ಬೀದರ ನಗರದ ಬ್ರಿಮ್ಸ್ ಆಸ್ಪತ್ರೆ ಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ರೋಗಿಗಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಯುವರಕ್ಷಣಾ ವೇದಿಕೆ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.
ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ʼಆಸ್ಪತ್ರೆಗಳಿಗೆ ತೆರಳುವ ರೋಗಿಗಳು ಬಳಸುವ ಶೌಚಾಲಯಗಳಿಗೆ ಬೀಗ ಹಾಕಲಾಗುತ್ತಿದೆ. ಔಷಧಿ, ರಕ್ತಪರೀಕ್ಷೆ ಆಸ್ಪತ್ರೆಯಲ್ಲಿ ಮಾಡದೆ ಖಾಸಗಿ ಅಂಗಡಿಗಳಿಗೆ ಕಳುಹಿಸಲಾಗುತ್ತಿದೆ. ಖಾಸಗಿ ಆಂಬುಲೆನ್ಸ್ ಅವರು ಹಾವಳಿ ಹೆಚ್ಚಾಗಿದ್ದು, ಬಡ ರೋಗಿಗಳಿಂದ ಹೆಚ್ಚಿನ ಹಣದ ಬೇಡಿಕೆ ಇಡುತ್ತಿದ್ದಾರೆ. ವೈದ್ಯರು, ಸಿಬ್ಬಂದಿ ಸಕಾಲಕ್ಕೆ ಆಸ್ಪತ್ರೆಗೆ ಹಾಜರಾಗುತ್ತಿಲ್ಲʼ ಎಂದು ಸಂಘಟನೆ ದೂರಿದೆ.
ಆಸ್ಪತ್ರೆಯಲ್ಲಿ ಪದೇ ಪದೇ ಹಲವು ಸಮಸ್ಯೆಗಳು ಕಂಡು ಬಂದರೂ ಆಸ್ಪತ್ರೆ ಆಡಳಿತ ಮಂಡಳಿ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಇನ್ನು ಐಸಿಯು ಘಟಕದ ವೈದ್ಯ ಶಿವಕುಮಾರ ಪಾಟೀಲ ಅವರು ದುರ್ವರ್ತನೆ ತೋರಿದ್ದಾರೆʼ ಎಂದು ಸಂಘಟನೆ ಗಂಭೀರ ಆರೋಪಿಸಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಕೇಜ್ರೀವಾಲ್ ಖುಲಾಸೆ, ಒಂದೊಂದಾಗಿ ಕುಸಿಯುತ್ತಿರುವ ಬಿಜೆಪಿ ಹುನ್ನಾರಗಳು
ಕರ್ನಾಟಕ ಯುವರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸುನೀಲ ಎಂ.ಎಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಕೇಶ.ಡಿ, ಜಿಲ್ಲಾಧ್ಯಕ್ಷ ವಿಲ್ಸನ್ ದೊಡ್ಡಮನಿ ಸೇರಿದಂತೆ ವೇದಿಕೆಯ ಪ್ರಮುಖರಾದ ಪರಮೇಶ ರಾಜಗೀರಾ, ಸಚಿನ್ ಕಲಾಲ, ಗುರುದಾಸ ಅಮದಲಪಾಡ, ಶಿವಕುಮಾರ ರೆಡ್ಡಿ ಮತ್ತಿತರರು ಭಾಗವಹಿಸಿದರು.





