ಮಾತೋಶ್ರೀ ರಮಾತಾಯಿ ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವ ಪ್ರಯಕ್ತ ಜಿಲ್ಲೆಯ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಪೂರ್ವ ಸಿದ್ದತೆ ಪರೀಕ್ಷೆ ಬಗ್ಗೆ ತರಬೇತಿ, ಕಾನೂನು ಅರಿವು ಹಾಗೂ ನೆರವು ಮತ್ತು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಫೆ.26ರಂದು ಆಯೋಜಿಸಲಾಗಿದೆ ಎಂದು ಬುದ್ದ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʼಫೆ.26ರಂದು ಬೆಳಿಗ್ಗೆ 11:30ಗಂಟೆಗೆ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಬುದ್ದ ಬೆಳಕು ಟ್ರಸ್ಟ್ ವತಿಯಿಂದ ಜರುಗಲಿರುವ ಈ ಕಾರ್ಯಕ್ರಮವನ್ನು ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ಅಧ್ಯಕ್ಷ ಡಾ.ಶಿವಕುಮಾರ ಉದ್ಘಾಟಿಸಲಿದ್ದು, ಮಾತೋಶ್ರೀ ರಮಾತಾಯಿ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷೆ ನಂದಮ್ಮ ಕುಂದೆ ಅಧ್ಯಕ್ಷತೆ ವಹಿಸುವರುʼ ಎಂದು ವಿವರಿಸಿದರು.
ʼಮುಖ್ಯ ಅತಿಥಿಗಳಾಗಿ ಸರ್ಕಾರದ ನಿವೃತ್ತ ಅಪರ ಕಾರ್ಯದರ್ಶಿ ಡಾ.ಭೀಮಸೇನರಾವ ಶಿಂಧೆ, ನಿವೃತ್ತ ಎಇ ಮಲ್ಲಿಕಾರ್ಜುನ ಸುಬಾನೆ ಹಾಗೂ ಮನೆ-ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಟಾನ ಸಮಿತಿ ಅಧ್ಯಕ್ಷ ಡಾ.ಕಾಶಿನಾಥ ಚಲವಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಯಂತ್ಯೋತ್ಸವ ಸಮಿತಿಯ ಗೌರವಾಧ್ಯಕ್ಷೆ ಉಷಾಬಾಯಿ ಬನಸೊಡೆ, ಕಾರ್ಯಾಧ್ಯಕ್ಷೆ ಕಲ್ಪನಾ ಗೋರನಾಳಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ, ಸಾಮಾಜಿಕ ಹೋರಾಟಗಾರ ಮನೋಜ ವಾಲೆ ಸೇರಿದಂತೆ ಸಮಿತಿಯ ಇತರೆ ಪದಾಧಿಕಾರಿಗಳು ಭಾಗವಹಿಸುವರುʼ ಎಂದು ತಿಳಿಸಿದರು.

ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಹುಮನಾಬಾದ್ ಮಾಜಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಟೈಗರ್ ಉದ್ಘಾಟಿಸಲಿದ್ದು, ಶಶಿಕಲಾ ಶರ್ಮಾ, ಮಹಾದೇವಿ ಕಸ್ತುರೆ, ಕಮಳಮ್ಮ ಸಂತಪುರೆ ಹಾಗೂ ಗಂಗಮ್ಮ ಫುಲೆ ಉಪಸ್ಥಿತರಿರುವರು.
ಮನೆ-ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಟಾನ ಸಮಿತಿ ಅಧ್ಯಕ್ಷ ಡಾ.ಕಾಶಿನಾಥ ಚಲವಾ ಮಾತನಾಡಿ, ʼಮಾತೋಶ್ರೀ ರಮಾತಾಯಿ ಅಂಬೇಡ್ಕರ್ ಅವರು ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ವನಂದಾ ಗ್ರಾಮದಲ್ಲಿ 7 ಫೆಬ್ರವರಿ 1898ರಂದು ಜನಿಸಿದರು. ಅವರ ವಿಚಾರಧಾರೆಗಳನ್ನು ಪರಿಚಯಿಸುವ ಹಾಗೂ ಅವರ ತ್ಯಾಗಮಯಿ ಬದುಕು ತಿಳಿಸುವ ಕಾರ್ಯಕ್ರಮ ಇದಾಗಿದೆʼ ಎಂದರು.
ಜಯಂತ್ಯುತ್ಸವ ಸಮಿತಿ ಅಧ್ಯಕ್ಷೆ ನಂದಮ್ಮ ಕುಂದೆ ಮಾತನಾಡಿ, ʼಇದು ಕೇವಲ ಅಂಬೇಡ್ಕರ್‌ವಾದಿಗಳು ಹಾಗೂ ಬೌದ್ದ ಅನುಯಾಯಿಗಳ ಕಾರ್ಯಕ್ರಮ ಅಲ್ಲ. ಇಡೀ ಮಹಿಳಾ ಸಮೂಹದ ಕಾರ್ಯಕ್ರಮವಾಗಿದೆ. ಈ ಅಪರೂಪದ ಕಾರ್ಯಕ್ರಮಕ್ಕೆ ಎಲ್ಲ ಸಮುದಾಯದ ಮಹಿಳೆಯರು ಸಾಕ್ಷಿಗಳಾಗಬೇಕುʼ ಎಂದು ಕೋರಿದರು.
ಇದನ್ನೂ ಓದಿ : ಬೀದರ್ | ಬಲಗೈ ಸಮುದಾಯದ ಹೋರಾಟಗಾರರ ಮೇಲೆ ಪ್ರಕರಣ : ಡಿವಿಪಿ ಖಂಡನೆ
ಯುವ ಮುಖಂಡ ಶರಣು ಫುಲೆ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.





