2026–27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಶೇ.24.1ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7(ಸಿ) ಅನ್ನು ರದ್ದುಗೊಳಿಸಿ ಅನುದಾನದ ದುರ್ಬಳಕೆಯನ್ನು ತಡೆಯಬೇಕು. ಎಸ್‌ಸಿ, ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಸುಮಾರು ₹25 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವ ಕ್ರಮ ಖಂಡನೀಯ. ಆ ಹಣವನ್ನು ಕೂಡಲೇ ಮರುಸ್ಥಾಪಿಸಬೇಕು ಎಂದು ಆಗ್ರಹಿಸಲಾಗಿದೆ.
ಸಂವಿಧಾನದ ನಿರ್ದೇಶಕ ತತ್ವಗಳ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲು ಮಾಡುವುದು ಸರ್ಕಾರದ ಕರ್ತವ್ಯ. ರಾಜ್ಯ ಸರ್ಕಾರವು ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ, ದಲಿತ ಸಮುದಾಯದ ಶಿಕ್ಷಣ, ವಸತಿ, ಭೂ ಹಕ್ಕು, ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಭದ್ರತೆ ವಿಷಯಗಳಲ್ಲಿ ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಮುಖ ಬೇಡಿಕೆಗಳು:ದಲಿತರ ಅಭಿವೃದ್ಧಿಗೆ ಶೇ.24.1 ಅನುದಾನ ಕಡ್ಡಾಯ ಮೀಸಲಿಡಬೇಕು. ವರ್ಗಾಯಿಸಿದ ₹25,000 ಕೋಟಿ ಅನುದಾನ ಮರುಸ್ಥಾಪನೆ. ನಿವೇಶನ ರಹಿತ ಕುಟುಂಬಗಳಿಗೆ ಭೂಮಿ ಮತ್ತು ವಸತಿ ಸೌಲಭ್ಯ. ಬಗರ್ ಹುಕುಂ ಸಾಗುವಳಿದಾರರಿಗೆ ಭೂ ಹಕ್ಕು. ದೇವದಾಸಿ, ವಿಧವಾ ಹಾಗೂ ವೃದ್ಧರಿಗೆ ಮಾಸಿಕ ಪಿಂಚಣಿ ಹೆಚ್ಚಳ. ದಲಿತ ಉದ್ಯಮ ಮತ್ತು ಕಲ್ಯಾಣ ಯೋಜನೆಗಳಿಗೆ ಹೆಚ್ಚುವರಿ ಅನುದಾನ. ಪ್ರೊ. ಬಿ. ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ. ಆಸ್ಪತ್ರೆ ನಿರ್ಲಕ್ಷ್ಯ ಪ್ರಕರಣಗಳಿಗೆ ನ್ಯಾಯ. ಗೋಹತ್ಯೆ ಕಾಯ್ದೆ ರದ್ದುಪಡಿಸುವಂತೆ ಆಗ್ರಹಿಸಲಾಗಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರೆ, ಜಿಲ್ಲಾ ಸಹ ಸಂಚಾಲಕರಾದ ವಿಜಯಕುಮಾರ ಐಹೊಳೆ ಪ್ರಮುಖರಾದ ಗುಂಡಪ್ಪ ಜ್ಯೋತಿ, ಅನೀಲಕುಮಾರ ಬಡಿಗೇರ್, ಜೈಪ್ರಕಾಶ ಅಷ್ಟೂರೆ, ಮಹಾದೇವ ದೇವೆ, ಅನೀಲಕುಮಾರ ಕಾಂಬಳೆ, ಜೈಪ್ರಕಾಶ ಕೇರುರ್‌ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





