ಕೃಷಿ ಲಾಭದಾಯಕ ಕ್ಷೇತ್ರವಾಗಲೂ ಚರ್ಚೆ, ಸಂಶೋಧನೆ, ಮಾರುಕಟ್ಟೆ ಲಭ್ಯತೆ, ಸರ್ಕಾರದ ಯೋಜನೆಗಳು ರೈತರ ಮನೆ ಬಾಗಿಲಿಗೆ ತಲುಪುವಂತಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ ಉದ್ಯೋಗ ಮೇಳ, ಸಿರಿಧಾನ್ಯ ಮೇಳ, ಫಲಪುಷ್ಪ ಪ್ರದರ್ಶನ ಹಾಗೂ ಮತ್ಸ್ಯಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳು ಇಲ್ಲದಿದ್ದರಿಂದ ಶೇ.75 ರಷ್ಟು ಜನ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿಗೆ ಉತ್ತೇಜನೆ ನೀಡಬೇಕಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ 10 ಲಕ್ಷ ಎಕರೆ ಭೂಮಿಯಲ್ಲಿ ಬಿತ್ತಣಿಕೆ ಮಾಡಲಾಗುತ್ತದೆ. ಅದರಲ್ಲಿ ಶೇ 50ರಷ್ಟು ಸೋಯಾ, ಶೇ 25ರಷ್ಟು ತೊಗರಿ ಹಾಗೂ ಶೇ 25 ರಷ್ಟು ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ರೈತರು ಕೇವಲ ಒಂದೇ ಬೆಳೆಗೆ ಅವಲಂಬಿತರಾಗದೆ ಸಿರಿಧಾನ್ಯಗಳಂತಹ ವಿವಿಧ ಬೆಳೆ ಬೆಳೆಯಲು ಮುಂದಾಗಬೇಕುʼ ಎಂದರು.
ಸಿರಿಧಾನ್ಯಗಳು ಕೇವಲ ಆಹಾರವಲ್ಲ; ಆರೋಗ್ಯಪೂರ್ಣ ಜೀವನದ ಭದ್ರ ಆಧಾರವಾಗಿವೆ. ಸಿರಿಧಾನ್ಯಗಳು ಕಡಿಮೆ ನೀರಿನಲ್ಲಿ ಬೆಳೆಯುವ ಶಾಶ್ವತ ಬೆಳೆಗಳಾಗಿದ್ದು, ಹವಾಮಾನ ಬದಲಾವಣೆಯ ಸಂದರ್ಭದಲ್ಲಿಯೂ ರೈತರಿಗೆ ಭದ್ರ ಆದಾಯ ನೀಡುತ್ತವೆ. ಆರೋಗ್ಯ ಮತ್ತು ಕೃಷಿ ಎರಡನ್ನೂ ಒಟ್ಟಿಗೆ ರಕ್ಷಿಸುವ ಶಕ್ತಿ ಸಿರಿಧಾನ್ಯಗಳಲ್ಲಿ ಅಡಗಿದೆ. ಜನರು ತಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳಬೇಕು. ರೈತರು ಮೌಲ್ಯವರ್ಧಿತ ಉತ್ಪನ್ನಗಳತ್ತ ಗಮನಹರಿಸಬೇಕು. ಸರ್ಕಾರದ ಯೋಜನೆ, ಕಾರ್ಯಕ್ರಮ, ತೋಟಗಾರಿಕೆ ಉತ್ಪನ್ನ ಹಾಗೂ ಮಾರುಕಟ್ಟೆಯಲ್ಲಿ ರೈತರಿಗೆ ಬೆಂಬಲ ಬೆಲೆ ಸಿಗಬೇಕೆಂಬುದು ಈ ಮೇಳದ ಮುಖ್ಯ ಉದ್ದೇಶವಾಗಿದೆʼ ಎಂದರು.

ಕಳೆದ ವರ್ಷದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ 1.65 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದರು. ಸರಕಾರವು ಕಾಳಜಿ ವಹಿಸಿ ಹೆಚ್ಚಿನ ಪರಿಹಾರ ಒದಗಿಸಿದೆ. 1.92 ಲಕ್ಷ ರೈತರ ಖಾತೆಗೆ ₹288 ಕೋಟಿ ರೂಪಾಯಿ ನೇರವಾಗಿ ಜಮೆಯಾಗಿದೆ. ಇದಕ್ಕೆ ಅನುಗುಣವಾಗಿ ಬೆಳೆ ಕಟಾವು ಪ್ರಯೋಗ ಮಾಡಿಸಿ ಈಗಾಗಲೇ ₹100 ಕೋಟಿ ಬೆಳೆ ವಿಮೆ ಹಣ ಜಮೆಯಾಗಿದ್ದು, ಇನ್ನು ₹50 ಕೋಟಿ ರೂ. ಬೆಳೆ ವಿಮೆ ಬರಲಿದೆ. ಒಟ್ಟು ₹450 ಕೋಟಿ ಜಿಲ್ಲೆಯ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಿದೆʼ ಎಂದು ಸಚಿವ ಖಂಡ್ರೆ ಅವರು ತಿಳಿಸಿದರು.

ʼರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಬೆಲೆ ದೊರೆಯಬೇಕು, ರೈತರು ಸಹ ವಿವಿಧ ಬೆಳೆಗಳನ್ನು ಬೆಳೆಯಬೇಕು. ಎಲ್ಲೆಡೆ ಮಾಲಿನ್ಯ ಕಂಡು ಬರುತ್ತಿದೆ. ಮಣ್ಣಿನಲ್ಲಿ, ಬೆಳೆಗಳಲ್ಲಿ ರಸಾಯನಿಕಗಳ ಪ್ರಮಾಣ ಹೆಚ್ಚುತ್ತಿದೆ. ರೈತರು ಹೆಚ್ಚು ಸಿರಿಧಾನ್ಯ ಬೆಳೆಯಬೇಕಿದೆ. ಜಿಲ್ಲೆಯಲ್ಲಿ ಕಾರಂಜಾ, ಮೇಹಕರ್ ನೀರಾವರಿ ಚಾಲ್ತಿಯಲ್ಲಿದೆ. ಔರಾದ್ ಕೆರೆಗಳನ್ನು ತುಂಬಿಸಲಾಗುವುದು. ರೈತರ ಅಭಿವೃದ್ಧಿಗೆ ತಾವು ಬದ್ಧರಿದ್ದೇವೆʼ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ದಿಲೀಪ್ ಬದೋಲೆ ಪ್ರಾಸ್ತಾವಿಕವಾಗಿ ಮಾತನಾಡಿ, ʼಉದ್ಯೋಗ ಮೇಳದಲ್ಲಿ 32 ವಿವಿಧ ಕಂಪನಿಗಳು ಭಾಗವಹಿಸಿವೆ, ಉದ್ಯೋಗಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲು ಎನ್.ಆರ್.ಎಲ್.ಎಮ್ ಯೋಜನೆಯಿಂದ ಜಿ.ಪಿ.ಎಲ್.ಎಫ್ ಗಳ ಮೂಲಕ ಗ್ರಾಮಗಳಲ್ಲಿ ಪ್ರಚಾರ ನಡೆಸಿ ನೋಂದಣಿಗಾಗಿ ಆನ್‌ಲೈನ್ ಲಿಂಕ್‌ನಲ್ಲಿ ಅವಕಾಶ ನೀಡಲಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಂಡು ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಿʼ ಎಂದು ಹೇಳಿದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಗ್ರಾಮೀಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಸಂಸ್ಥೆಗಳು ಮೇಳದಲ್ಲಿ ಸ್ಥಾಪಿಸಿದ 49 ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಬೆಳಿಗ್ಗೆ ನಗರದ ಛತ್ರಪತಿ ಶಿವಾಜಿ ವೃತ್ತದಿಂದ ನೆಹರೂ ಕ್ರೀಡಾಂಗಣದವರೆಗೆ ನಡೆದ ʼಸಿರಿಧಾನ್ಯ ನಡಿಗೆʼ ಮೆರವಣಿಗೆಗೆ ಬೀದರ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಅವರು ಚಾಲನೆ ನೀಡಿದರು, ಮೆರವಣಿಗೆಯಲ್ಲಿ ಸಿರಿಧಾನ್ಯ ಹೊತ್ತ ಮಹಿಳೆಯರು ಗಮನ ಸೆಳೆದರು.
ಇದನ್ನೂ ಓದಿ : ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಿಸಿ, ರೈತರ ಸಾಲ ಮನ್ನಾ ಮಾಡಿ : ಸರ್ಕಾರಕ್ಕೆ ಬಹಿರಂಗ ಪತ್ರ
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ, ಕಾಡಾ ಅಧ್ಯಕ್ಷ ಬಾಬು ಹೊನ್ನನಾಯ್ಕ, ಬೀದರ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯಾ ಸ್ವಾಮಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ವಿಶ್ವನಾಥ ಪಾಟೀಲ ಮಾಡಗೊಳ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬೀದರ ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ, ಜಂಟಿ ಕೃಷಿ ನಿರ್ದೇಶಕ ದೇವಿಕಾ, ಮೀನುಗಾರಿಕೆ ಉಪ ನಿರ್ದೇಶಕರಾದ ಜಾನವಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.







