ಯುವಕನೊಬ್ಬನ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಬೇಸತ್ತು ಬಾಲಕಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾಲ್ಕಿ ತಾಲೂಕಿನ ಲಾಧಾ ಗ್ರಾಮದಲ್ಲಿ ನಡೆದಿದೆ.
ಭಾಲ್ಕಿ ತಾಲ್ಲೂಕಿನ ಲಾಧಾ ಗ್ರಾಮದ ನಿವಾಸಿ ಭಾಗ್ಯಲಕ್ಷ್ಮಿ (15) ಮೃತ ಬಾಲಕಿ. ಅದೇ ಗ್ರಾಮದ ನಿವಾಸಿ ಕೃಷ್ಣ ಬಿರಾದಾರ (23), ಸುಭಾಷ್ ಬಿರಾದಾರ (55), ಪಾಂಡುರಂಗ ಬಿರಾದಾರ (30), ಶ್ರೀರಂಗ ಬಿರಾದಾರ ( 27) ಎಂಬುವವರೇ ಬಾಲಕಿಯ ಸಾವಿಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಆರೋಪಿ ಕೃಷ್ಣ ಬಾಲಕಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಈ ವಿಷಯವನ್ನು ಬಾಲಕಿ ಮನೆಯಲ್ಲಿ ತಿಳಿಸಿದಾಗ, ಪೋಷಕರು ಯುವಕನಿಗೆ ಬುದ್ಧಿವಾದ ಹೇಳಿದ್ದರು. ಆಗ ಆತ ಕಿರುಕುಳ ನೀಡುವುದಿಲ್ಲ ಎಂದು ಒಪ್ಪಿಕೊಂಡಿದ್ದರೂ, ತನ್ನ ಚಾಳಿ ಮುಂದುವರಿಸಿದ್ದನು. ಬಾಲಕಿಯ ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದನು ಎಂದು ತಿಳಿದು ಬಂದಿದೆ.
ಯುವಕನ ವರ್ತನೆಯಿಂದ ಮನನೊಂದಿದ್ದ ಬಾಲಕಿ ಶೌಚಾಲಯಕ್ಕೆ ಹೋಗಿ ಬರುವೆ ಎಂದು ಹೋಗಿ ತೆರೆದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮರುದಿನ ಬಾವಿಯೊಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ನನ್ನ ಮಗಳ ಸಾವಿಗೆ ಯುವಕ ಕೃಷ್ಣ ಸೇರಿ ನಾಲ್ಕು ಜನ ಆರೋಪಿತರೇ ಕಾರಣ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೃತ ಬಾಲಕಿಯ ತಂದೆ ಸಂಜಕುಮಾರ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೀದರ್ | ಅಧಿಕಾರಿಗಳ ಮನವೋಲಿಕೆ ವಿಫಲ : ಮುಂದುವರೆದ ಅಲೆಮಾರಿಗಳ ಧರಣಿ
ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಕಲಂ 11(3), 12, 17 , ಕಲಂ 108,351(2) ನಲ್ಲಿ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ .





