ಸಂತ ಸೇವಾಲಾಲ್ ಮಾಹಾರಾಜರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ದಿಕ್ಕು ತೋರಿಸುವ ದೀಪವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ ಸಂತ ಸೇವಾಲಾಲ್ ಅವರ 287ನೇ ಜಯಂತ್ಯೋತ್ಸವ ಅಂಗವಾಗಿ ಸಂತ ಸೇವಾಲಾಲ್ ಮಹಾರಾಜ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ʼಅನ್ಯಾಯ, ಅಂಧಶ್ರದ್ಧೆ ವಿರುದ್ಧ ಹೋರಾಡಿ ಸಮಾನತೆ, ಶಿಕ್ಷಣ ಹಾಗೂ ಆತ್ಮಗೌರವದ ಸಂದೇಶ ನೀಡಿದ ಸಂತ ಸೇವಾಲಾಲ್ ಮಹಾರಾಜರ ಆದರ್ಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಸಂತ ಸೇವಾಲಾಲ್ ಮಹಾರಾಜರು ಮಹಾನ್ ಪವಾಡ ಪುರುಷರಾಗಿದ್ದರು, ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಮೂಢನಂಬಿಕೆ, ಕೆಟ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿದರು ಮತ್ತು ಜನರಿಗೆ ತಿಳಿವಳಿಕೆ ಮೂಡಿಸಿದರುʼ ಎಂದರು.
ಸಮಾಜದ ಐಕ್ಯತೆ ಮತ್ತು ಸಹಬಾಳ್ವೆಗೆ ಪ್ರೇರೇಪಿಸಿದರು. ಬ್ರಿಟಿಷರು ತೆರಿಗೆ ಹೆಚ್ಚಳ ಮಾಡಿದಾಗ ವೀರ ಸೇನಾನಿಯಾಗಿ ಹೋರಾಡಿದರು. ಯಾವುದೇ ಮಹಾನ ಪುರುಷರು ಒಂದೇ ಜಾತಿಗೆ ಸಿಮಿತವಿಲ್ಲ. ಅವರು ಮಾನವ ಕುಲಕ್ಕೆ ಸುಧಾರಣೆಗೆ ಪ್ರಯತ್ನಿಸಿದವರುʼ ಎಂದು ತಿಳಿಸಿದರು.
ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸೇರಿದಂತೆ ಜಿಲ್ಲಾ ಬಂಜಾರಾ ಸಮಾಜದ ಅಧ್ಯಕ್ಷ ಗೋವರ್ಧನ ರಾಠೋಡ, ಮುಖಂಡರಾದ ಬಸವರಾಜ ಪವಾರ, ಮಾಣಿಕರಾವ ಪವಾರ, ವೀರಶೆಟ್ಟಿ ರಾಠೋಡ, ಗೋಪಾಲಸಿಂಗ ರಾಠೋಡ, ಕೀಶನರಾವ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಾಜಕ್ಕೆ ಶಾಂತಿಯ ಸಂದೇಶ ಸಾರಿದ ಸಂತ ಸೇವಾಲಾಲ್ : ಸಚಿವ ರಹೀಂ ಖಾನ್
ಸಂತ ಸೇವಾಲಾಲ್ ಮಹಾರಾಜರು ಇಡೀ ಸಮಾಜಕ್ಕೆ ಒಳಿತನ್ನು ಬಯಸಿ ಶಾಂತಿಯ ಸಂದೇಶ ಸಾರಿದವರು. ಅವರು ಮಾನವ ಕುಲಕ್ಕೆ ಸುಧಾರಣೆಗೆ ಪ್ರಯತ್ನಿಸಿದವರು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಅವರ 287ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ʼಸಂತ ಸೇವಾಲಾಲ್ ಅವರಂತಹ ದಾರ್ಶನಿಕರು ಒಂದು ಜಾತಿಗೆ ಸೀಮಿತರಲ್ಲ. ಅವರು ಬಂಜಾರ ಸಮಾಜ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ಬಹಳಷ್ಟು ಉತ್ತಮ ಸಂದೇಶ ನೀಡಿದ್ದಾರೆ. ಅವರ ತತ್ವಾದರ್ಶ, ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಶಿಕ್ಷಿತರಾದರೆ ಮಾತ್ರ ಸಮಾಜ ಏಳಗೆಯಾಗಲು ಸಾಧ್ಯ. ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕುʼ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮರಖಲ್ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಬಳವಂತರಾವ್ ರಾಥೋಡ್ ಅವರು ಸಂತ ಸೇವಾಲಾಲ್ ಮಹಾರಾಜರ ಕುರಿತು ಅತಿಥಿ ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಸಂತ ಸೇವಲಾಲ್ ಮಾಹಾರಾಜ ಅವರ ಭಾವಚಿತ್ರ ಮೆರವಣಿಗೆಯು ನಗರದ ಛತ್ರಪತಿ ಶಿವಾಜಿ ವೃತ್ತ, ಭಗತಸಿಂಗ್ ವೃತ್ತ, ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ ವೃತ್ತ, ಜನರಲ್ ಕರಿಯಪ್ಪ ವೃತ್ತದಿಂದ ಮಾರ್ಗವಾಗಿ ರಂಗಮಂದಿರ ನಡೆಯಿತು.
ಇದನ್ನೂ ಓದಿ : ಔರಾದ್ | ಸಮಾನತೆ ಸಂದೇಶ ಸಾರಿದ ಸಂತ ಸೇವಾಲಾಲ್ : ಶಾಸಕ ಪ್ರಭು ಚವ್ಹಾಣ
ಬೀದರ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾ ಬಂಜಾರಾ ಸಮಾಜದ ಅಧ್ಯಕ್ಷ ಗೋವರ್ಧನ ರಾಠೋಡ, ಮುಖಂಡರಾದ ಬಸವರಾಜ ಪವಾರ, ಮಾಣಿಕರಾವ ಪವಾರ, ವೀರಶೆಟ್ಟಿ ರಾಠೋಡ, ಗೋಪಾಲಸಿಂಗ ರಾಠೋಡ, ಕೀಶನರಾವ ರಾಠೋಡ ಸೇರಿದಮತೆ ಇತರರು ಉಪಸ್ಥಿತರಿದ್ದರು.





