ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದ ರೋಸ್ಟರ್ ವ್ಯವಸ್ಥೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಪರಿಶಿಷ್ಟ ಜಾತಿ ಬಲಗೈ ಸಮುದಾಯ ಹೋರಾಟ ಸಮಿತಿ ವತಿಯಿಂದ ಬಸವಕಲ್ಯಾಣ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಐತಿಹಾಸಿಕ ಕೋಟೆಯಿಂದ ಆರಂಭವಾದ ಪ್ರತಿಭಟನಾಮೆರವಣಿಗೆ ಗಾಂಧೀಜಿ, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ನಡೆಯಿತು. ಪ್ರತಿಭಟನೆಯುದ್ದಕ್ಕೂ ಒಳ ಮೀಸಲಾತಿ ವರದಿ ಸರಿಪಡಿಸಿ ಬಲಗೈ ಸಮುದಾಯಕ್ಕೆ ನ್ಯಾಯ ಕೊಡಿಸಿ ಎಂದು ಘೋಷಣೆ ಕೂಗಿದರು.
ಈ ಕುರಿತು ರಾಜ್ಯಪಾಲರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ದತ್ತಾತ್ರೆಯ ಗಾದಾ ಅವರಿಗೆ ಸಲ್ಲಿಸಿದರು.
ʼಪರಿಶಿಷ್ಟ ಜಾತಿಗಳನ್ನು ಪ್ರವರ್ಗ–ಎ, ಬಿ ಮತ್ತು ಸಿ ಎಂದು ವಿಂಗಡಿಸಿದ ಬಳಿಕ ರೋಸ್ಟರ್ ವ್ಯವಸ್ಥೆಯಲ್ಲಿ ಅಸಮಾನತೆ ಉಂಟಾಗಿದೆ. ವಿಶೇಷವಾಗಿ ಪ್ರವರ್ಗ–ಬಿ ಮತ್ತು ಸಿ ಸಮುದಾಯಗಳಿಗೆ ಅವಕಾಶಗಳು ಕಡಿಮೆಯಾಗುತ್ತಿದ್ದು, ಸಮಾನ ಅವಕಾಶಗಳ ಸಂವಿಧಾನಾತ್ಮಕ ಹಕ್ಕಿಗೆ ಧಕ್ಕೆ ಉಂಟಾಗಿದೆ ಎಂದು ಮುಖಂಡರು ಆರೋಪಿಸಿದರು.
ಪ್ರಸ್ತುತ ರೋಸ್ಟರ್ ವ್ಯವಸ್ಥೆಯಲ್ಲಿ ಪ್ರವರ್ಗ–ಎ ಗೆ ಮೊದಲ ಸ್ಥಾನ, ಪ್ರವರ್ಗ–ಬಿ ಗೆ ಒಂಬತ್ತನೇ ಸ್ಥಾನ ಹಾಗೂ ಪ್ರವರ್ಗ–ಸಿ ಗೆ ಹದಿನೈದನೇ ಸ್ಥಾನ ನೀಡಿರುವುದು ನ್ಯಾಯಸಮ್ಮತವಲ್ಲ. ಇದರಿಂದ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ದೊರೆಯದೇ ಅನ್ಯಾಯವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸರ್ಕಾರ ಒಳಮೀಸಲಾತಿ ಸಂಬಂಧಿತ ವರದಿಯನ್ನು ಮರುಪರಿಶೀಲಿಸಿ ಪ್ರವರ್ಗ–ಎ, ಬಿ, ಹಾಗೂ ಸಿ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು. ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಹೋರಾಟ ಸಮಿತಿ ಎಚ್ಚರಿಸಿದೆ.
ʼರೋಸ್ಟರ್ ಬಿಂದುವಿನಲ್ಲಿ ಇರುವ ನ್ಯೂನ್ಯತೆಗಳನ್ನು ಹಾಗೂ ಸರ್ಕಾರ ತಮಗೆ ಕಳುಹಿಸಿರುವ ಒಳಮಿಸಲಾತಿಯ ವರದಿಯನ್ನು ಪ್ರವರ್ಗ-ಬಿ ಮತ್ತು ಸಿ ರವರಿಗೆ ಮರಣ ಶಾಸನವಾಗಿದ್ದು, ಇದನ್ನು ಸರ್ಕಾರಕ್ಕೆ ಹಿಂದಕ್ಕೆ ಕಳುಹಿಸಬೇಕು. ಪ್ರವರ್ಗ-ಎ, ಬಿ,ಸಿ ರವರಿಗೆ ಸಮಾನ ಅವಕಾಶ ಕಲ್ಪಿಸುವಂತಹ ಕಾಯ್ದೆಯನ್ನು ರೂಪಿಸಬೇಕು ಮತ್ತು ಒಳಮಿಸಲಾತಿಗೆ ಅನ್ವಯಿಸುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಿ ಸರಿಪಡಿಸಬೇಕುʼ ಎಂದು ಒತ್ತಾಯಿಸಿದರು.
ʼಪ್ರವರ್ಗ-ಎ, ಬಿ, ಸಿ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳಮಿಸಲಾತಿ ವರದಿಯ ಸಮಸ್ಯೆಯು ಬಗೆಹರಿಯುವ ಪ್ರಸ್ತುತ ಶೈಕ್ಷಣಿಕ ವಲಯ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳಮೀಸಲಾತಿಯ ಕಾರ್ಯಚಟುವಟಿಕೆಗಳನ್ನು ಶೀಘ್ರವೇ ತಡೆ ಹಿಡಿಯಬೇಕು. ಹೊಸ ಜಾತಿ ಪ್ರಮಾಣ ಪತ್ರ ವಿತಸುವುದನ್ನು ತುರ್ತಾಗಿ ನಿಲ್ಲಿಸಿ ಹಳೆ ಜಾತಿ ಪ್ರಮಾಣ ಪತ್ರವನ್ನೆ ಮುಂದುವರೆಸಬೇಕು. ಒಳ ಮಿಸಲಾತಿಯ ಗೊಂದಲಗಳನ್ನು ಹಾಗೂ ನ್ಯೂನ್ಯತೆಗಳನ್ನು ಪರಿಹರಿಸುವ ತನಕ ಹಳೆ ಮೀಸಲಾತಿ ಆನ್ವಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕುʼ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾರದರ್ಶಕವಾಗಿ ನಡೆಸಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಸುರೇಶ ಮೊರೆ, ದೀಪಕ ಗಾಯಕವಾಡ್, ಪ್ರಕಾಶ ಸುಂಠಾಣೆ, ಸಂಜು ಗಾಯಕವಾಡ್, ಚೇತನ್ ಕಾಡೆ, ಶಂಕರ್ ಫುಲೆ, ದೇವಾನಂದ್ ತೊಳೆ, ಸಂದೀಪ್ ಮುಕಿಂದೆ, ಅರುಣ್ ಗಾಯಕವಾಡ್, ಕವಿರಾಜ ದೇವಕರ್, ರಾಹುಲ್ ದಲಾಲೆ, ಮಂಜು ಸಿಂಧೆ, ವಿಲಾಸ ನಾಟೇಕರ್, ರಾಜು ಸೂರ್ಯವಂಶಿ, ಮಿಲಿಂದ ಸಾಗರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ವರದಿ ಮಾಹಿತಿ : ಸಿಟಿಜನ್ ಜರ್ನಲಿಸ್ಟ್ ಆದಿತ್ಯ ಗಾಜರೆ





