ಹುಮನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದ ಬಯಲಿನಲ್ಲಿ ಶನಿವಾರ ಬೆಳಿಗ್ಗೆ ನಿಗೂಢ ಸ್ಪೋಟ ಸಂಭವಿಸಿದ್ದು, ಘಟನಾ ಸ್ಥಳದಲ್ಲಿದ್ದ ಎಂಟು ಜನರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಇದೇ ಗ್ರಾಮದಲ್ಲಿ ಸ್ಫೋಟ ನಡೆದಿತು. ಇದು ಎರಡನೇ ಸ್ಫೋಟ ಪ್ರಕರಣವಾಗಿದೆ. ಗ್ರಾಮದ ಹೊರವಲಯದ ಮೋಳಿಗೆ ಮಾರಯ್ಯ ದೇವಸ್ಥಾನ ಸಮೀಪದ ರಸ್ತೆಯಲ್ಲಿ ಸ್ಫೋಟ ಪ್ರಕರಣ ನಡೆದಿದೆ. ಸದ್ಯ ಎಂಟು ಜನರು ಗಾಯಾಳುಗಳಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‌ಗೆ ಕಳುಹಿಸಲಾಗಿದೆ. ಘಟನೆ ನಂತರ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಸ್ಫೋಟದಲ್ಲಿ ಗಂಭೀರ ಗಾಯಗೊಂಡ ಓರ್ವರನ್ನು ಹೈದ್ರಾಬಾದ್‌ನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಲಾಗಿದೆ. ಇನ್ನುಳಿದ ಪುಟ್ಟ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ಹಂಚಿಕೊಂಡಿದೆ.
ಸ್ಥಳಕ್ಕೆ ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ ಮನೆ ಮಾಡಿದೆ. ಘಟನಾ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಸ್ಪೋಟಗೊಂಡ ವಸ್ತುಗಳನ್ನ ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ.
ಹುಮನಾಬಾದ್ ಸ್ಫೋಟ: ತನಿಖೆಗೆ ಈಶ್ವರ ಖಂಡ್ರೆ ಆದೇಶ
ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ, ತನಿಖೆಗೆ ಆದೇಶ ನೀಡಿದ್ದಾರೆ.

ಕೂಡಲೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಮತ್ತು ಚಿಕಿತ್ಸಾವೆಚ್ಚ ಭರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿರುವ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಫೋಟಕ ಪರೀಕ್ಷಾ ತಜ್ಞರನ್ನು ಸ್ಥಳಕ್ಕೆ ಕಳುಹಿಸಿ ಸ್ಫೋಟ ಸ್ಥಳದಲ್ಲಿ ಮಾದರಿ ಸಂಗ್ರಹಿಸಿ ತನಿಖೆ ಮಾಡಲು ಆದೇಶಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಅಲೆಮಾರಿಗಳ ಸಂಘಟಿತ ಹೋರಾಟಕ್ಕೆ ಜಯ : ನೊಂದವರ ನೋವಿಗೆ ದನಿಯಾದ ಸದನ!
ಸ್ಫೋಟಕ್ಕೆ ಕಾರಣವೇನು, ಸ್ಫೋಟಕ್ಕೆ ಬಳಕೆಯಾಗಿರುವ ವಸ್ತು ಯಾವುದು, ಆ ಸ್ಫೋಟಕ ವಸ್ತು ಅಲ್ಲಿಗೆ ಹೇಗೆ ಬಂತು, ಯಾವ ಉದ್ದೇಶಕ್ಕೆ ಅದು ಬಳಕೆಯಾಗುತ್ತಿದ್ದು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ, ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಲು ಈಶ್ವರ ಖಂಡ್ರೆ ಸೂಚಿಸಿದ್ದಾರೆ.





