ಶಾಶ್ವತ ನಿವೇಶನ ನೀಡುವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ಅಲೆಮಾರಿ ಸಮುದಾಯದ ಮಹಿಳೆಯರು, ಮಕ್ಕಳು ತಹಸೀಲ್ದಾರ್ ಕಚೇರಿ ಎದುರುಗಡೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರಿಸಿದರು.
ಔರಾದ್ ಪಟ್ಟಣದ ಎಪಿಎಂಸಿ, ಬಿಇಒ ಕಚೇರಿ ಸಮೀಪದ ರಸ್ತೆ ಬದಿಯಲ್ಲಿ ನಾಲ್ಕು ದಶಕಗಳಿಂದ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಅಲೆಮಾರಿ, ಅರೆಅಲೆಮಾರಿ ಜನಾಂಗಕ್ಕೆ ಸರ್ಕಾರದಿಂದ ನಿವೇಶನ ಮಂಜೂರಾದರೂ ಹಂಚಿಕೆ ಮಾಡಲು ಮೀನಾಮೇಷ ಎಣಿಸಲಾಗುತ್ತಿದೆಂದು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ ಕಚೇರಿ ಎದುರು ಧರಣಿ ಆರಂಭಿಸಿದ್ದಾರೆ.
ಅಹೋರಾತ್ರಿ ಧರಣಿ ಆರಂಭವಾದ ಸ್ಥಳಕ್ಕೆ ನಿನ್ನೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ಹಾಗೂ ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಭೇಟಿ ನೀಡಿ, ʼಈಗಾಗಲೇ ಅಲೆಮಾರಿ ಜನಾಂಗಕ್ಕೆ ಮಂಜೂರಾದ ಸರ್ವೇ ನಂ- 205ರಲ್ಲಿ ಎರಡು ಎಕರೆ ಜಾಗದಲ್ಲಿ 72 ಅಲೆಮಾರಿ ಕುಟುಂಬಗಳಿಗೆ ಮನೆ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಮುಂದಿನ ಐದಾರು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಧರಣಿ ಹಿಂಪಡೆಯಿರಿʼ ಎಂದು ಮನವೋಲಿಸಿದರು.
ಒಕ್ಕೂಟದ ಮುಖಂಡ ರಾಹುಲ್ ಖಂದಾರೆ ಅವರು ಮಾತನಾಡಿ, ʼ2019ರಲ್ಲಿ ಔರಾದ ಹೊರವಲಯದಲ್ಲಿ ಸರ್ವೇ ನಂ-183ರಲ್ಲಿ 2 ಎಕರೆ ಅಲೆಮಾರಿ ಜನಾಂಗದ ನಿವೇಶನಕ್ಕಾಗಿ ಮೀಸಲಿಟ್ಟ ಜಮೀನು ರದ್ದತಿಗಾಗಿ ತಾಲೂಕು ಆಡಳಿತದಿಂದ ಪತ್ರ ಬರೆಯಲಾಗಿದೆ. ಆ ಜಮೀನು ರದ್ದತಿ ಪ್ರಸ್ತಾವನೆ ಹಿಂಪಡೆದು ಅಲೆಮಾರಿ ಸಮುದಾಯಕ್ಕೆ ಹಂಚಿಕೆ ಮಾಡುವರೆಗೆ ನಾವು ಧರಣಿ ಸ್ಥಳ ಬಿಟ್ಟು ಕದಲುವುದಿಲ್ಲʼ ಎಂದು ಅಹೋರಾತ್ರಿ ಧರಣಿ ಮುಂದುವರೆಸಿದರು.
ಎರಡನೇ ದಿನ ಮಂಗಳವಾರ ಧರಣಿ ಮುಂದುವರೆಯಿತು. ಸಂಜೆ 4 ಗಂಟೆ ಸುಮಾರಿಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ಅವರು ಪುನಃ ಧರಣಿ ಸ್ಥಳಕ್ಕೆ ಭೇಟಿ ನೀಡಿ, ‘ಅಲೆಮಾರಿ ಜನಾಂಗದ ಕುಟುಂಬಗಳಿಗೆ ಮಂಜೂರಾದ ಸರ್ವೇ ನಂ-205ರ 2 ಎಕರೆ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ಪ್ರಸ್ತಾವನೆ ಕಳಿಸಲಾಗಿದ್ದು, ಧರಣಿ ಹಿಂಪಡೆಯಿರಿ’ ಎಂದು ಮನವೋಲಿಸಲು ಪ್ರಯತ್ನಿಸಿದರು.
ಧರಣಿನಿರತ ಮುಖಂಡ ರಾಹುಲ್ ಖಂದಾರೆ ಮಾತನಾಡಿ, ʼಸರ್ವೇ ನಂ-205ರಲ್ಲಿ ಅಲೆಮಾರಿ ಜನಾಂಗಕ್ಕೆ ಮನೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ ತಾಲೂಕಾಡಳಿತ ನಿರ್ಧಾರಕ್ಕೆ ಸ್ವಾಗತಾರ್ಹವಾಗಿದೆ. ಆದರೆ, ಅಲೆಮಾರಿ ಜನಾಂಗಕ್ಕೆ ಈ ಹಿಂದೆ ಮಂಜೂರಾದ ಸರ್ವೇ ನಂ-183ರಲ್ಲಿ 2 ಎಕರೆ ಜಾಗ ಹಂಚಿಕೆ ಮಾಡದೆ ರದ್ದುಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಪತ್ರ ಯಾಕೆ ಬರೆದಿದ್ದೀರಾ? ನಿವೇಶನ ರದ್ದುಪಡಿಸುವ ಹಿಂದಿನ ಉದ್ದೇಶವೇನು? ಅದರ ಹಿಂದೆ ಯಾರ ಕೈವಾಡವಿದೆ ಎಂಬುದು ಸ್ಪಷ್ಟಪಡಿಸಬೇಕುʼ ಎಂದು ಪಟ್ಟು ಹಿಡಿದರು.
ನಾಲ್ಕು ದಶಕಗಳಿಂದ ಕನಿಷ್ಠ ಮೂಲಸೌಕರ್ಯ ಇಲ್ಲದೆ ಪುಟ್ಟ ಮಕ್ಕಳು, ವೃದ್ಧರು, ಗರ್ಭಿಣಿಯರು ಬೀದಿಯಲ್ಲಿ ಬದುಕುತ್ತಿದ್ದಾರೆ. ಆದರೆ, ತಾಲೂಕು ಆಡಳಿತ ಮಾನವೀಯತೆ ದೃಷ್ಟಿಯಿಂದ ಎಂದಾದರೂ ಅವರ ನೋವು-ಸಂಕಟ ಆಲಿಸುವ ಪ್ರಯತ್ನ ಮಾಡಿದೆಯಾ? ಮೂರ್ನಾಲ್ಕು ದಶಕ ಕಳೆದರೂ ಅಲೆಮಾರಿ ಜನಾಂಗಕ್ಕೆ ಮಂಜೂರಾದ ನಿವೇಶನ ಹಂಚಿಕೆ ಮಾಡದೆ ನಿರ್ಲಕ್ಷಿಸಲು ಕಾರಣಗಳೇನು ಎಂದು ಪ್ರಶ್ನಿಸಿದ ಅವರು, ʼಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುವರೆಗೆ ಈ ಅಹೋರಾತ್ರಿ ಧರಣಿ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲʼ ಎಂದು ಧರಣಿ ಮುಂದುವರೆಸಿದ್ದಾರೆ.
ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿರುವರಿಗೆ ಆರೋಗ್ಯ ಸಮಸ್ಯೆ ಆಗುತ್ತಿದ್ದು, ಎಲ್ಲರಿಗೂ ವೈದ್ಯಕೀಯ ತಪಾಸಣೆ ನಡೆಸಬೇಕೆಂದು ಒಕ್ಕೂಟದ ಮುಖಂಡ ರಾಹುಲ ಖಂದಾರೆ ಅವರು ಕೋರಿದ ಮನವಿ ಮೇರೆಗೆ ವೈದ್ಯರ ತಂಡ ಧರಣಿ ಸ್ಥಳಕ್ಕೆ ತೆರಳಿ ಎಲ್ಲರಿಗೂ ವೈದ್ಯಕೀಯ ತಪಾಸಣೆ ನಡೆಸಿ, ಔಷಧಿ ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | ಸೂರಿಗಾಗಿ ಈ ಅಲೆಮಾರಿ ಜನಾಂಗ ಇನ್ನೆಷ್ಟು ವರ್ಷ ಹೋರಾಟ ನಡೆಸಬೇಕು?
ಧರಣಿಯಲ್ಲಿ ಅಲೆಮಾರಿ ಸಮುದಾಯದ ಮುಖಂಡ ನಾಗನಾಥ ವಾಕೋಡೆ, ಒಕ್ಕೂಟದ ಪ್ರಮುಖರಾದ ಸುಭಾಷ ಲಾಧಾ, ಸಿದ್ದಾರ್ಥ ಭೋಸ್ಲೆ, ಸಂತೋಷ ಸಿಂಧೆ, ಪ್ರವೀಣ ಕಾರಂಜೆ, ಸಂತೋಷ ಸೂರ್ಯವಂಶಿ, ಪ್ರವೀಣ್ ಕಾರಂಜೆ, ಸಂಪತ್ ಫೈಟರ್, ಸುಂದರ ಮೇತ್ರೆ, ಪ ಸೇರಿದಂತೆ ಅಲೆಮಾರಿ ಸಮುದಾಯದವರು ಮಹಿಳೆಯರು, ಮಕ್ಕಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.





