ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಂಪೂರ್ಣವಾಗಿ ಜಾರಿಯಾಗುವವರೆಗೆ ಹೊಸ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಬೀದರ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಿತು.
ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಮುದಾಯದ ನೂರಾರು ಜನರು ಕೈಯಲ್ಲಿ ನೀಲಿ ಧ್ವಜ ಹಾಗೂ ಕೈ,ತಲೆಗೆ ಬಟ್ಟೆ ಸುತ್ತಿಕೊಂಡರು. ವೃತ್ತದಲ್ಲಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಸಿಎಂ ಸಿದ್ದರಾಮಯ್ಯ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ಮುಖಂಡರು ಮಾತನಾಡಿ, ‘ಸರ್ಕಾರವು ಶೈಕ್ಷಣಿಕ ಸಂಸ್ಥೆಗಳು ಹಾಗೂ ರಾಜ್ಯಾಧೀನ ಸೇವೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸುಮಾರು 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ಆದರೆ ಸಚಿವ ಸಂಪುಟದ ತೀರ್ಮಾನದಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಯಾಗುವವರೆಗೆ ಯಾವುದೇ ಹೊಸ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಬಾರದು ಎಂದು 2024ರ ನವೆಂಬರ್ 25ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಇಂತಹ ಸಂದರ್ಭದಲ್ಲಿ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸುವುದು ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ’ ಎಂದು ಆರೋಪಿಸಿದ್ದಾರೆ.
ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಪ್ರತಿಯೊಂದು ನೇಮಕಾತಿಯಲ್ಲಿ ಪ್ರವರ್ಗ (ಎ) ವರ್ಗಕ್ಕೆ ಶೇ.6 ರಷ್ಟು ಹುದ್ದೆಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಅಲ್ಲದೆ ಜನಸಂಖ್ಯೆಗೆ ಅನುಪಾತವಾಗಿ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮಾದಿಗ ಸಮುದಾಯಕ್ಕೆ ಸಮರ್ಪಕ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ಸರ್ಕಾರವು ಈಗಾಗಲೇ ಘೋಷಿಸಿರುವ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಿ, ಸಂಪೂರ್ಣ ಒಳಮೀಸಲಾತಿ ಜಾರಿಯಾಗುವವರೆಗೆ ಯಾವುದೇ ರೀತಿಯ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬಾರದು. ಬೀದರ್ ಜಿಲ್ಲೆಯ ಮಾದಿಗ ಸಮುದಾಯದ ಒಳ ಮೀಸಲಾತಿ ಹೋರಾಟಗಾರರ ಮೇಲಿನ ರೌಡಿಶೀಟರ್ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದರೆ, ತಾವೇ ರೂಪಿಸಿರುವ ಒಳಮೀಸಲು ಕಾಯಿದೆಗೆ ವಿರುದ್ಧವಾದ ನಿಲುವು ತಳೆದಂತಾಗುತ್ತದೆ. ನಮ್ಮ ಬೇಡಿಕೆಗಳನ್ನು ಪರಿಗಣಿಸಿ, ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಪ್ರವರ್ಗ (ಎ) ವರ್ಗಕ್ಕೆ ನಿಗದಿಪಡಿಸಿರುವ ಪ್ರಮಾಣದಂತೆ ಹೊಸ ಹುದ್ದೆಗಳ ನೇಮಕಾತಿಯಲ್ಲಿ ಜಾರಿಗೆ ತಂದು ಸಾಮಾಜಿಕ ನ್ಯಾಯ ಎತ್ತಿಹಿಡಿಯಬೇಕು ಹೋರಾಟಗಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಧರಿನಾಡಿನ ಅಭಿವೃದ್ಧಿಗೆ ಏನೇನು ಬೇಕು? ಬಜೆಟ್ ನಿರೀಕ್ಷೆಗಳೇನು?
ಬೀದರ್ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕಲ್ಲಪ್ಪ ವೈದ್ಯ ಸೇರಿದಂತೆ ಒಕ್ಕೂಟದ ಪ್ರಮುಖರಾದ ರಾಜು ಕಡ್ಯಾಳ, ಫರ್ನಾಂಡಿಸ್ ಹಿಪ್ಪಳಗಾಂವ, ದೇವಿದಾಸ ತುಮಕುಂಟೆ, ಪ್ರಭುರಾವ ತಾಳಮಡಗಿ, ಅಶೋಕ ಕಟ್ಟಿ, ವಿಜಯಕುಮಾರ ಹಿಪ್ಪಳಗಾಂವ, ಪರಮೇಶ್ವರ ಕಾಳಮದರಗಿ, ಕಮಲಾಕರ ಹೆಗಡೆ, ಸ್ವಾಮಿದಾಸ ಮೇಘಾ, ಯುವರಾಜ ಭೇಡೆ, ರವಿ ನಿಜಾಂಪುರೆ, ಸುಧಾಕರ ಕೊಳ್ಳುರ, ಲಕ್ಷ್ಮಣರಾವ ಮುರಾಳ, ವಿರಾಶೆಟ್ಟಿ ಬಂಬುಳಗಿ, ಆಸ್ಕರ್ ಫರ್ನಾಂಡಿಸ್, ಬಸವರಾಜ ಮಾಳಗೆ, ಉಮೇಶ ಗುತ್ತೆದಾರ್, ಥಾಮಸ್ ಬಾಪೂರ, ರಾಜು ಕಾಣೆ, ರಾಜು ಮುಸ್ತರಿ, ಸಚಿನ್ ಅಂಬೇಸಿಂಗೆ, ವಿಜಯಕುಮಾರ ಸೂರ್ಯವಂಶಿ, ಹರೀಶ ಗಾಯಕವಾಡ, ಪೀಟರ್ ಶ್ರೀಮಂಡಲ, ಸೂರ್ಯಕಾಂತ ದಂಡಿನ, ಸ್ವಾಮಿದಾಸ ಕೆಂಪೇನೂರ, ಪ್ರದೀಪ ಹೆಗಡೆ, ತುಕಾರಾಮ ಲಾಡೆ, ಲಾಲಪ್ಪ ನಿರ್ಣಾ, ರಾಜು ಸೋನೆ, ಶಿವಕುಮಾರ ಮೇತ್ರೆ, ಪಪ್ಪುರಾಜ ಚತುರೆ, ಅಭಿ ಕಾಳೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.





