ಜಾಗತಿಕ ಬದುಕಿನಲ್ಲಿ ಪುಸ್ತಕಗಳು ಮಹತ್ವದ ಪಾತ್ರವಹಿಸುತ್ತವೆ. ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿದ್ದರೆ ಬದುಕಿನ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಹೇಳಿದರು.
ಬೀದರ ನಗರದ ಶ್ರೀ ಚಿದಂಬರ ಶಿಕ್ಷಣ ಸಂಸ್ಥೆಯ ಸದ್ಗುರು ಸಿದ್ಧಾರೂಡ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ವತಿಯಿಂದ ಆಯೋಜಿಸಿದ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮದ ಅಂಗವಾಗಿ ಕುವೆಂಪು ರಚಿತ ‘ಕಾನೂರು ಹೆಗ್ಗಡಿತಿ’ ಕಾದಂಬರಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವುದು ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. ಪಂಪ, ರನ್ನ, ಕುವೆಂಪು, ಬೇಂದ್ರೆ ಸೇರಿದಂತೆ ಹಲವು ಸಾಹಿತಿಗಳ ಸಾಹಿತ್ಯ ಓದುವುದು ತುಂಬಾ ಅಗತ್ಯವಾಗಿದೆ ‘ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ನಿರ್ದೇಶಕ ಸ್ವಾಮಿ ಸ್ವಾತ್ಮಾನಂದ ಗಿರಿ ಮಾತನಾಡಿ, ‘ವಿದ್ಯಾರ್ಥಿಗಳು ಓದನ್ನು ಕೇವಲ ಹವ್ಯಾಸವಾಗಿ ಮಾತ್ರವಲ್ಲದೆ ಜೀವನದ ಭಾಗವಾಗಿ ಮಾಡಿಕೊಳ್ಳಬೇಕು. ಸಾಹಿತ್ಯವು ಮನಸ್ಸಿಗೆ ಹಿತವನ್ನು ನೀಡುವುದರ ಜೊತೆಗೆ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ಸಂಗಪ್ಪ ತೌಡಿ ಮಾತನಾಡಿ, ‘ಕಾನೂರು ಹೆಗ್ಗಡಿತಿ ಕಾದಂಬರಿಯು ಮಲೆನಾಡಿನ ಪರಿಸರ, ಕೌಟುಂಬಿಕ ಬಿಕ್ಕಟ್ಟುಗಳು ಹಾಗೂ ಮಹಿಳಾ ಬದುಕಿನ ಸಂಕಷ್ಟಗಳನ್ನು ಚಿತ್ರಿಸುತ್ತದೆ. ಯಜಮಾನಿಕೆ ಮತ್ತು ಅಧಿಕಾರ ಹೇಗೆ ಶೋಷಿತರನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ ಎಂಬುದನ್ನು ಕಾದಂಬರಿ ವಿವರಿಸುತ್ತದೆ’ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಹಾವಗಿರಾವ ಮೈಲಾರೆ ಮಾತನಾಡಿ, ‘ವಿದ್ಯಾರ್ಥಿಗಳು ಓದುವ ಮತ್ತು ಬರೆಯುವ ಗುಣವನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳಿಗೆ ಬಲಿಯಾಗದೆ ಓದುವ ಹವ್ಯಾಸದಲ್ಲಿ ತೊಡಗಬೇಕು’ ಎಂದು ಸಲಹೆ ನೀಡಿದರು.
ಅತಿಥಿಗಳಾದ ಇಂದಿರಾಬಾಯಿ ಗುರುತೆಪ್ಪ ಶೆಟಕಾರ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿ, ‘ಯಾರು ತಲೆಬಾಗಿ ಓದುತ್ತಾರೋ ಅವರಿಗೆ ಪುಸ್ತಕ ತಲೆ ಎತ್ತಿ ಬದುಕುವಂತೆ ಮಾಡುತ್ತದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಾಗಪ್ಪ ಜಾನಕನೋರ ಮಾತನಾಡಿ, ‘ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕವಿತೆ ಬರೆಯುವ ಮೂಲಕ ಸಾಹಿತ್ಯದಲ್ಲಿ ತೊಡಗಬೇಕು’ ಎಂದು ಆಶಿಸಿದರು.
ಇದನ್ನೂ ಓದಿ : ಭಾಲ್ಕಿ | ಟ್ರ್ಯಾಕ್ಟರ್ ಪಲ್ಟಿ : 13 ವರ್ಷದ ಬಾಲಕ ಸ್ಥಳದಲ್ಲೇ ಸಾವು
ಉಪನ್ಯಾಸಕರಾದ ಈಶ್ವರ ರೆಡ್ಡಿ, ಡಾ.ಪಂಡಿತ ಗಂಗಶೆಟ್ಟಿ, ಬಸವರಾಜ ಬಿರಾದರ, ರಾಜಶೇಖರ ಸಜ್ಜನ್, ನಟರಾಜ ಸುತಾರ, ನೆಹರು ಪವಾರ, ದೇವೇಂದ್ರ ಪೂಜಾರಿ, ಮಂಗಲಾ, ವಿಜಯಲಕ್ಷ್ಮಿ, ಶ್ವೇತಾ, ಅರ್ಚನಾ, ಡಾ.ಪ್ರವೀಣ ಸಿಬ್ಬಂದಿಗಳಾದ ಆಕಾಶ, ಮಲ್ಲು, ಮಾಲಾಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಉಪನ್ಯಾಸಕಿ ರಾಜಮ್ಮ ನೆಳಗೆ ನಿರೂಪಿಸಿದರು. ರಾಖಿ ಕಾಡಗೆ ಸ್ವಾಗತಿಸಿದರು, ಸಪ್ನಾ ಸ್ವಾಮಿ ವಂದಿಸಿದರು.





