ಜಾನಪದದ ನಿರ್ಲಕ್ಷ್ಯ ಮತ್ತು ಮರೆವು ಒಂದರ್ಥದಲ್ಲಿ ನಮ್ಮ ಜ್ಞಾನ ಪರಂಪರೆಯ ವಿಸ್ಮೃತಿಯಾಗಿದೆ ಎಂದು ಹುಲಸೂರ ವಲಯ ಕಸಾಪ ಮಾಜಿ ಅಧ್ಯಕ್ಷ ಮಲ್ಲಪ್ಪ ಧಬಾಲೆ ಹೇಳಿದರು.
ಬೀದರ್ ಜಿಲ್ಲೆಯ ಹುಲಸೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ‘ಜಾನಪದ: ಚಿಂತನೆ ಮತ್ತು ಕಲಾ ಉತ್ಸವ’ ಸಮಾರಂಭದಲ್ಲಿ ಅವರು ಮಾತನಾಡಿದರು. “ಜನಪದರು ಸೃಷ್ಟಿಸಿದ ಜ್ಞಾನ ಪರಂಪರೆ ಅಗಾಧವಾಗಿದೆ. ಯುವ ಸಮುದಾಯದಿಂದ ಜಾನಪದದ ಅವಗಾಹನೆ, ನಿರ್ಲಕ್ಷ್ಯ ನೋವು ತರುವುದು” ಎಂದರು.
“ಹಳ್ಳಿಗರು ವಲಸೆ ಹೋಗುವುದರಿಂದ ಜಾನಪದ ಅವನತಿಗೆ ಸರಿಯುತ್ತಿದೆ. ಲಿಂಗ, ಜಾತಿ, ಮತದ ಎಲ್ಲೆಗಳನ್ನು ಮೀರಿದ ಜ್ಞಾನ ನಿಸರ್ಗ ಸಹಜವಾಗಿದೆ. ಅದರ ಸಂಪಾದನೆಗಾಗಿ ಶ್ರಮ, ಅಧ್ಯಯನ ಅಗತ್ಯ” ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಹುಲಸೂರ ತಾಲೂಕು ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಮಾತನಾಡಿ, “ಜಾನಪದ ನಶಿಸಿ ಹೋಗುತ್ತಿರುವ ಸಮಯದಲ್ಲಿ ಹಳ್ಳಿಗಳಲ್ಲಿ ಜನಪದ ಕಲೆಗಳನ್ನು ರಕ್ಷಿಸುವ ಕೆಲಸ ನಡೆಯಬೇಕು” ಎಂದರು.
“ಜಾನಪದ ನಿಂತ ನೀರಲ್ಲ. ಜಾನಪದ ಕಲಾವಿದರಿಗೆ ಸರ್ಕಾರದಿಂದ ಮಾಶಾಸನ ಸವಲತ್ತುಗಳನ್ನು ನೀಡಬೇಕು. ಇಂಗ್ಲಿಷ್ ಮಾಧ್ಯಮದ ಶಿಕ್ಷಣ, ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಮೈಗೂಡಿಸಿಕೊಂಡಿರುವ ಇಂದಿನ ಪೀಳಿಗೆಯ ಮನೋಭಾವದ ಎದುರು ಜಾನಪದವನ್ನು ಉಳಿಸುವ ಸವಾಲು ಈ ಕಾಲದ್ದಾಗಿದೆ” ಎಂದರು.
ಕಜಾಪ ತಾಲೂಕು ಅಧ್ಯಕ್ಷ ಶಿವರಾಜ್ ಖಪಲೆ ಮಾತನಾಡಿ, “ಅತಿಯಾದ ಟಿವಿ, ಮೋಬೈಲ್ ಬಳಕೆಯಿಂದ ಜನಪದ ಸಂಸ್ಕೃತಿ ಅಪಾಯದಲ್ಲಿದೆ. ಅಳಿವಿನಂಚಿನಲ್ಲಿರುವ ಜಾನಪದ ಹಳ್ಳಿಯ ಭಜನೆ, ಹಂತಿ ಹಾಡು, ಜೋಗುಳ ಪದಗಳಲ್ಲಿ ಉಳಿದಿದೆ ಶಾಲಾ ಕಾಲೇಜುಗಳಲ್ಲಿ ಜಾನಪದ ಪರಂಪರೆ ಬೆಳೆಸುವ ಅಗತ್ಯವಿದೆ” ಎಂದರು.
ಮುಖ್ಯೋಪಾಧ್ಯಾಯ ದೇವಾನಂದ್ ಕುರದೆ ಮಾತನಾಡಿ, “ಪ್ರಾಚೀನ ಸಂಸ್ಕೃತಿ, ಮಾನವೀಯ ಪರಂಪರೆ ಪುನಃ ನೆನಪಿಸಲು, ಮತ್ತೆ ಕಟ್ಟಲು ಜಾನಪದ ಅವಶ್ಯಕ. ಜನಪದ ಲಕಲೆ, ಸಂಗೀತ, ಸಾಹಿತ್ಯ ಮಾನಸಿಕ ನೆಮ್ಮದಿಗೆ ಹಾದಿಯಾಗಿವೆ. ಜಾನಪದದಿಂದ ಸಾಮಾಜಿಕ ಸಂವರ್ಧನೆ ಸಾಧ್ಯ” ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದತ್ತು ರಾಘೋ, ಧೂಳಪ್ಪ ಭರಮಶೆಟ್ಟೆ, ಶಿವಾಜಿರಾವ ಸೂರ್ಯವಂಶಿ, ಲಹು ಬಿರಾದಾರ, ವಿಶ್ವಜೀತ ಕುರದೆ, ಪ್ರಭುರಾವ ಬಿರಾದಾರ, ಸತೀಶ್ ಸ್ವಾಮಿ, ವೆಂಕಟರಾವ್ ಬಿರಾದಾರ, ಭಗವಾನ್ ಬಿರಾದಾರ, ರೇವಣ್ಣ ದರ್ಗೆ,ಜಗನ್ನಾಥ ಬಿರಾದಾರ, ದತ್ತು ಮೇತ್ರೆ, ಲಕ್ಷ್ಮಣ ಬಿರಾದಾರ, ನಾಗೇಶ್ ನಿಲಂಗೆ, ಡಾ. ಭೀಮಾಶಂಕರ ಬಿರಾದಾರ ಸೇರಿದಂತೆ ಅನೇಕರಿದ್ದರು.
ರಾಮಶಟ್ಟಿ ತಾಂಬೋಳೆ, ಗುರುನಾಥ ತಾಂಬೋಳೆ, ಝಟಿಂಗರಾವ ಬಿರಾದಾರ, ಜಗನ್ನಾಥ ತಾಂಬೋಳೆ ಮುಂತಾದವರು ವಚನ, ತತ್ವಪದ, ಜನಪದ ಹಾಗೂ ಭಜನೆ ಹಾಡುಗಳನ್ನು ಹಾಡಿದರು.




