ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಾದ್ಯಂತ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜ.5ರ ಮಧ್ಯಾಹ್ನ 2ರಿಂದ ಮುಂದಿನ ಆದೇಶದವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಕಲಂ 163(1) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಹುಮನಾಬಾದ್ ತಾಲೂಕು ತಹಸೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ಅಂಜುಮ್ ತಬಸ್ಸುಮ್ ಆದೇಶಿಸಿದ್ದಾರೆ.
ʼಬೀದರ್ ಜಿಲ್ಲಾ ಪಂಚಾಯತಿಯಲ್ಲಿ ಜ.5ರಂದು ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮಧ್ಯೆ ನಡೆದ ಗದ್ದಲ/ಜಗಳ/ಕಲಹ/ಮಾತಿನ ಚಕಮಕಿಯಿಂದಾಗಿ ಹುಮನಾಬಾದ ತಾಲೂಕಿನಾದ್ಯಂತ ಅಶಾಂತಿ ಸೃಷ್ಟಿಯಾಗುವ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದ್ದು, ನಿಷೇಧಾಜ್ಞೆ ಹೊರಡಿಸಲು ಕೋರಿರುತ್ತಾರೆ. ಹಾಗಾಗಿ ತಾಲ್ಲೂಕಿನ ಶಾಂತಿ ಸುವ್ಯವಸ್ಥೆ ಕಾಪಾಡುವುದು ಅತ್ಯವಶ್ಯಕವೆಂದು ಮನಗಂಡು ಆದೇಶ ಹೊರಡಿಸಲಾಗಿದೆʼ ಎಂದು ತಿಳಿಸಿದ್ದಾರೆ.
ಷರತ್ತುಗಳೇನು?
1.ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನಾದ್ಯಂತ 5 ಕ್ಕಿಂತ ಹೆಚ್ಚಿನ ಜನರು ಗುಂಪು-ಗುಂಪಾಗಿ ತಿರುಗಾಡುವುದನ್ನು ನಿಷೇಧಿಸಿದೆ.
2. ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನಾದ್ಯಂತ ಜನರು/ಸಾರ್ವಜನಿಕರು ಯಾವುದೇ ಆಯುಧ/ಲಾಠಿ/ಚಾಕು/ಚೂರಿ/ಕತ್ತಿ/ತಲವಾರ ಇತರೆ ಯಾವುದೇ ಮಾನವ ಜೀವಕ್ಕೆ ಅಪಾಯ ಉಂಟು ಮಾಡಬಲ್ಲ ಹರಿತವಾದ/ಚೂಪಾದ ವಸ್ತುಗಳನ್ನು ಹಿಡಿದುಕೊಂಡು ಓಡಾಡುವುದನ್ನು ನಿಷೇಧಿಸಲಾಗಿದೆ.
3. ಯಾವುದೇ ಪಕ್ಷದ/ವ್ಯಕ್ತಿಯ ಪರ ಅಥವಾ ವಿರೋಧ ಘೋಷಣೆಗಳನ್ನು ಮತ್ತು ಪ್ರಚೋದನಕಾರಿ ಭಾಷಣಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
4. ಇತರ ರಾಜಕೀಯ ಸಂಬಂಧಪಟ್ಟ ವಿಚಾರಗಳನ್ನು ಗುಂಪುಗಳಲ್ಲಿ ಚರ್ಚೆ ಮಾಡತಕ್ಕದಲ್ಲ.
ಇದನ್ನೂ ಓದಿ : ಬೀದರ್ | ಕೆಡಿಪಿ ಸಭೆಯಲ್ಲಿ ಕೈಕೈ ಮಿಲಾಯಿಸಿದ ಕಾಂಗ್ರೆಸ್-ಬಿಜೆಪಿ ಶಾಸಕರು : ಸಮಾಜಕ್ಕೆ ಇದು ಮಾದರಿಯೇ?






