ಜಾತಿ, ವರ್ಗ, ವರ್ಣ ಭೇದ ಎನ್ನದೇ ಸಮಾಜದ ಸರ್ವರ ಒಳಿತಿಗಾಗಿ ಶ್ರಮಿಸಿದ ಸರ್ವಜ್ಞ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಹೇಳಿದರು.
ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೀದರ್ ನಗರದ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಆಯೋಜಿಸಿದ ಸಂತ ಕವಿ ಸರ್ವಜ್ಞ ಅವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಸಮಾಜದಲ್ಲಿ ಬೇರೂರಿರುವ ಜಾತಿ-ಧರ್ಮ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ತಾರತಮ್ಯ ಹೋಗಲಾಡಿಸಲು ಸರ್ವಜ್ಞ ಸೇರಿದಂತೆ ಅನೇಕ ಮಹಾತ್ಮರು ಶ್ರಮಿಸಿದ್ದಾರೆ. ಅವರ ಮಾನವೀಯ ಮೌಲ್ಯಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕುಂಬಾರ ಸಮಾಜದ ಇತಿಹಾಸ ತುಂಬಾ ಪ್ರಾಚೀನವಾಗಿದೆ. ಕುಂಬಾರಿಕೆ ವೃತ್ತಿ ವೈಜ್ಞಾನಿಕವಾಗಿದ್ದು, ಎಲ್ಲರೂ ಮಣ್ಣಿನ ಪರಿಕರಗಳನ್ನು ಹೆಚ್ಚು ಬಳಸಬೇಕು. ಕುಂಬಾರ ಸಮಾಜ ಅಭಿವೃದ್ಧಿ ನಿಗಮಕ್ಕೆ ಅಗತ್ಯ ಅನುದಾನ ಒದಗಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದುʼ ಎಂದು ಭರವಸೆ ನೀಡಿದರು.
ಯುವ ಸಾಹಿತಿ ಈಶ್ವರ ರುಮ್ಮಾ ಅವರು ವಿಶೇಷ ಉಪನ್ಯಾಸ ನೀಡಿ, ʼಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಸರ್ವಜ್ಞ ಕವಿಯ ತ್ರಿಪದಿಗಳು ಆದರ್ಶವಾಗಿವೆ. ಸರ್ವಜ್ಞ ಲಕ್ಷಾಂತರ ತ್ರಿಪದಿಗಳು ರಚಿಸಿ ಸಮಾಜದ ಎಲ್ಲ ಕ್ಷೇತ್ರಗಳ ಅಂಕು-ಡೊಂಕುಗಳನ್ನು ತಿದ್ದಿದರು. ಸಮಾಜದಲ್ಲಿನ ಮೌಢ್ಯ, ಕಂದಾಚಾರ ಸೇರಿದಂತೆ ಅನಿಷ್ಟ ಪದ್ಧತಿಗಳನ್ನು ಸರ್ವಜ್ಞ ಕಠೋರವಾಗಿ ಟೀಕಿಸಿದರು. ಸ್ತ್ರೀ ಸಮಾನತೆಯ ಚಿಂತನೆಗಳನ್ನು ತ್ರಿಪದಿಗಳಲ್ಲಿ ಕಾಣಬಹುದು. ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಯುವ ಸಮುದಾಯ ಸರ್ವಜ್ಞರ ತ್ರಿಪದಿಗಳ ಮೈಗೂಡಿಸಿಕೊಳ್ಳಬೇಕುʼ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುಂಚಿತವಾಗಿ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂತಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರು ಪೂಜೆ ಸಲ್ಲಿಸಿದರು. ಬಳಿಕ ಸಂತಕವಿ ಸರ್ವಜ್ಞರ ಭಾವಚಿತ್ರ ಮೆರವಣಿಗೆ ನಗರದ ಶಿವಾಜಿ ವೃತ್ತದಿಂದ ಚಾಲನೆಗೊಂಡು ಭಗತ್ ಸಿಂಗ್ ವೃತ್ತ, ಬಸವವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ ಮಾರ್ಗವಾಗಿ ರಂಗಮಂದಿರಕ್ಕೆ ತಲುಪಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಕುಂಬಾರ ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಇದನ್ನೂ ಓದಿ : ಸರ್ವಜ್ಞ ಕಾವ್ಯದಲ್ಲಿ ವೈಚಾರಿಕತೆ, ಸಾಮಾಜಿಕ ಪ್ರಜ್ಞೆ
ಬೀದರ್ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಬಿ.ಕರಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಜಿಲ್ಲಾ ಕುಂಬಾರ ಸಮಾಜದ ಮುಖಂಡ ವಿಠಲ ಕುಂಬಾರ ಸೇರಿದಂತೆ ಮುಖಂಡರಾದ ನಾಗರಾಜ ಕರ್ಪೂರ್, ಶಿವಾನಂದ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ರಾಜಕುಮಾರ ಕುಂಬಾರ, ಉಮಾಕಾಂತ ಕುಂಬಾರ, ಅಶೋಕ ನೌಬಾದ್, ಬಾಲಾಜಿ ಕುಂಬಾರ, ಕಾಶಿನಾಥ್ ಕುಂಬಾರ, ಶ್ರೀಕಾಂತ್ ಮಾಳಚಾಪುರ, ಗಣಪತಿ ಕುಂಬಾರ, ಪವನ್ ಕುಂಬಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸಾರ್ವಜನಿಕರು ಸೇರಿದಂತೆ ಕುಂಬಾರ ಸಮಾಜದವರು ಉಪಸ್ಥಿತರಿದ್ದರು.





