರಣ್ಯ ಸಿಬ್ಬಂದಿ ಅಂಕುಶ್ ಸುಧಾಮ್ (57) ಮೃತರು ಎಂದು ತಿಳಿದು ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಭಾಲ್ಕಿಯ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಕುಶ್ ಅವರು ಶುಕ್ರವಾರ (ಫೆ.6) ಬೆಳಗ್ಗೆ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವ ಈಶ್ವರ ಖಂಡ್ರೆ ಸಾಂತ್ವಾನ :
ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಈಶ್ವರ ಖಂಡ್ರೆ ಹಾಗೂ ಡಿಸಿಎಫ್ ಆಶಿಶ್ ರೆಡ್ಡಿ ಅವರು ಘಟನಾ ಸ್ಥಳಕ್ಕೆ ಭೇಟಿ ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ʼಅರಣ್ಯ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ.ಅರಣ್ಯ ಇಲಾಖೆಯಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆ ವತಿಯಿಂದ ಅವರ ಮೃತರ ಆತ್ಮಕ್ಕೆ ಶ್ರದ್ದಾಂಜಲಿ ಸಲ್ಲಿಸುವೆ. ಅರಣ್ಯ ಇಲಾಖೆ ಹಾಗೂ ವೈಯಕ್ತಿಕವಾಗಿ ಅವರ ಕುಟುಂಬಕ್ಕೆ ಸಹಕಾರ ನೀಡಲಾಗುವುದುʼ ಎಂದು ಹೇಳಿದರು.
ಸಾವಿನ ತನಿಖೆಯಾಗಲಿ:
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರ ತವರು ಕ್ಷೇತ್ರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯಿಸಿ ಸಾವಿನ ತನಿಖೆಯಾಗಲಿ ಎಂದು ಆಗ್ರಹಿಸಿದರು.
ʼಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕಾಟಕ್ಕೆ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಅರಣ್ಯ ಅಧಿಕಾರಿಗಳು ಮೃತ ಸಿಬ್ಬಂದಿ ವಿರುದ್ಧ ಇಲ್ಲಸಲ್ಲದ ಆರೋಪಗಳು ಮಾಡುತ್ತಿದ್ದಾರೆ, ಇದನ್ನು ಮುಚ್ಚುಹಾಕಲು ಎಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೆʼ ಎಂದು ಖೂಬಾ ಅವರು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು
ʼಅರಣ್ಯ ಮಂತ್ರಿ ಈಶ್ವರ ಖಂಡ್ರೆ ಅವರು ಈ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಾರೆ. ಇದನ್ನ ತನಿಖೆಗೆ ಒಳಪಡಿಸಬೇಕು. ಅಲ್ಲಿಯವರೆಗೆ ಈಶ್ವರ ಖಂಡ್ರೆ ಅವರಿಂದ ರಾಜೀನಾಮೆ ಪಡೆದುಕೊಳ್ಳಿʼ ಎಂದು ಆಗ್ರಹಿಸಿದ್ದಾರೆ.





