ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಹಯೋಗದಲ್ಲಿ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯು ಸರಳ, ಸಾಮೂಹಿಕ ವಿವಾಹ ನಡೆಸಲು ಮುಂದಾಗಿದೆ. ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರು ಈ ಸಾಮೂಹಿಕ ವಿವಾಹದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಮಿತಿ ಕಾರ್ಯದರ್ಶಿ ಅಶೋಕ ವಡಗಾವೆ ಮನವಿ ಮಾಡಿದ್ದಾರೆ.
ಶಾಹೀನ್ ಕಾಲೇಜಿನಲ್ಲಿರುವ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ʼಗುಟ್ಕಾ ಸೇರಿದಂತೆ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುವುದು, ವ್ಯಸನ ಮುಕ್ತ ಬೀದರ್ ನಿರ್ಮಾಣ, ಭಿಕ್ಷಾಟನೆ ಕುರಿತು ಜಾಗೃತಿ, ಸರಳ ವಿವಾಹದ ಮಹತ್ವ ಮತ್ತು ಅಗತ್ಯ ಕುರಿತು ಪಾಲಕರಿಗೆ ಮನವರಿಕೆ ಮಾಡಿಕೊಡುವುದು ಸಮಿತಿಯ ಪ್ರಮುಖ ಕಾರ್ಯಗಳಾಗಿವೆʼ ಎಂದರು.
ʼಮದುವೆಯಲ್ಲಿನ ದುಂದುವೆಚ್ಚವು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮದುವೆಗಾಗಿ ಖರ್ಚು ಮಾಡದೆ, ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುವಂತೆ ಪಾಲಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಸರಳ ವಿವಾಹದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆʼ ಎಂದು ಸಮಿತಿ ಪ್ರಮುಖ ಬಸವರಾಜ ಮಾಳಗೆ ಹೇಳಿದರು.
ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವವರು ಈ ಸರಳ, ಸಾಮೂಹಿಕ ವಿವಾಹದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಸುರೇಶ ಚೆನ್ನಶೆಟ್ಟಿ ಕೋರಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅದ್ಯಕ್ಷ ಡಾ.ಅಬ್ದುಲ್ ಖದೀರ್, ಡಾ.ರಾಜಶೇಖರ ಸೇಡಂಕರ್, ಶಂಭುಲಿಂಗ ವಾಲದೊಡ್ಡಿ ಮತ್ತಿತರ ಗಣ್ಯರು, ಸಮಿತಿಯ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.
ಸರಳ ಸಾಮೂಹಿಕ ವಿವಾಹವನ್ನು ಫೆಬ್ರವರಿ ಅಂತ್ಯದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಆಸಕ್ತರು ಹೆಸರು ನೋಂದಣಿ ಮತ್ತಿತರ ಮಾಹಿತಿಗಾಗಿ ರಾಮಕೃಷ್ಣರೆಡ್ಡಿ (9071018670) ಅವರನ್ನು ಸಂಪರ್ಕಿಸಬಹುದು. ಹೆಸರು ನೋಂದಣಿಗೆ ಫೆ.15 ಕೊನೆಯ ದಿನವಾಗಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯವು ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದೆ. ಪ್ರತಿ ಜೋಡಿಗೆ 50 ಸಾವಿರ ರೂ. ಪ್ರೋತ್ಸಾಹ ಧನ ಕೊಡಲಿದೆ ಎಂದು ತಿಳಿಸಿದ್ದಾರೆ.
ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ಜಯ: ವಿಜಯೋತ್ಸವ :
ಮಹಾರಾಷ್ಟ್ರದಲ್ಲಿ ನಡೆದ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅಭೂತಪೂರ್ವ ವಿಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಬೀದರ್ ನಗರ ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಧ್ವಜಗಳನ್ನು ಹಾರಿಸಿ, ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ʼದೇಶದ ರಾಜಕೀಯದಲ್ಲಿ ಬಿಜೆಪಿಯ ಗೆಲುವು ಜನರ ವಿಶ್ವಾಸ ಮತ್ತು ಅಭಿವೃದ್ಧಿ ಪರ ಆಡಳಿತಕ್ಕೆ ದೊರೆತ ಬೆಂಬಲವೆಂದು ಅವರು ಅಭಿಪ್ರಾಯಪಟ್ಟರು. ಈ ಗೆಲುವು ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ತರಲಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಬುಡಾ ಅಧ್ಯಕ್ಷರಾದ ಬಾಬುವಾಲಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಪಾಟೀಲ್ ಗಾದಗಿ, ರಾಜಕುಮಾರ ಚಿದ್ರಿ, ಶಶಿಧರ್ ಹೊಸಳ್ಳಿ, ರಾಜಶೇಖರ್ ನಾಗಮೂರ್ತಿ, ಶ್ರೀನಿವಾಸ ಚೌದ್ರಿ, ರಾಜಕುಮಾರ ನೆಮ್ತಾಬಾದ್, ಸುಭಾಷ್ ಮಡಿವಾಳ, ಗುರುನಾಥ ಜಾಂತಿಕರ್, ರೋಷನ್ ವರ್ಮಾ, ನರೇಶ ಗೌಳಿ, ಗಣೇಶ್ ಬೋಸ್ಲೆ, ಬಾಬುರಾವ್ ಕಾರಬಾರಿ, ನಿತೀನ್, ಭೂಷಣ್ , ವೀರೇಶ್ ಸ್ವಾಮಿ, ಸಂತೋಷ ರೆಡ್ಡಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಜ.19ರಂದು ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ :
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಜ.19 ರಂದು ಬೆಳಿಗ್ಗೆ 10ಕ್ಕೆ ಬೀದರನ ಪ್ರತಾಪ ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಜಿ. ಸುರೇಶ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಗುರುಪ್ರಸಾದ್ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಬಿ. ಸೂರ್ಯವಂಶಿ ಅಧ್ಯಕ್ಷತೆ, ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಗಿರೀಶ್ ವಿ. ನಾಯಕ್, ಉಪಾಧ್ಯಕ್ಷ ರಾಜು ದೊಡ್ಡಮನಿ ಘನ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ಬೀದರ್ | ಆಗಸದಲ್ಲಿ ಚಿತ್ತಾರ ಮೂಡಿಸಿದ ‘ಏರ್ ಶೋ’
ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯದ ಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರನ್ನು ಸನ್ಮಾನಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಬಿ.ಸೂರ್ಯವಂಶಿ ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಕಾರ್ಯಗಾರದ ಪ್ರಯುಕ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಒಡಿ ಸೌಲಭ್ಯ ಕಲ್ಪಿಸಿದ್ದಾರೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯಾಗಾರದ ಪ್ರಯೋಜನ ಪಡೆಯಬೇಕು ಎಂದು ಕೋರಿದ್ದಾರೆ.
ಪುರಸ್ಕಾರ ತಾರತಮ್ಯ ವಿರೋಧಿಸಿ ಧರಣಿ: ಆರ್‌ಪಿಐ ಬೆಂಬಲ
2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆಯಲ್ಲಿ ಆಗಿರುವ ತಾರತಮ್ಯ ವಿರೋಧಿಸಿ ಮರಕಲ್ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಸಂಘಟನೆಗಳು ಜ.19 ರಂದು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ನಡೆಸಲಿರುವ ಧರಣಿ ಸತ್ಯಾಗ್ರಹಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಬೆಂಬಲ ಘೋಷಿಸಿದೆ ಎಂದು
152 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದ ಮರಕಲ್ ಗ್ರಾಮ ಪಂಚಾಯಿತಿಗೆ ಅನ್ಯಾಯ ಮಾಡಲಾಗಿದೆ. ಕಡಿಮೆ ಅಂಕ ಪಡೆದ ಗ್ರಾಮ ಪಂಚಾಯಿತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಜಿಲ್ಲಾ ಪಂಚಾಯಿತಿ ಸಿಇಒ ಅವರು ತಾರತಮ್ಯ ನೀತಿ ಅನುಸರಿಸಿದ್ದಾರೆ. ಹೀಗಾಗಿ ಅನ್ಯಾಯದ ವಿರುದ್ಧದ ಧರಣಿಗೆ ಪಕ್ಷ ಬೆಂಬಲ ಸೂಚಿಸಿದ್ದು, ಧರಣಿಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ರಾಜ್ಯ ಸಂಯೋಜಕ ಮಹೇಶ ಗೋರನಾಳಕರ್, ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್ ರಾವಣ, ಕಲಬುರಗಿ ವಿಭಾಗೀಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಉಷಾಬಾಯಿ ಬನ್ಸೂಡೆ, ಜಿಲ್ಲಾ ಘಟಕದ ಅಧ್ಯಕ್ಷೆ ನಂದಮ್ಮ ಕುಂದೆ ಹಾಗೂ ಪ್ರಧಾನ ಕಾರ್ಯದರ್ಶಿ ಶಶಿಕಲಾ ತಿಳಿಸಿದ್ದಾರೆ.
ಕೈಗಾರಿಕಾ ನಿವೇಶನ ಹಂಚಿಕೆಯಲ್ಲಿ ನ್ಯಾಯಕ್ಕೆ ಒತ್ತಾಯ :
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಕೈಗಾರಿಕಾ ನಿವೇಶನಗಳ ಹಂಚಿಕೆ ಪ್ರಕ್ರಿಯೆಯಲ್ಲಿ ನಿಯಮಾನುಸಾರವಾಗಿ ಎಸ್.ಸಿ., ಎಸ್.ಟಿ., ಓಬಿಸಿ ಮತ್ತು ಮಾಜಿ ಸೈನಿಕರಿಗೆ ನ್ಯಾಯ ಒದಗಿಸಬೇಕೆಂದು ಬಿ.ಎಸ್.ಪಿ. ಪಕ್ಷದ ಮುಖಂಡರು ಕೆಐಎಡಿಬಿ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಸ್ವಯಂ ಕೈಗಾರಿಕಾ ಸ್ಥಾಪನೆಗೆ ನಿವೇಶನಗಳ ಹಂಚಿಕೆ ಸಂಬಂಧ ಜನವರಿ 20, 2026ರಂದು ಪೂರ್ವಭಾವಿ ಸಭೆ ಕರೆಯಲಾಗಿದ್ದು, ಹಿಂದಿನ ವರ್ಷಗಳಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಮಾಜಿ ಸೈನಿಕರು, ಎಸ್.ಸಿ., ಎಸ್.ಟಿ., ಓಬಿಸಿ ವರ್ಗದ ಅರ್ಹರು ವಂಚಿತರಾಗಿದ್ದಾರೆ ಎಂಬ ಹಲವು ದೂರುಗಳು ಪಕ್ಷದ ಗಮನಕ್ಕೆ ಬಂದಿವೆʼ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ದಿನಗಳಲ್ಲಿ ನಡೆಯಲಿರುವ ಆಯ್ಕೆ ಪ್ರಕ್ರಿಯೆಯಲ್ಲಿ ನಿಯಮಾನುಸಾರವಾಗಿ ಅರ್ಹರಿಗೆ ಕೈಗಾರಿಕಾ ನಿವೇಶನಗಳು ದೊರಕುವಂತೆ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಬೇಕು. ಈ ಹಿಂದೆ ವಂಚಿತರಾದ ಅರ್ಹರಿಗೆ ನ್ಯಾಯ ಒದಗಿಸಿ, ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕ, ಸರಾಗ ಮತ್ತು ನ್ಯಾಯಸಮ್ಮತವಾಗಿ ನಡೆಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಒಂದು ವೇಳೆ ಆಯ್ಕೆ ಪ್ರಕ್ರಿಯೆಯ ಬಳಿಕ ಎಸ್.ಸಿ., ಎಸ್.ಟಿ., ಮಾಜಿ ಸೈನಿಕರು ಹಾಗೂ ಇತರ ಅರ್ಹರಿಗೆ ಅನ್ಯಾಯವಾದಲ್ಲಿ, ಪಕ್ಷದ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : ಬೀದರ್ | ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ ಆರೋಪ : ವಸತಿ ಶಾಲೆ ಪ್ರಾಚಾರ್ಯ ಅಮಾನತು
ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಕಪೀಲ ಗೋಡಬೊಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ ಭಾವಿದೊಡ್ಡಿ, ಜಿಲ್ಲಾ ಸಂಯೋಜಕ ರಾಜಕುಮಾರ ಮೂಲಭಾರತಿ, ಕಪಿಲ, ಅಂಬಾದಾಸ ಚಕ್ರವರ್ತಿ, ಮಹೇಶ್ ಭೋಲಾ, ಸುರೇಶ್ ಜೋಜನಾಕರ್, ಸಚಿನ್ ಗಿರಿ ಹಾಗೂ ಜಾಫರ್ ಖುರೇಷಿ ಸೇರಿದಂತೆ ಸೇರಿದಂತೆ ಬಿಎಸ್ಪಿ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
–ನಿಮ್ಮ ಊರು, ನಗರ, ಪಟ್ಟಣದ ಕುಂದು ಕೊರತೆಗಳ ಪೋಟೋ, ವಿಡಿಯೋ ಮಾಹಿತಿಯನ್ನು
ಈದಿನ.ಕಾಮ್ ನ್ಯೂಸ್ ಬೀದರ್ ಸಹಾಯವಾಣಿ 9035053805 ವಾಟ್ಸಪ್ ನಂಬರ್‌ಗೆ ಕಳುಹಿಸಿ.





