ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

Date:

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು ಕಂಡು-ಕೇಳಿದ ಜಲ ಜೂಜಾಟದ ಕತೆ ಇಲ್ಲಿದೆ..

ಎತ್ತ ನೋಡಿದರೂ ಒಬ್ಬರ ಮನೆಯಿಂದ ಮತ್ತೊಬ್ಬರ ಮನೆಗೆ ಹಾದು ಹೋದ ಕಪ್ಪು ಬಣ್ಣದ ಪೈಪ್‌ಗಳು, ಊರಿನ ಸಂದಿಗೊಂದಿಗಳಲ್ಲಿ ಸುತ್ತಾಡುವಾಗ ಕಂಬ, ಛಾವಣಿ ಮೇಲಿಂದ ಪೈಪ್‌ಗಳು ಜೋತಾಡುತ್ತಿರುವುದು.. ಈ ದೃಶ್ಯ ಕಂಡು ಅರೇ! ಈ ಊರಿನಲ್ಲಿ ಎಷ್ಟು ಚೆನ್ನಾಗಿ ನೀರಿನ ವ್ಯವಸ್ಥೆ ಮಾಡಿದ್ದಾರಲ್ಲ! ಎಂದು ಅಚ್ಚರಿಯಾದ ನನ್ನ ಆಲೋಚನೆ ಹುಸಿಯಾಯ್ತು. ಅಲ್ಲಿನ ಕತೆಯೇ ಬೇರೆ ಎಂಬುದು ಆಮೇಲೆ ಅರಿವಿಗೆ ಬಂತು.

ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಮಹಾರಾಷ್ಟ್ರ ಗಡಿಯೊಂದಿಗೆ ಹೊಂದಿಕೊಂಡಿರುವ ಹೋಕ್ರಾಣಾ ಗ್ರಾಮದ ಕತೆಯಿದು. ಜನಾಭಿಪ್ರಾಯ ರೂಪಿಸುವ ಸಮೀಕ್ಷೆ ಸಂಬಂಧ ಈ ಗ್ರಾಮಕ್ಕೆ ತೆರಳಿದಾಗ ಅಲ್ಲಿನ ಜನರ ʼನೀರಿನ ಸಂಕಟದ ಕಥೆʼ ಕೇಳಿದಾಗ ನಮಗೆ ನಿಜಕ್ಕೂ ಆಶ್ಚರ್ಯವಾಯ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ...

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ ಜೀವನ ನಡೆಸುತ್ತಾನೆ. ಆದರೆ, ಅದೇ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಇತರ ಕ್ರೀಡಾಪಟುಗಳು ಸೂಕ್ತ ತರಬೇತಿ ವೆಚ್ಚಕ್ಕಾಗಿ, ಉತ್ತಮ ಪೌಷ್ಟಿಕಾಂಶಯುಕ್ತ...

ಬೇಸಿಗೆ ಬಂದರೆ ಸಾಕು, ಜಿಲ್ಲೆಯ ಔರಾದ್‌ ಮತಕ್ಷೇತ್ರದ ಕೆಲ ಗ್ರಾಮದ ಜನರಿಗೆ ಅನ್ನಕ್ಕಿಂತ ಕುಡಿಯುವ ನೀರಿನ ಚಿಂತೆಯೇ ಹೆಚ್ಚು. ಕೆಂಡದಂತಹ ಬಿಸಿಲಿರುವ ಈ ದೊಡ್ಡ ಊರಲ್ಲಿ ಕೇವಲ ಬೇಸಿಗೆಯಲ್ಲಿ ಮಾತ್ರ ನೀರಿನ ಸಮಸ್ಯೆ ಇರಬಹುದು ಎಂಬ ನಮ್ಮ ಅಂದಾಜು ಸುಳ್ಳಾಯಿತು. ಕಳೆದ 10ಕ್ಕಿಂತ ಹೆಚ್ಚು ವರ್ಷಗಳಿಂದಲೂ ಈ ಗ್ರಾಮಸ್ಥರಿಗೆ ಜಲದಾಹ ತಣಿದಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲವೆಂಬಂತೆ, ಇದು ಬಗೆಹರಿಯದ ಸಮಸ್ಯೆ ಎಂದು ತಾವೇ ನಿರ್ಧರಿಸಿ ಕೈತೊಳೆದುಕೊಂಡಿದ್ದಾರೆ.

WhatsApp Image 2026 03 23 at 4.33.26 PM 1

ಅಂದ ಹಾಗೆ, ಗ್ರಾಮ ಪಂಚಾಯತ್ ಕೇಂದ್ರವಿರುವ ಈ ಊರಿನ ಜನ‌ ಯಾವ ನೀರು ಬಳಸುತ್ತಾರೆ ಎಂಬುದೇ ಬಹಳ ಸ್ವಾರಸ್ಯಕರ ಸಂಗತಿ. ನಮ್ಮನ್ನು ನೋಡಿ ಹತ್ತಿರ ಬಂದ ಬಿಜಾನ್‌ ಬಿ ಎಂಬುವವರಿಗೆ, ʼಊರಿನಲ್ಲಿ ಬಹಳ ನೀರಿನ ಸಮಸ್ಯೆ ಇದ್ಯಾ? ಎಂದು ಕೇಳಿದೆ.

ʼನೀರಿನ ಕತೀ ಕೇಳಬ್ಯಾಡ್ರೀ, ಹೇಳಲಾರದಷ್ಟು ತಕಲೀಪ್‌ ಅದಾʼ ಎಂದು ಸಿಟ್ಟಿನಿಂದಲೇ ಉತ್ತರಿಸಿದರು.

ʼಹಾಗಾದರೆ, ನೀರು ಎಲ್ಲಿಂದ ತರ್ತೀರಾ? ಎಂದು ಮತ್ತೊಮ್ಮೆ ಕೇಳಿದೆ.

ʼನಮ್ಮೂರಲ್ಲಿ ಎಲ್ಲಿಯೂ ಸರ್ಕಾರಿ ನಲ್ಲಿ ನೀರು ಇಲ್ಲ. ಖರೀದಿ ನೀರೇ ಬಳಸುತ್ತೇವೆʼ ಎಂದರು.

ʼನೀರು ಖರೀದಿನಾ? ಎಲ್ಲಿಂದ ಎಷ್ಟು ಹಣ ಕೊಡ್ತೀರಾ? ಎಂದು ಆಶ್ಚರ್ಯದಿಂದ ಕೇಳಿದೆ.

ʼವರ್ಷಕ್ಕೆ 5 ಸಾವಿರ ಕೊಡ್ತೀವಿʼ ಎಂದು ಚುಟುಕಾಗಿ ಉತ್ತರಿಸಿದರು.

ಅಷ್ಟರಲ್ಲಿ ಇನ್ನೂ ನಾಲ್ಕೈದು ಜನ ಬಳಿ ಬಂದು ನಿಂತು, ʼನೀರಿನ ಕತಿ ಯಾಕ್‌ ಕೇಳ್ತೀರಿ ಸರ್, ನಮ್ಮೂರಾಗ ಪಂಚಾಯತ್ ನೀರು ಅಂಬದೇ ಇಲ್ಲ.‌ ಎಲ್ಲರಿಗೂ ಹೇಳಿ-ಕೇಳಿ ಸಾಕಾಗ್ಯದ್‌, ಅದಕ್ಕೆ ಖಾಸಗಿ ಬೋರ್‌ವೆಲ್ ಇದ್ದೋರ್‌ ಹತ್ರಾ ಖರೀದಿ ನೀರು ತಕೊಂಡಿವಿ ನೋಡಿʼ ಎಂದು ತಲೆ ಮೇಲೆ ವಿದ್ಯುತ್‌ ತಂತಿಯಂತೆ ಮನೆ-ಮನೆಯ ಮೇಲೂ ಹಾದು ಹೋಗಿದ್ದ ಕಪ್ಪು ಬಣ್ಣದ ಪೈಪ್‌ ತೋರಿಸಿದರು.‌

ನೀರಿನ ಸಮಸ್ಯೆ ಇರುವ ಗ್ರಾಮಗಳು ಅನೇಕ ಇವೆ. ಆದರೆ, ಪ್ರತಿಯೊಬ್ಬರೂ ಖರೀದಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ ಎಂಬ ಮಾತು ನಮ್ಮನ್ನು ಆಘಾತಕ್ಕೀಡುಮಾಡಿತು. ಹಾಗೇ ಗ್ರಾಮದ ವಿವಿಧ ಬಡಾವಣೆಯಲ್ಲಿ ಸುಮ್ಮನೆ ಹೆಜ್ಜೆ ಹಾಕಿದಾಗ ಎಲ್ಲರ ಬಾಯಲ್ಲೂ ʼನೀರಿನ ದಾಹʼ ಎದ್ದು ಕಾಣುತ್ತಿತ್ತು.

ಪ್ರತಿ ಮನೆಗೂ ಖರೀದಿ ನೀರಿನ ಪೈಪ್‌ ಜೋತು ಬಿದ್ದಿರುವುದ ಕಂಡ ನನಗೆ, ʼಮನೆ-ಮನೆಗೆ ಗಂಗೆʼ ಎಂಬ ಯೋಜನೆ ನಿರೀಕ್ಷೆಯಂತೆ ಸಾಕಾರಗೊಳ್ಳದ ಹಿನ್ನೆಲೆ ಜನರೇ ತಮ್ಮ ಸ್ವಂತ ಹಣ ಖರ್ಚು ಮಾಡಿ ಅದರ ಪರ್ಯಾಯವೆಂಬಂತೆ ತಾತ್ಕಾಲಿಕವಾಗಿ ಯೋಜನೆ ರೂಪಿಸಿಕೊಂಡಿದ್ದಾರೆಯೇʼ ಎನ್ನುವಂತೆ ಕಂಡಿತು.

ಈ ಕುತೂಹಲದಿಂದ ಇನ್ನೊಂದು ಗಲ್ಲಿ ಪ್ರವೇಶಿಸಿದೆ. ಅಲ್ಲೊಬ್ಬ ಯುವ ತರುಣ ಸೋರುವ ನೀರಿನ ಪೈಪ್‌ ಜೋಡಿಸುತ್ತಿದ್ದ. ಅವರನ್ನು ಮಾತಾಡಿಸಲು ಪ್ರಯತ್ನಿಸಿ, ʼಇದು ಖರೀದಿ ನೀರಿನ ಪೈಪಾ? ಎಂದೆ.

ʼಹೌದುʼ ಎಂದು ಉತ್ತರಿಸಿದರೂ, ಅವರು ನನ್ನತ್ತ ಕಣ್ಣೆತ್ತಿಯೂ ನೋಡಲಿಲ್ಲ. ʼಎಲ್ಲರೂ ಬಂದು ಬರೀ ಕೇಳೋರೇ ಇದ್ದಾರೆ, ಯಾರೊಬ್ಬರೂ ಸಮಸ್ಯೆ ಬಗೆಹರಿಸುವುದಿಲ್ಲ. ಎಲ್ಲರಂತೆ ಇವರೊಬ್ಬರು ಇರಬೇಕುʼ ಎಂದುಕೊಂಡರೋ ಏನೋ ಎಂದು ನಾನು ಮರುಮಾತನಾಡದೆ ಅಲ್ಲಿಂದೆ ಬೇರೆಡೆ ಹೋದೆ.

ಆ ಊರಿನ ಯಾರೊಬ್ಬರಿಗೂ ʼನೀರಿನʼ ಬಗ್ಗೆ ಕೇಳಿದರೂ ʼಸಗಳ್ಯಾಚಾ ಘರಾಲಾ ಪಾನಿ ಖರೀದಿ ಆಹೇʼ (ಎಲ್ಲರ ಮನೆಗೂ ಖರೀದಿ ನೀರೇ ಅವಾ) ಎಂದು ಮರಾಠಿ-ಕನ್ನಡ ಮಿಶ್ರಿತ ಭಾಷೆಯಲ್ಲಿ ಉತ್ತರಿಸುವುದು ಬಿಟ್ಟರೆ ಬೇರೇನು ಹೇಳಲ್ಲ.‌

ʼನಮಗೆ ವಯಸ್ಸಾಗಿದೆ. ಗಂಡ-ಹೆಂಡತಿ ಮಾತ್ರ ಮನೆಯಲ್ಲಿ ಇರ್ತೀವಿ. ಇಬ್ಬರೇ ಇದ್ದರೂ ವರ್ಷಕ್ಕೆ ಐದು ಸಾವಿರ ಕೊಡಲೇಬೇಕು. ಹಣ ಕೊಟ್ಟು ನೀರು ಖರೀದಿಸದೇ ಬೇರೆ ದಾರಿಯಿಲ್ಲ. ಕೆಲಸ ಮಾಡಲು ಮೈಯಲ್ಲಿ ಶಕ್ತಿಯಿಲ್ಲ, ಆರೋಗ್ಯ ಕೈಕೊಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲದಕ್ಕೂ ಹಣ ಎಲ್ಲಿಂದ ತರೋದುʼ ಎಂದು ವೃದ್ಧ ಮಹಿಳೆಯೊಬ್ಬರು ಖಿನ್ನ ಮುಖಭಾವದೊಂದಿಗೆ ಹೇಳಿದರು.

WhatsApp Image 2026 03 23 at 6.16.47 PM
ಖಾಸಗಿಯವರಿಂದ ಪಡೆದ ಖರೀದಿ ನೀರಿನ ಪೈಪ್‌ ಸರಿಪಡಿಸುತ್ತಿರುವ ಗ್ರಾಮದ ಯುವಕ

ಗ್ರಾಮದ ಹಿರಿಯರಾದ ವೆಂಕಟರಾವ್‌ ಎಂಬುವರಿಗೆ ʼಯಾರ ಬಳಿ ನೀರು ಖರೀದಿಸುತ್ತೀರಾ? ಎಂದು ಕೇಳಿದೆ.

ʼಊರ ಸಮೀಪದ ತೋಟದಲ್ಲಿ ಖಾಸಗಿಯವರ ಬೋರ್‌ವೆಲ್ ಇವೆ. ನಾವೇ ಪೈಪ್‌ ಖರೀದಿಸಿ ಕನೆಕ್ಸನ್‌ ತಕೊಂಡಿವಿ, ಊರಿನ ಅರ್ಧಕ್ಕಿಂತ ಹೆಚ್ಚು ಜನರ ಮನೆಗೆ ಇದೇ ರೀತಿ ಖರೀದಿ ನೀರಿನ ಪೈಪ್‌ಲೈನ್ ಇದೆ. ವರ್ಷಕ್ಕೆ ಐದು ಸಾವಿರ ಒಮ್ಮೆಲೇ ಕೊಡ್ತೀವಿ. ಪ್ರತಿದಿನ ನೀರು ಹರಿಸುತ್ತಾರೆ. ಇನ್ನು ಹೆಚ್ಚು ಜನರಿದ್ದರೆ ವರ್ಷಕ್ಕೆ 7-8 ಸಾವಿರ ತಕೋತಾರೆ. ಒಬ್ಬೊಬ್ಬ ಖಾಸಗಿ ಬೋರ್‌ವೆಲ್ ಅವರು ಕನಿಷ್ಠ 50ಕ್ಕಿಂತ ಹೆಚ್ಚು ಮನೆಗಳಿಗೆ ನೀರು ಖರೀದಿ ಕೊಟ್ಟಿದ್ದಾರೆʼ ಎಂದು ಒಂದೇ ಮಾತಿನಲ್ಲಿ ಹೇಳಿಬಿಟ್ಟರು.

ʼಮತ್ತೆ ನಿಮ್ಮೂರು ಗ್ರಾಮ ಪಂಚಾಯತ್‌ ಕೇಂದ್ರ, ಇಷ್ಟು ದೊಡ್ಡ ಊರಿಗೆ ನೀರಿಲ್ಲಂದ್ರೆ ಹೇಗೆ?ʼ ಎಂದಾಗ, ʼದೊಡ್ಡ ಪಂಚಾಯತ್‌ ಇದ್ರೆ ಏನ್‌ ಬಂತು. ಊರಲ್ಲಿ 8 ಗ್ರಾಮ ಪಂಚಾಯತ್‌ ಸದಸ್ಯರಿದ್ದಾರೆ. 500ಕ್ಕೂ ಹೆಚ್ಚು ಕುಟುಂಬಗಳಿವೆ. ನೀರಿನ ಸಮಸ್ಯೆ ಬಗ್ಗೆ ಯಾರೊಬ್ಬರಿಗೂ ಕಾಳಜಿ ಇಲ್ಲ. ಗ್ರಾಮದ ಶೇ 70ಕ್ಕೂ ಅಧಿಕ ಮನೆಗಳಿಗೆ ಖರೀದಿ ನೀರಿನ ಪೂರೈಕೆಯಿದೆ. ಈ ಹಿಂದೆ ವರ್ಷಕ್ಕೆ 5 ಸಾವಿರ ಇತ್ತು. ಈಗ 1 ಸಾವಿರ ಹೆಚ್ಚು ಕೊಡಬೇಕೆಂಬ ಬೇಡಿಕೆಯಿಟ್ಟಿದ್ದಾರೆʼ ಎಂದು ಬೇಸರದಿಂದ ಹೇಳಿದರು.

ಇಡೀ ಗ್ರಾಮದಲ್ಲಿ ಸುಮಾರು 6-7 ಸಾವಿರ ಜನಸಂಖ್ಯೆ ಇದೆ. ಮೂರ್ನಾಲ್ಕು ವರ್ಷಗಳ ಹಿಂದೆ ‌ಜಲ ಜೀವನ್ ಮಿಷನ್‌ ಯೋಜನೆ ಅಡಿಯಲ್ಲಿ 696 ಮನೆಗಳಿಗೆ ನಲ್ಲಿಗಳನ್ನು ಹಾಕಲಾಗಿದೆ.‌ ಕೆಲಸ ಪೂರ್ಣಗೊಂಡಿದೆ ಅಧಿಕೃತ ದಾಖಲೆ ಹೇಳುತ್ತಿವೆ. ಆದರೆ, ಆ ನಲ್ಲಿಗಳಿಗೆ ಹನಿ ನೀರು ಬಾರದೆ ಹಾಳಾಗುತ್ತಿವೆ. ಊರಿಗೆ ಊರೇ ನೀರು ಖರೀದಿಸುವುದು ಈಗ ಸಾಮಾನ್ಯವಾಗಿದೆ. ಹೀಗಾಗಿ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲ ಅಂತ ಕಾಣುತ್ತದೆ. ಕೂಡಲೇ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಬೇಕು. ಅಲ್ಲಿಯವರೆಗೆ ಪಂಚಾಯತ್‌ ಸುಪರ್ದಿಗೆ ತೆಗೆದುಕೊಳ್ಳಬಾರದುʼ ಎನ್ನುತ್ತಾರೆ ಗ್ರಾಮದ ಮುಖಂಡ ಬಾಲಾಜಿ ಪಾಟೀಲ್‌.

ಗ್ರಾಮದ ಹಿರಿಯರಾದ ವೈಜನಾಥ ಮುಚಳಂಬೆ ಅವರನ್ನು ಮಾತಿಗೆಳೆದಾಗ, “ನಮ್ಮೂರಲ್ಲಿ ಮನೆ-ಮನೆಗೂ ಖಾಸಗಿ ಬೋರ್‌ವೆಲ್ ದಿಂದ ಪಡೆದ ಖರೀದಿ ನೀರೇ ಗತಿಯಾಗಿದೆ. ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರು ʼನಿಮ್ಮೂರಿಗೆ ನೀರು ಕೊಡಿಸುವರೆಗೂ ಊರಿಗೆ ಬರುವುದಿಲ್ಲʼ ಎಂದು ವಾಗ್ದಾನ ಮಾಡಿದ್ದರು. ಆದರೆ, ನಾಲ್ಕು ಸಲ ಆಯ್ಕೆಯಾದರೂ ಇಲ್ಲಿಯವರೆಗೆ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿಲ್ಲ. ಬಾವಲಗಾಂವ್‌ ಕೆರೆಯಿಂದ ನೀರು ತರುವ ಯೋಜನೆಯು ನಿರುಪಯುಕ್ತವಾಗಿದೆ. ಗ್ರಾಮ ಪಂಚಾಯತ್‌ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಹೇಳಿದರೂ ಸ್ಪಂದಿಸುತ್ತಿಲ್ಲ” ಎಂದು ಆಕ್ರೋಶ ಹೊರಹಾಕಿದರು.

WhatsApp Image 2026 03 23 at 6.16.49 PM
ಹನಿ ನೀರು ಹೊರಹಾಕದ ಜೆಜೆಎಂ ನಲ್ಲಿ ತುಕ್ಕು ಹಿಡಿಯುತ್ತಿದೆ.

ಪ್ರತಿವರ್ಷ ಔರಾದ್‌ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಆಹಾಕಾರ ಎದುರಾಗುತ್ತದೆ.‌ ಜನ ದೂರದಿಂದ ತಲೆ ಮೇಲೆ ನೀರನ್ನು ಹೊತ್ತು ತರುವುದು ಪರಿಸ್ಥಿತಿ ಇದ್ದೇ ಇದೆ. ಅಧಿಕಾರಿಗಳು ಅಂತಹ ಊರು-ತಾಂಡಾಗಳನ್ನು ಗುರುತಿಸಿ ಎರಡ್ಮೂರು ತಿಂಗಳ ಮಟ್ಟಿಗೆ ಬಾಡಿಗೆ ಪಡೆದ ಖಾಸಗಿ ಬಾವಿ-ಬೋರ್‌ವೆಲ್ ನೀರು, ಅದೂ ಇಲ್ಲದಿದ್ದರೆ ಟ್ಯಾಂಕರ್‌ ಮೂಲಕ ನೀರು ಪೂರೈಸುವುದು ರೂಢಿಯಾಗಿದೆ. ಜನರೂ ಅದನ್ನು ಮಾಮೂಲಿ ಎಂಬಂತೆ ಗಂಭೀರವಾಗಿ ಪರಿಗಣಿಸದೇ ತಮ್ಮ ಆಕ್ರೋಶವನ್ನು ಮೌನವಾಗಿ ನುಂಗುತ್ತಿದ್ದಾರೆ.

ಗ್ರಾಮ ಪಂಚಾಯತ್‌ ಕೇಂದ್ರ, ಸರ್ಕಾರಿ ಪ್ರೌಢ ಶಾಲೆ, ಪೊಲೀಸ್‌ ಠಾಣೆ ಇರುವ ಹೋಕ್ರಾಣ ದೊಡ್ಡ ಆ ಭಾಗದ ದೊಡ್ಡ ಊರುಗಳಲ್ಲಿ ಒಂದು. ʼಎಲ್ಲಾ ಇದ್ದರೂ ಏನೂ ಇಲ್ಲʼ ಎಂಬಂತೆ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಜನರಿಗೆ ಕುಡಿಯುವ ನೀರಿನ ತತ್ವಾರಕ್ಕೆ ಶಾಶ್ವತ ಪರಿಹಾರ ಇಲ್ಲದಂತೆ ಆಗಿದೆ.‌ ಈ ಸಮಸ್ಯೆಗೆ ಅಂತ್ಯ ಹಾಡಲು ಸ್ಥಳೀಯ ಜನಪ್ರತಿನಿಧಿಗಳಿಂದಲೂ ‌ಸಾಧ್ಯವಾಗಿಲ್ಲವೇ ಎಂಬುದು ಪ್ರಜ್ಞಾವಂತರ ಪ್ರಶ್ನೆ.

ನೀರಿನ ಸಮಸ್ಯೆ ಸಂಬಂಧ ಔರಾದ್‌ ತಾಲೂಕು ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಎಲ್ಲ ಪಂಚಾಯತ್‌ಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಆದರೆ, ಈ ಬಗ್ಗೆ ಹೋಕ್ರಾಣಾ ಗ್ರಾಮ ಪಂಚಾಯತ್‌ ಪಿಡಿಒ ಕೃಷ್ಣಪ್ಪ ಅವರನ್ನು ಮಾಹಿತಿಗಾಗಿ ʼಈದಿನʼ ಕರೆ ಮಾಡಿದರೆ ಅವರು ಸ್ಪಂದಿಸಿರುವುದಿಲ್ಲ.

WhatsApp Image 2026 03 24 at 11.50.17 AM

ಇದನ್ನೂ ಓದಿ : ಬೀದರ್‌ | ʼಜಲ ಜೀವನʼಕ್ಕೆ ಗ್ರಹಣ, ಹನಿ ನೀರಿಗೂ ತತ್ವಾರ; ಬೇಕಿದೆ ದೂರಗಾಮಿ ಪರಿಹಾರ-ಭಾಗ-1

ಯಾವುದೇ ಒಂದು ಸರ್ಕಾರಿ ಯೋಜನೆ ಕೇವಲ ಸಾಧನೆಯ ಪಟ್ಟಿಗೆ ಸೀಮಿತವಾಗದೆ, ಜನರ ಬದುಕಿನಲ್ಲಿ ಬದಲಾವಣೆ ತಂದಾಗ ಮಾತ್ರ ಅದಕ್ಕೆ ಸಾರ್ಥಕತೆ ದೊರೆಯುತ್ತದೆ. ‘ನಾಮ್‌ ಕಾವಾಸ್ತೆ’ (ಹೆಸರಿಗಷ್ಟೇ)ಗೆ ಜಾರಿಯಾಗುವ ಯೋಜನೆಗಳು ಸಾರ್ವಜನಿಕ ಹಣದ ಪೋಲಲ್ಲದೆ ಬೇರೇನೂ ಅಲ್ಲ. ಪ್ರಕೃತಿ ಮುನಿದಾಗ ಬರ, ಒಲಿದಾಗ ಪ್ರವಾಹ ಎಂಬ ಸ್ಥಿತಿ ನಿರ್ಮಾಣವಾಗಿದ್ದರೂ, ನೀರಿನ ತತ್ವಾರ ನೀಗದಿರುವುದು ನಮ್ಮ ಜಲ ನಿರ್ವಹಣೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಊರಿನ ಸುತ್ತ ಕೆರೆ-ಕಟ್ಟೆಗಳಿದ್ದರೂ ಅವು ಬತ್ತಿ ಹೋಗುತ್ತಿವೆ ಎಂದರೆ, ನಾವು ಮಳೆನೀರನ್ನು ಹಿಡಿದಿಡುವ (Rainwater Harvesting) ಮತ್ತು ಅಂತರ್ಜಲ ಮರುಪೂರಣ ಮಾಡುವ ಮೂಲಭೂತ ಕೆಲಸಗಳಲ್ಲಿ ಎಡವುತ್ತಿದ್ದೇವೆ ಎಂದರ್ಥ. ಅಬ್ಬರದ ಪ್ರಚಾರದ ಯೋಜನೆಗಳಿಗಿಂತ, ನೆಲದ ಜಲ ಮೂಲಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಜನಪ್ರತಿನಿಧಿಗಳು ಮಾಡಲೇಬೇಕಾಗಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...