ಬೀದರ್ ಜಿಲ್ಲೆಯಲ್ಲಿನ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕವಾಗಿ, ಶಿಸ್ತುಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ʼಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯಲಿರುವ ಪರೀಕ್ಷೆಗಾಗಿ ಜಿಲ್ಲೆಯಾದ್ಯಂತ 199 ಕಾಲೇಜುಗಳಲ್ಲಿ ಒಟ್ಟು 36 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆʼ ಎಂದು ಮಾಹಿತಿ ನೀಡಿದರು.
ಬೀದರ (15), ಭಾಲ್ಕಿ (5), ಔರಾದ್(ಬಿ) (3), ಹುಮನಾಬಾದ್ (8), ಬಸವಕಲ್ಯಾಣ (5) ಪರೀಕ್ಷಾ ಕೇಂದ್ರಗಳಿವೆ. ಜಿಲ್ಲೆಯಲ್ಲಿ ಒಟ್ಟು 21,856 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪ್ರವೇಶ ಪತ್ರಗಳನ್ನು ಆನ್‌ಲೈನ್ ಮೂಲಕ ಕಾಲೇಜುಗಳಿಗೆ ವಿತರಿಸಲಾಗಿದೆʼ ಎಂದು ಅವರು ತಿಳಿಸಿದರು.
ʼಪ್ರತಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನಿಯಮಾನುಸಾರ ಪರೀಕ್ಷೆ ನಡೆಸಬೇಕು. ವಿಶೇಷವಾಗಿ ಸೂಕ್ಷ್ಮ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಇರಬೇಕು. ವಿದ್ಯಾರ್ಥಿಗಳಿಗೆ ಸಮರ್ಪಕ ಆಸನ ವ್ಯವಸ್ಥೆ ಕಲ್ಪಿಸಬೇಕು. ನಕಲು ಅಥವಾ ಸಾಮೂಹಿಕ ನಕಲು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝೆರಾಕ್ಸ್, ಕಂಪ್ಯೂಟರ್ ಹಾಗೂ ಸೈಬರ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಿಸುವಂತೆ ಕ್ರಮ ಕೈಗೊಳ್ಳಲಾಗುವುದುʼ ಎಂದರು.
ಮಾರ್ಗಸೂಚಿಯಂತೆ ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ಮತ್ತು ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಫೋನ್, ಪೆನ್‌ಡ್ರೈವ್, ಇಯರ್‌ಫೋನ್, ಮೈಕ್ರೋಫೋನ್, ಬ್ಲೂಟೂತ್ ಸಾಧನಗಳು ಹಾಗೂ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಲು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಮೊಬೈಲ್ ಬಳಕೆ ಮತ್ತು ಛಾಯಾಚಿತ್ರ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅವರು ಸೂಚಿಸಿದರು.
ʼಪರೀಕ್ಷೆ ಪಾರದರ್ಶಕವಾಗಿ ನಡೆಯಲು ಮುಖ್ಯ ಅಧೀಕ್ಷಕರು ಕೊಠಡಿ ಮೇಲ್ವಿಚಾರಕರೊಂದಿಗೆ ಮುಂಚಿತ ಸಭೆ ನಡೆಸಿ ನಿಯಮಗಳನ್ನು ತಿಳಿಸಬೇಕು. ಸುಸೂತ್ರ ಪರೀಕ್ಷೆಗೆ ಪೊಲೀಸ್ ಇಲಾಖೆ ಹಾಗೂ ಖಜಾನೆ ಇಲಾಖೆಯ ಸಹಕಾರ ಪಡೆಯಲಾಗಿದೆ. ಪರೀಕ್ಷಾ ಕೇಂದ್ರಗಳ ಹೊರಭಾಗದಲ್ಲಿ ಅನಾವಶ್ಯಕ ಜನಸಂದಣಿ ಆಗದಂತೆ ಪೊಲೀಸ್ ಇಲಾಖೆ ನಿಗಾ ವಹಿಸಲಿದೆ. ಯಾವುದೇ ದೂರುಗಳಿದ್ದಲ್ಲಿ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಕುರಿ, ಮೇಕೆ ಘಟಕ ಸ್ಥಾಪನೆ ಯೋಜನೆಗೆ ಅರ್ಜಿ ಆಹ್ವಾನ
ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಹಾಬಾದಕರ್, ಪೊಲೀಸ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತು ಮಾರ್ಗಾಧಿಕಾರಿಗಳು ಉಪಸ್ಥಿತರಿದ್ದರು.





