ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವಿರುದ್ಧ ಕನೇರಿ ಸ್ವಾಮೀಜಿ ನೀಡಿರುವ ಹೇಳಿಕೆ ಖಂಡನೀಯ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಬೀದರ್ ನಗರದಲ್ಲಿ ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಓಂಪ್ರಕಾಶ ರೊಟ್ಟೆ, ಬಾಬುರಾವ್ ಹೊನ್ನಾ, ಜಗದೀಶ್ವರ ಬಿರಾದಾರ, ಮಹೇಶ ಗೋರನಾಳಕರ್, ಸಂತೋಷ ಜೋಳದಾಬಕೆ, ಸಿದ್ದು ಫುಲಾರೆ, ರಾಜಕುಮಾರ ಪಾಟೀಲ ಹಾಗೂ ಪ್ರಕಾಶ ರಾವಣ ಮಾತನಾಡಿದರು.
ನಿಜಗುಣಪ್ರಭು ಸ್ವಾಮೀಜಿ ಅವರನ್ನು “ಹೊಡೆಯಿರಿ, ಕಡೆಯಿರಿ” ಎಂದು ಕನೇರಿ ಸ್ವಾಮೀಜಿ ನೀಡಿರುವ ಹೇಳಿಕೆ ಅವರಿಗೆ ಶೋಭೆ ತರುವಂಥದ್ದಲ್ಲ. ಇವರ ಹಿಂದೆ ಯಾರೂ ಇಲ್ಲವೆಂದು ತಿಳಿಯಬೇಡಿ’ ಎಂದು ಎಚ್ಚರಿಕೆ ನೀಡಿದರು.
ಲಿಂಗಾಯತರು ಸಂಘಟಿತರು. ಆದರೆ ಉದಾರ ಚಿಂತನೆಯವರು. ಮೌನ ವಹಿಸಿದ್ದಾರೆ ಎಂದರೆ ಸುಮ್ಮನಿದ್ದಾರೆ ಎಂದರ್ಥವಲ್ಲ. ನಿಮ್ಮ ಸಿನಿಕತನದ ಹೇಳಿಕೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಮೌನಕ್ಕೆ ಜಾರಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡರೆ ಸಮಾಜದವರು ಸುಮ್ಮನಿರುವುದಿಲ್ಲ.ಅವಿವೇಕಿ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು





