ʼಛಲಬೇಕು ಶರಣಂಗೆ ಪರಧನ, ಪರಸ್ತ್ರೀ, ಪರದೈವ ಒಲ್ಲೆನೆಂಬʼ ಎನ್ನುವ ವಚನಕಾರರ ಸಂದೇಶ ಪಾಲಿಸಿದರೆ ಮನುಷ್ಯನ ಬದುಕಿಗೆ ಘನತೆ ಬರುತ್ತದೆ ಎಂದು ಬಸವಕೇಂದ್ರ ಜಿಲ್ಲಾಧ್ಯಕ್ಷ ಶರಣಪ್ಪಾ ಮಿಠಾರೆ ನುಡಿದರು.
ಬೀದರ್ ನಗರದಲ್ಲಿ ವಚನಾಮೃತ ಕನ್ನಡ ಸಂಘದಿಂದ ಶನಿವಾರ ಆಯೋಜಿಸಲಾದ ಡೋಹರ ಕಕ್ಕಯ್ಯ ಹಾಗೂ ವೀರಶರಣೆ ಗುಡ್ಡಾಪುರದ ದಾನಮ್ಮ ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ʼಮನುಷ್ಯ ಬದುಕಿ ಸಾಯಬಾರದು, ಸತ್ತು ಬದುಕಬೇಕುʼ ಎಂದು ಮಾರ್ಮಿಕವಾಗಿ ಹೇಳಿದರು.
ʼಸಮಾಜಕ್ಕೆ ನಮ್ಮದೇನಾದರೂ ಕಾಣಿಕೆ ಕೊಡಬೇಕೆಂಬ ಯೋಚನೆ ಮಾಡಬೇಕೆ ಹೊರತು ಸಮಾಜದಿಂದ ನಾವು ಏನಾದರೂ ಪಡೆಯಬೇಕೆಂಬ ಅಪೇಕ್ಷೆ ಇರಬಾರದುʼ ಎಂದರು.
ರೇಣುಕಾ ಎನ್.ಬಿ. ಅವರು ವೀರಶರಣೆ ಗುಡ್ಡಾಪುರದ ದಾನಮ್ಮ ಕುರಿತು ಮಾತನಾಡಿ, ʼಲಿಂಗಮ್ಮ ಎಂಬ ಹೆಸರು ಹೊಂದಿ ಭಕ್ತಿ ಭಂಡಾರಿ ಬಸವಣ್ಣನವರ ಪ್ರಭಾವದಿಂದ ದಾನಮ್ಮನೆಂಬ ಹೆಸರು ಪಡೆದು ಪ್ರಸಿದ್ಧಳಾದ ಗುಡ್ಡಾಪುರದ ದಾನಮ್ಮನ ಬದುಕಿನ ಕಥೆ ಕೇಳಿದವರಿಗೆ ರೋಮಾಂಚನ ಉಂಟಾಗುತ್ತದೆ. ದಾನಮ್ಮ ಯಾವುದೇ ರೀತಿಯ ವಚನಗಳನ್ನು ರಚನೆ ಮಾಡದೆ ಕೇವಲ ಶರಣರ ಜೀವನದ ಸಂದೇಶ ಹಾಗೂ ವಚನಗಳ ಸಾರವನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಮಾಡಿದ್ದಾರೆʼ ಎಂದು ತಿಳಿಸಿದರು.
ಡೋಹರ ಕಕ್ಕಯ್ಯನವರು ಕುರಿತು ರೇಣುಕಾ ಮಳ್ಳಿ ಪೂಜಾರಿ ಅವರು ಮಾತನಾಡಿ, ʼಡೋಹರ ಕಕ್ಕಯ್ಯ ಅವರು ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು ಅನುಭವ ಮಂಟಪದ ಹಿರಿಯ ಸದಸ್ಯರಾಗಿ ಬಸವಣ್ಣನವರಿಗೆ ಆಪ್ತರಾಗಿ ಗುರುತಿಸಿಕೊಂಡಿದ್ದರು. ಅಭಿನವ ಮಲ್ಲಿಕಾರ್ಜುನ ಎಂಬ ಅಂಕಿತ ನಾಮದಿಂದ ಆರು ವಚನಗಳನ್ನು ರಚಿಸಿದರು. ಕಕ್ಕಯ್ಯನವರು ತಮ್ಮ ವಚನಗಳಲ್ಲಿ ಮನುಷ್ಯ ಮನುಷ್ಯನಾಗಿ ಹೇಗೆ ಬಾಳಬೇಕೆಂಬ ಸಂದೇಶ ನೀಡಿ ಕನ್ನಡ ಕುಲಕ್ಕೆ ದೊಡ್ಡ ಕಾಣಿಕೆ ನೀಡಿದ್ದಾರೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ʼವಿಬಿ- ಜಿ ರಾಮ್ ಜಿʼ ಕರಾಳ ಕಾಯ್ದೆ ಹಿಂಪಡೆಯಲು ದೇಶಾದ್ಯಂತ ಆಂದೋಲನ : ಸಚಿವ ಈಶ್ವರ ಖಂಡ್ರೆ
ಸಾಯಿನಾಥ ಬಿರಾದಾರ ಅವರು ಕಾರ್ಯಕ್ರಮಕ್ಕೆ ದಾಸೋಹಗೈದದರು. ಮುಖ್ಯ ಅತಿಥಿಗಳಾಗಿ ಹಾವಗಿರಾವ ಬಚ್ಚಣ್ಣ ಉಪಸ್ಥಿತರಿದ್ದರು. ಶ್ರೀಕಾಂತ ಬಿರಾಗಾರ ವಚನ ಗಾಯನ, ಪ್ರವೀಣ ನಾಡ ಗೀತೆ ಹಾಡಿದರು. ಪದ್ಮರಾಜ ಅಜಿತಮಣಿ ನಿರೂಪಿಸಿದರು. ಸಂತೋಷ ಮಂಗಳೂರೆ ಸ್ವಾಗತಿಸಿದರು. ಪರಮೇಶ್ವರ ಭೂಶೆಟ್ಟಿ ವಂದಿಸಿದರು.





