ಈಗಿನ ಕಾಲದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಲ್ಲ, ಒಮ್ಮೆ ಗ್ರಾಮ ಪಂಚಾಯತ್ ಸದಸ್ಯರಾದರೂ ಸಾಕು. ಕನಿಷ್ಠ ಸ್ವಂತ ಸೂರು, ಒಂದಿಷ್ಟು ದುಡ್ಡು ಮಾಡುವುದು ಮಾಮೂಲಿ. ಆದರೆ, ಅದಕ್ಕೆ ಅಪವಾದ ಎಂಬುವಂತೆ ಇಲ್ಲೊಬ್ಬ ಮಹಿಳೆ ಮೂರು ದಶಕಗಳ ಹಿಂದೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚುಕ್ಕಾಣಿ ಹಿಡಿದು ಅಧಿಕಾರ ನಡೆಸಿದರೂ ಸ್ವಂತ ಮನೆ ಮಾರಾಟ ಮಾಡಿ ಜೀವನಕ್ಕಾಗಿ ಪರದಾಡುವಂತಾಗಿದೆ.
ತನ್ನೂರಿನ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಕೆಲ ವರ್ಷ ಕಾರ್ಯಭಾರ ನಡೆಸಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆಯೊಬ್ಬರು ಈಗ ಸ್ವಂತ ಸೂರಿಲ್ಲದೆ, ನಿತ್ಯದ ಅನ್ನಕ್ಕಾಗಿ ಪರದಾಟ ನಡೆಸುತ್ತಿರುವ ವೃದ್ಧ ದಂಪತಿಯ ಕರುಣಾಜನಕ ಕಥೆ ಇದು.
ಕಮಲನಗರ ತಾಲೂಕು ಕೇಂದ್ರದ ಮದನೂರು ರಸ್ತೆಯಲ್ಲಿರುವ ವಿಶ್ವಾಸನಗರ ಬಡಾವಣೆಯಲ್ಲಿ 70 ಆಸುಪಾಸಿನ ವಯೋವೃದ್ಧ ದಂಪತಿಗಳಾದ ಪ್ರಭುದಾಸ-ಸುಶೀಲಾಬಾಯಿ ಸೂರ್ಯವಂಶಿ ಅವರು ಸುಮಾರು ಒಂದೂವರೆ ದಶಕದಿಂದ ಸ್ವಂತ ಸೂರಿಲ್ಲದೆ ಬೇರೆಯವರ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ʼಈದಿನʼ ಪ್ರತಿನಿಧಿ ಅವರ ಮನೆಗೆ ಭೇಟಿ ನೀಡಿ ಮಾತಿಗಿಳಿದಾಗ, ʼನನ್ನ ಹೆಸರು ಸುಶೀಲಾಬಾಯಿ ವಯಸ್ಸು 70, ಪತಿ ಪ್ರಭುದಾಸ ಸೂರ್ಯವಂಶಿ ಅವರ ವಯಸ್ಸು 75ರ ಆಸುಪಾಸು. ಪತಿ ಕೊಳಲು ಊದುವುದು, ನಾನು ಕೂಲಿ ಕೆಲಸ, ಇದು ನಮ್ಮ ಬದುಕಿನ ಕಾಯಕವಾಗಿತು. ಅಂದು 1992ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಂದೆ. ಪರಿಶಿಷ್ಟ ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನ ಒಲಿದು ಬಂತು. ಎಲ್ಲರ ಒತ್ತಾಯ ಮೇರೆಗೆ ಅಧ್ಯಕ್ಷೆಯಾದೆ. ಆದರೆ ಅದು ಪೂರ್ಣ ಅವಧಿವರೆಗೆ ಇರಲಿಲ್ಲ. ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಪಾಸಾದ ಹಿನ್ನೆಲೆ ನಾನು ಅಧ್ಯಕ್ಷೆ ಸ್ಥಾನ ಕಳೆದುಕೊಳ್ಳಬೇಕಾಯಿತುʼ ಎಂದು ನಿರಾಸೆಯಿಂದ ಹೇಳಿದರು.
ʼಅಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಗಬೇಕಾದರೆ ಒಂದಿಷ್ಟು ಹಣ ಖರ್ಚು ಮಾಡಿದ್ದೇನೆ. ಅದಕ್ಕಾಗಿ ಸಾಲ ಮಾಡಿಕೊಂಡೆ. ಅಧ್ಯಕ್ಷ ಅವಧಿಯಲ್ಲಿ ಜನರಿಗೆ ಸೂರು ಕೊಡಿಸುವ ಕೆಲಸ ಸೇರಿ ಕೈಲಾದಷ್ಟು ಒಳ್ಳೆ ಕೆಲಸ ಮಾಡಿದ್ದೇನೆ. ಸ್ವಂತಕ್ಕಾಗಿ ಏನೂ ಮಾಡಿಕೊಳ್ಳಲಿಲ್ಲ. ಆ ಸಾಲ ಹಾಗೇ ಬೆಳೆಯಿತು. ಬೇರೆ ದಾರಿ ಕಾಣದೆ 80 ಸಾವಿರಕ್ಕೆ ಸ್ವಂತ ಮನೆ ಮಾರಾಟ ಮಾಡಿ ಸಾಲ ತೀರಿಸಿದೆ. ಬಳಿಕ ಮತ್ತೊಂದು ಮನೆ ಖರೀದಿಸಿ ಕೆಲ ವರ್ಷ ಉಳಿದೆವು. ಕಿತ್ತು ತಿನ್ನುವ ಬಡತನ ಬೆನ್ನು ಬಿಡದಕ್ಕೆ ಆ ಮನೆಯೂ ಮಾರಾಟ ಮಾಡಬೇಕಾಯಿತು. ಕಳೆದ 10-15 ವರ್ಷದಿಂದ ಅವರಿವರ ಮನೆಯಲ್ಲಿ ಉಳಿದು ದಿನದೂಡುತ್ತಿದ್ದೇವೆʼ ಎಂದು ಬದುಕಿನ ಘಟನೆ ವಿವರಿಸುವಾಗ ಸುಶೀಲಾಬಾಯಿ ಕಣ್ಣಾಲಿ ಒದ್ದೆಯಾದವು.
ʼನನಗೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಮಗಳು. ಮೂವರದು ಮದುವೆಯಾಗಿದೆ, ಮೊಮ್ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳು ಕಮಲನಗರದಲ್ಲಿಯೇ ವಾಸವಿದ್ದಾರೆ. ಅವರಿಗೂ ಸ್ವಂತ ಸೂರಿಲ್ಲ. ಒಪ್ಪೊತ್ತಿನ ಊಟಕ್ಕಾಗಿ ಕೂಲಿ-ನಾಲಿ ಮಾಡುವುದು ಅವರಿಗೂ ಅನಿವಾರ್ಯ. ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ಸಾಕುವುದು ಕಷ್ಟವೆಂದು ನಾವೇ ಪ್ರತ್ಯೇಕವಾಗಿದ್ದೇವೆ. ಈ ಹಿಂದೆ ಹೋಟೆಲ್‌ನಲ್ಲಿ ಪಾತ್ರೆ ತೊಳೆಯುವುದು, ಹೊಲದಲ್ಲಿ ಕೂಲಿ ಕೆಲಸ ಮಾಡಲು ಹೋಗುತ್ತಿದ್ದೆ. ಈಗ ಇಬ್ಬರಿಗೂ ವಯಸ್ಸಾಗಿದೆ, ನನಗೆ ಕಣ್ಣು ಕಾಣದೆ ಕೈಲಾಗದೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜೀವನ ನಡೆಸುವುದೇ ದುಸ್ತರವಾಗಿದೆʼ ಎಂದು ನೋವು ಹಂಚಿಕೊಂಡರು.
ʼಗ್ರಾಮ ಪಂಚಾಯತ್ ಅಧ್ಯಕ್ಷೆ ಇರುವಾಗ ಸುಶೀಲಾಬಾಯಿ ಅವರು ಕೈಲಾದಷ್ಟು ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ಜನರಿಗೆ ಸ್ವಂತ ಭೂಮಿ, ಮನೆ ಸೇರಿದಂತೆ ವಿವಿಧ ಕೆಲಸ ಮಾಡಿರುವುದಾಗಿ ಅವರೇ ಹೇಳುತ್ತಾರೆ. ಆದರೆ ಸುಮಾರು ವರ್ಷಗಳಿಂದಲೂ ಬೇರೆಯವರ ಮನೆಯಲ್ಲಿ ದಂಪತಿ ವಾಸಿಸುತ್ತಿದ್ದರೂ ಗ್ರಾಮ ಪಂಚಾಯಿತಿಯಾಗಲಿ, ಜನಪ್ರತಿನಿಧಿಗಳಾಗಲಿ ಯಾರೊಬ್ಬರೂ ಈ ದಂಪತಿಗೆ ಮನೆ ಮಂಜೂರು ಮಾಡಿಕೊಡದೆ ಇರುವುದು ವಿಪರ್ಯಾಸ.
ಈ ಬಗ್ಗೆ ಪ್ರಭುದಾಸ ಸೂರ್ಯವಂಶಿ ಅವರನ್ನು ವಿಚಾರಿಸಿದಾಗ ʼಅನೇಕ ಬಾರಿ ಪಂಚಾಯಿತಿ ವತಿಯಿಂದ ಮನೆಗಾಗಿ ಅಲೆದಾಡಿದ್ದೇವೆ, ಹಣದ ಬೇಡಿಕೆಯಿಟ್ಟಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಹೆಣಗಾಡುತ್ತಿರುವ ನಮ್ಮಲ್ಲಿ 30-40 ಸಾವಿರ ಹಣ ಎಲ್ಲಿಂದ ತರಬೇಕು. ಹಣ ಕೊಡಲು ಕೈಲಾಗದೆ ಸುಮ್ಮನಾಗಿ ಬೇರೆಯವರ ಮನೆಯಲ್ಲಿ ದಿನಗಳೆಯುತ್ತಿದ್ದೇವೆʼ ಎಂದು ಅಳಲು ತೋಡಿಕೊಂಡರು.
ಕೋವಿಡ್ ನಂತರ ವಿಶ್ವಾಸನಗರದ ಸೈಲಾನಿ ಶಾ ಎಂಬುವವರ ಮನೆಯಲ್ಲಿ ದಂಪತಿ ವಾಸವಿದ್ದಾರೆ. ಸೈಲಾನಿ ಶಾ ಅವರು ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಾರೆ. ಖಾಲಿ ಇರುವ ಅವರ ಮನೆ ಪೂರ್ತಿ ಸುಶೀಲಾಬಾಯಿ ಅವರೇ ಬಳಸುತ್ತಾರೆ. ದಂಪತಿ ಪ್ರತಿನಿತ್ಯ ಬೆಳಿಗ್ಗೆ-ಸಂಜೆ ಗ್ರಾಮದಲ್ಲಿರುವ ಆಶೀರ್ವಾದ ವೃದ್ಧಾಶ್ರಮಕ್ಕೆ ತೆರಳಿ ಊಟ ಮಾಡಿ ಅಲ್ಲಿಯೇ ಕಾಲಕಳೆಯುತ್ತಾರೆ. ಒಮ್ಮೊಮ್ಮೆ ಅಲ್ಲೇ ಮಲಗುತ್ತಾರೆ. ಈಗ ಸುಶೀಲಾಬಾಯಿ ಅವರ ಕಣ್ಣಿನ ಶಸ್ತ್ರಚಿಕಿತ್ಸೆಯಾಗಿದ್ದು, ಅವರ ಪತಿ ಆರೈಕೆ ಅವರನ್ನು ಮಾಡುತ್ತಿದ್ದಾರೆ.
ಈ ಬಗ್ಗೆ ಸುಶೀಲಾಬಾಯಿ ಅವರ ಹಿರಿಯ ಮಗ ರಾಜಕುಮಾರ ಅವರನ್ನು ಮಾತನಾಡಿಸಿದಾಗ, ʼನಾನು ಕೂಲಿ ಮಾಡುತ್ತೇನೆ. ತಂದೆ-ತಾಯಿ ಪ್ರತ್ಯೇಕ ಮನೆಯಲ್ಲಿ ವಾಸವಿದ್ದರೂ ಅವರನ್ನು ನೋಡಿಕೊಳ್ಳುತ್ತಿದ್ದೇನೆ. ನಮಗೆ ಸರ್ಕಾರದಿಂದ ಮನೆ ಮಂಜೂರು ಮಾಡಿದರೆ ಆಸರೆಯಾಗುತ್ತದೆʼ ಎಂದು ಹೇಳಿದರು.
ಕಮಲನಗರ ಗ್ರಾಪಂ ಪಿಡಿಒ ದಿಲೀಪ ಹೆಡಗಾಪುರೆ ಅವರು ʼಈದಿನʼ ಜೊತೆ ಮಾತಾಡಿ, ʼನಾನು ಈಚೆಗೆ ಗ್ರಾ.ಪಂ.ಗೆ ಬಂದಿರುವೆ, ದಂಪತಿ ಮನೆಗೆ ಖುದ್ದು ಭೇಟಿ ನೀಡಿ ದಾಖಲೆ ಪರಿಶೀಲಿಸುವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅವರಿಗೆ ಮನೆ ಮಂಜೂರು ಮಾಡಿಸಲು ಪ್ರಯತ್ನಿಸುವೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಕುಡಿಯುವ ನೀರಿನ ಸಮಸ್ಯೆಯೇ? : ನೇರವಾಗಿ ಅಧಿಕಾರಿಗಳಿಗೆ ಸಂಪರ್ಕಿಸಲು ಮನವಿ
ವೃದ್ಧ ದಂಪತಿಗೆ ಸರ್ಕಾರದ ಮಾಸಿಕ ವೃದಾಪ್ಯ ವೇತನ ಬರುತ್ತದೆ. ಗ್ಯಾರಂಟಿ ಯೋಜನೆಯ ಮಾಸಿಕ 2 ಸಾವಿರ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ಜೀವನಕ್ಕೆ ಆಧಾರವಾಗಿದೆ. ಆ ಹಣ ಆಸ್ಪತ್ರೆ, ಮನೆ ಖರ್ಚಿಗೂ ಸಾಕಾಗುತ್ತಿಲ್ಲ. ಸ್ವಂತ ಮನೆಯಿಲ್ಲದೆ ಬೇರೆಯವರ ಮನೆಯೇ ಸರ್ವಸ್ವ ಎಂದು ತಿಳಿದು ಇಳಿ ವಯಸ್ಸಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕನಿಷ್ಠ ಈ ವಯಸ್ಸಿನಲ್ಲಾದರೂ ಸರ್ಕಾರದಿಂದ ದಂಪತಿಗಳಿಗೆ ಮನೆ ಮಂಜೂರು ಮಾಡಿದರೆ ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಮಾತಾಗಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




