ಸಮಾಜದಲ್ಲಿ ಚಂದ್ರ ಗ್ರಹಣದ ಬಗ್ಗೆ ಇರುವ ಮೌಢ್ಯಗಳನ್ನು ನಿವಾರಿಸಲು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಭಾರತೀಯ ಸಂವಿಧಾನದ ಆಶಯದಂತೆ ಮೌಢ್ಯತೆ ವಿರುದ್ಧ ಬೀದರ್‌ನಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಭಾರತ ಜ್ಞಾನ ವಿಜ್ಞಾನ ಸಮಿತಿ, ವೈಜ್ಞಾನಿಕ ಸಂಶೋಧನಾ ಸಮಿತಿ, ಬುದ್ಧ ಬಸವ ಅಂಬೇಡ್ಕರ್ ಯುವ ಸಂಘ, ಬಸವ ಕೇಂದ್ರ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಮಾದರ ಚನ್ನಯ್ಯ ಸಹಕಾರ ಸಂಘ, ಪ್ರಭುರಾವ ಕಂಬಳೆವಾಲೆ ಕನ್ನಡ ಸೇವಾ ಸಂಘ ಮತ್ತು ಲಿಂಗಾಯತ ಸಮನ್ವಯ ಸಮಿತಿ ಸಹಯೋಗದಲ್ಲಿ ನಗರದ ಅಂಬೇಡ್ಕರ್ ವೃತ್ತದ ಬಳಿ ಚಂದ್ರ ಗ್ರಹಣ ವೇಳೆ ಬಾಳೆಹಣ್ಣು ತಿನ್ನುವ ಮೂಲಕ ಮೌಢ್ಯತೆಯ ಭೀತಿಯನ್ನು ತೊಲಗಿಸುವ ಸಂಕಲ್ಪ ಮಾಡಲಾಯಿತು.
ಆಕಾಶದಲ್ಲಿ ಖಗೋಳ ವಿಸ್ಮಯವಾಗಿ ಚಂದ್ರ ಗ್ರಹಣ ಸಂಭವಿಸಿದ್ದು, ಇದನ್ನು ʼರಕ್ತ ಚಂದಿರʼ ಎಂದೂ ಕರೆಯಲಾಗುತ್ತದೆ. ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ಸರಳರೇಖೆಯಲ್ಲಿ ಸಮೀಪಿಸಿದಾಗ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುವುದರಿಂದ ಚಂದ್ರಗ್ರಹಣ ಉಂಟಾಗುತ್ತದೆ. ಇದು ಮೌಢ್ಯದ ಸಂಕೇತವಲ್ಲ ಎಂದು ಎಲ್ಲರೂ ʼತೊಲಗಲಿ ತೊಲಗಲಿ ಮೌಢ್ಯತೆ ತೊಲಗಲಿʼ ಎಂಬ ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.
ʼಚಂದ್ರ ಕೆಂಪಾಗಿ ಕಾಣಿಸಿಕೊಳ್ಳುವ ಕಾರಣವೆಂದರೆ ಸೂರ್ಯನ ಬೆಳಕು ಭೂಮಿಯನ್ನು ದಾಟಿ ಚಂದ್ರನ ಮೇಲೆ ಬೀಳುವಾಗ ಕೆಂಪು ಬಣ್ಣದ ತರಂಗದೈರ್ಘ್ಯ ಹೆಚ್ಚು ಇರುವುದರಿಂದ ಕೆಂಪು ಕಿರಣಗಳು ಮಾತ್ರ ಚಂದ್ರನ ಮೇಲೆ ತಲುಪುತ್ತವೆ. ಇದರಿಂದ ಚಂದ್ರ ಕೆಂಪಾಗಿ ಕಾಣಿಸಿ ʼರಕ್ತ ಚಂದಿರʼ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸುಮಾರು 4 ಲಕ್ಷ ಕಿಲೋಮೀಟರ್ ದೂರದಲ್ಲಿ ನಡೆಯುವ ಈ ಖಗೋಳ ಘಟನೆಗೆ ಭೂಮಿಯ ಮೇಲಿನ ದೈನಂದಿನ ಕ್ರಿಯೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಗ್ರಾಪಂ ಮಾಜಿ ಅಧ್ಯಕ್ಷೆಗೆ ಇಲ್ಲ ಸ್ವಂತ ಸೂರು : ಅನ್ನ-ಆಸರೆಗೆ ವೃದ್ಧ ದಂಪತಿ ಪರದಾಟ!
ಈ ವೇಳೆ ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಸಮಿತಿ ಸದಸ್ಯ ಎಂ.ಎಸ್. ಮನೋಹರ, ಜಿಲ್ಲಾಧ್ಯಕ್ಷ ಕಲಾಲ್ ದೇವಿಪ್ರಸಾದ, ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ, ಬಸವಕೇಂದ್ರ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಸೇರಿದಂತೆ ಪ್ರಮುಖರಾದ ಕಾಶಿನಾಥ ಚೆಲ್ವಾ, ವಿಜಯಕುಮಾರ ಸೋನಾರೆ, ಮಹೇಶ ಗೋರನಾಳಕರ್, ಮಾರುತಿರಾವ ವಾಘಮಾರೆ, ರಾಜಕುಮಾರ ಕರುಣಾಸಾಗರ, ಜಗದೀಶ್ವರ ಬಿರಾದಾರ, ಧರ್ಮಪ್ರಕಾಶ ಆರ್ಯ, ಶಾಂತಕುಮಾರ ಉದಯಗಿರೆ, ಉಮೇಶ ಜಾಬಾ ಸೇರಿದಂತೆ ಅನೇಕರು ಭಾಗವಹಿಸಿದರು.





