ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ʼಡಾ.ಬಿ.ಆರ್.ಅಂಬೇಡ್ಕರ್ ಅವರ ಭಾರತದ ಪ್ರಸ್ತುತ ಸವಾಲುಗಳು, ಚಿಂತನೆಗಳು ಮತ್ತು ಸಮಕಾಲೀನ ಪರಿಹಾರಗಳುʼ ಎಂಬ ವಿಷಯದ ಕುರಿತು ಮಾರ್ಚ್ 14 ಹಾಗೂ 15ರಂದು ಆಯೋಜಿಸಲು ಉದ್ದೇಶಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಬೀದರನ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ ಎಸ್.ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.14ರಂದು ಬೆಳಿಗ್ಗೆ 9.30 ಗಂಟೆಗೆ ಬೀದರ ನಗರದ ಬೆಲ್ದಾಳೆ ಕನ್ವೇನ್ಸನ್ ಹಾಲ್‌ನಲ್ಲಿ ಮತ್ತು ಮಾರ್ಚ್15 ರಂದು ಬೆಳಿಗ್ಗೆ 10:30ಕ್ಕೆ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲು ಆಹ್ವಾನ ಪತ್ರಿಕೆ ಮುದ್ರಿಸಲಾಗಿತ್ತು. ವಿಚಾರ ಸಂಕಿರಣಕ್ಕೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಚಿವ ರಹೀಂ ಖಾನ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ ಸೇರಿದಂತೆ ಹಲವು ಚಿಂತಕರನ್ನು ಎರಡು ದಿನಗಳ ಕಾಲ ನಡೆಯುವ ವಿವಿಧ ಗೋಷ್ಠಿಗಳಿಗೆ ಆಹ್ವಾನಿಸಲಾಗಿತ್ತು.
ಈ ವಿಚಾರ ಸಂಕಿರಣ ಆಯೋಜನೆ ಕುರಿತು ಫೆಬ್ರವರಿ 16ರಂದು ಬೀದರ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವ ಈಶ್ವರ ಖಂಡ್ರೆ ನೇತ್ರತ್ವದಲ್ಲಿ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಾಮಾಜಿಕ ಚಿಂತಕರು, ವಿವಿಧ ಸಮುದಾಯಗಳು ಪ್ರಮುಖರು ಭಾಗವಹಿಸಿ ಕಾರ್ಯಕ್ರಮಕ್ಕೆ ಸಲಹೆ ಸೂಚನೆಗಳನ್ನು ನೀಡಿದಲ್ಲದೆ, ರಾಷ್ಟ್ರದ ಹೆಸರಾಂತ ಚಿಂತಕರನ್ನು ಆಹ್ವಾನಿಸುವುದು, ಎಲ್ಲೆಡೆ ವ್ಯಾಪಕ ಪ್ರಚಾರ ಕೈಗೊಂಡು ಅರ್ಥಪೂರ್ಣವಾಗಿ ನಡೆಸಬೇಕೆಂಬ ಅಭಿಪ್ರಾಯಗಳು ತಿಳಿಸಿದರು.
ಹೆಚ್ಚಿನ ಪ್ರಚಾರ ಕಾರ್ಯ ಕೈಗೊಳ್ಳದೆ ದಿಢೀರವಾಗಿ ಮಾ.14,15ರಂದು ಆಯೋಜಿಸಲು ಉದ್ದೇಶಿಸಿರುವ ಅಂಬೇಡ್ಕರ್ ಅವರ ವಿಚಾರ ಸಂಕಿರಣಕ್ಕೆ ಅನೇಕರು ತೀವ್ರವಾಗಿ ವಿರೋಧಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಕಾರ್ಯಕ್ರಮ ಮುಂದೂಡುವ ಬಗ್ಗೆ ಪತ್ರಿಕಾಗೋಷ್ಠಿ, ಮನವಿ ಪತ್ರಗಳ ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಕೊನೆಗೂ ಎಚ್ಚೆತು ವಿಚಾರ ಸಂಕಿರಣ ಕಾರ್ಯಕ್ರಮ ಮುಂದೂಡಿದೆ.
ʼಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು, ವಿಚಾರಧಾರೆ ಸಾರ್ವಕಾಲಿಕವಾಗಿದ್ದು, ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಡೆಯುವ ಚಿಂತನೆ ಮಂಥನದಿಂದ ಇಡೀ ಸಮಾಜಕ್ಕೆ ಬೆಳಕು ಮೂಡುವಂತಿರಬೇಕು. ಡಾ.ಅಂಬೇಡ್ಕರ್ ಅವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ದೇಶದ ಕೆಲ ತಜ್ಷರನ್ನು ಆಹ್ವಾನಿಸಿ, ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಆಚರಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿರುತ್ತದೆ ಎಂಬ ನಿಟ್ಟಿನಲ್ಲಿ ಪ್ರಸ್ತುತ ನಿಗದಿಪಡಿಸಿರುವ ಕಾರ್ಯಕ್ರಮವನ್ನು ಕಾರಣಾಂತರದಿಂದ ಮುಂದೂಡಲಾಗಿದೆʼ ಎಂದು ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ವಿಚಾರ ಸಂಕಿರಣ ಬಗ್ಗೆ ಯಾರು ಏನು ಹೇಳುತ್ತಾರೆ?
ಅಂಬೇಡ್ಕರ್ ಅಂತರಾಷ್ಟ್ರೀಯ ಸಮ್ಮೇಳನ ಅನುದಾನ ದುರ್ಬಳಕೆ ಆರೋಪ: ಭಂತೆ ಧಮ್ಮನಾಗ
ಬೀದರ ನಗರದಲ್ಲಿ ಮಾರ್ಚ್ 14 ಮತ್ತು 15 ರಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲು ಉದ್ದೇಶಿಸಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಮಕಾಲೀನ ಪರಿಹಾರಗಳು ಕುರಿತ ಅಂತರಾಷ್ಟ್ರೀಯ ಸಮ್ಮೇಳನಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ ರೂ. 70 ಲಕ್ಷ ಅನುದಾನವನ್ನು ದುರ್ಬಳಕೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದ ಕರ್ನಾಟಕ ಶರಣ್ ಬಹುದೇಶಿಯ ಸೇವಾಭಾವಿ ಸಂಸ್ಥೆಯ ಅಧ್ಯಕ್ಷ ಹಾಗೂ ಅಂತರಾಷ್ಟ್ರೀಯ ಬೌದ್ಧ ಭಿಕ್ಕು ಸಂಘದ ಉಪಾಧ್ಯಕ್ಷ ಭಂತೆ ಧಮ್ಮನಾಗ ಹಾಗೂ ಬೌದ್ಧ ಭಿಕ್ಕುಗಳು ಮಂಗಳವಾರ ಬೀದರ್‌ನಲ್ಲಿ ಮಾ.10ರಂದು ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದರು.
ಬೀದರ ನಗರದಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಕುರಿತು ಅಂತರಾಷ್ಟ್ರೀಯ ಸಮ್ಮೇಳನ ನಡೆಸುವ ಕುರಿತು 2023ರಿಂದಲೇ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇನೆ. ಅದರ ಭಾಗವಾಗಿ ಸರ್ಕಾರವು ಅಂಬೇಡ್ಕರ್ ಸಂಶೋಧನಾ ಕೇಂದ್ರದ ಮೂಲಕ ಕಳೆದ 2025ರ ಸೆಪ್ಟೆಂಬರ್ ತಿಂಗಳಲ್ಲಿ ₹70 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಆದರೆ ಸಮ್ಮೇಳನದ ಕುರಿತು ನನಗೆ, ಅಂಬೇಡ್ಕರವಾದಿ ಸಂಘಟನೆಗಳಿಗೆ ಯಾವುದೇ ಮಾಹಿತಿ ನೀಡದೆ, ಪೂರ್ವಭಾವಿ ಸಭೆ ನಡೆಸದೆ, ಸಮ್ಮೇಳನದ ಯಶಸ್ಸಿಗಾಗಿ ಇ–ಟೆಂಡರ್ ಪ್ರಕ್ರಿಯೆ ಕೈಗೊಳ್ಳದೆ, ಸಮಿತಿ ಹಾಗೂ ಉಪಸಮಿತಿಗಳನ್ನು ರಚನೆ ಮಾಡದೆ ಕೇವಲ ನಾಲ್ಕು ದಿನಗಳೊಳಗೆ ಅಂತರಾಷ್ಟ್ರೀಯ ಸಮ್ಮೇಳನ ನಡೆಸಲು ಅಧಿಕಾರಿಗಳು ಮುಂದಾಗಿರುವುದು ಅನುಮಾನ ಹುಟ್ಟಿಸಿದೆʼ ಎಂದು ಹೇಳಿದರು.

ಉದ್ದೇಶಿಸಿರುವ ಈ ಸಮ್ಮೇಳನವನ್ನು ಕನಿಷ್ಠ ಎರಡು ತಿಂಗಳು ಮುಂದೂಡಬೇಕು. ಅಂತರಾಷ್ಟ್ರೀಯ ಮಟ್ಟದ ಅತಿಥಿಗಳನ್ನು ಬೀದರಕ್ಕೆ ಆಹ್ವಾನಿಸಿ ಬಾಬಾ ಸಾಹೇಬರ ವಿಚಾರಧಾರೆಗಳನ್ನು ವಿಶ್ವಮಟ್ಟದಲ್ಲಿ ಪ್ರಚಾರ ಮಾಡುವ ಪ್ರಯತ್ನ ಮಾಡಬೇಕು. ಈ ಸಂಬಂಧ ಈಗಾಗಲೇ ಜಪಾನ್, ಜರ್ಮನಿ, ಸೌತ್ ಆಫ್ರಿಕಾ, ಲಂಡನ್ ಹಾಗೂ ರಷ್ಯಾ ದೇಶಗಳ ಅತಿಥಿಗಳಿಗೆ ಆಹ್ವಾನ ನೀಡಿದ್ದೇನೆ ಎಂದು ಭಂತೆ ಧಮ್ಮನಾಗ ತಿಳಿಸಿದರು.
ಇದುವರೆಗೆ ಆಮಂತ್ರಣ ಪತ್ರಿಕೆ, ಕಟೌಟ್‌ಗಳು, ಬ್ಯಾನರ್‌ಗಳು ಅಥವಾ ಪ್ರಚಾರ ಕಾರ್ಯ ನಡೆಸದೇ ಸಮ್ಮೇಳನದ ಆಶಯವನ್ನು ಹಾಳು ಮಾಡುವ ಕೆಲಸ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ. ಅವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಸಮಾಜದ ಮುಖಂಡರು ಕೂಡ ಮೌನವಾಗಿರದೆ ಹೋರಾಟಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಅತಿಥಿಗಳ ಆಹ್ವಾನ, ವಸತಿ ವ್ಯವಸ್ಥೆ, ಗೌರವಧನ ಹಾಗೂ ಪ್ರಯಾಣದರ ಸೇರಿದಂತೆ ಹಲವು ಸೇವೆಗಳಿಗಾಗಿ ಇ–ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಲ್ಲ ಎಂಬ ಅನುಮಾನವಿದೆ. ಪ್ರಶಸ್ತಿಗಳು ಒಂದೇ ಕಂಪನಿಗೆ ಅಥವಾ ಕೆಲವರ ಕೈಗೆ ಹೋಗುವ ಸಾಧ್ಯತೆಯೂ ಇದೆʼ ಎಂದು ಅವರು ಆರೋಪಿಸಿದರು.
ಕಾಟಾಚಾರದ ಸಮ್ಮೇಳನ ನಡೆಸಿ ಅನುದಾನ ದುರ್ಬಳಕೆ ಮಾಡುವ ಬದಲು ಸಮಾಜದ ಸಂಘಟನೆಗಳನ್ನು ಪರಿಗಣಿಸಿ ಪಾರದರ್ಶಕವಾಗಿ ಕಾರ್ಯಕ್ರಮ ನಡೆಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಸಮಾಜ ಕಲ್ಯಾಣ ಇಲಾಖೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಅದಕ್ಕೂ ಬಗ್ಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ಅಂತರರಾಷ್ಟ್ರೀಯ ಸಮ್ಮೇಳನ ಕುರಿತು ಏಕಪಕ್ಷೀಯ ನಿರ್ಧಾರಕ್ಕೆ ಬಿಎಸ್ಪಿ ಖಂಡನೆ
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳ ಕುರಿತು ನಡೆಸಲು ಉದ್ದೇಶಿಸಿರುವ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದನ್ನು ಬಹುಜನ ಸಮಾಜ ಪಕ್ಷದ (ಬಿ.ಎಸ್.ಪಿ) ಜಿಲ್ಲಾಧ್ಯಕ್ಷ ಕಪಿಲ ಗೋಡಬೋಲೆ ತೀವ್ರವಾಗಿ ಖಂಡಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನ ಸಂಬಂಧ ಫೆಬ್ರವರಿ 16, 2026 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆದಿತ್ತು. ಸಭೆಯಲ್ಲಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ಜಿಲ್ಲೆಯ ದಲಿತ ಮುಖಂಡರು, ಚಿಂತಕರು, ಸಮಾಜ ಸೇವಕರನ್ನು ಒಳಗೊಂಡ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಲಾಗಿತ್ತು. ಅಲ್ಲದೆ ಸಮ್ಮೇಳನವನ್ನು ಬೀದರ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಸುವ ಕುರಿತು ಚರ್ಚೆ ನಡೆದಿತ್ತು.

ಆದರೆ ಇದೀಗ ಮತ್ತೊಂದು ಸಭೆ ನಡೆಸದೇ ಹಾಗೂ ಸಾರ್ವಜನಿಕರ ಗಮನಕ್ಕೂ ತರದೇ ಮಾರ್ಚ್ 14 ಮತ್ತು 15 ರಂದು ಎರಡು ದಿನಗಳ ಕಾಲ ಚೆನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ನಡೆಯುವಂತಹ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನದ ವಿಷಯದಲ್ಲಿ ಈ ರೀತಿಯ ತುರ್ತು ಹಾಗೂ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲʼ ಎಂದಿದ್ದಾರೆ.
ದಲಿತ ಸಮುದಾಯ ಹಾಗೂ ಅಂಬೇಡ್ಕರ್ ವಿಚಾರಗಳ ಕುರಿತು ಜಿಲ್ಲೆಯಲ್ಲಿ ಹಲವಾರು ಬಾರಿ ಇದೇ ರೀತಿಯ ಏಕಪಕ್ಷೀಯ ನಿರ್ಧಾರಗಳು ತೆಗೆದುಕೊಳ್ಳುತ್ತಿರುವುದು ದುರದೃಷ್ಟಕರ. ಅಂಬೇಡ್ಕರ್ ಅವರ ವಿಚಾರಗಳನ್ನು ರಾಜ್ಯ, ದೇಶ ಹಾಗೂ ವಿಶ್ವ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಬೃಹತ್ ಮಟ್ಟದಲ್ಲಿ ಹಾಗೂ ಬಹಿರಂಗವಾಗಿ ಸಮ್ಮೇಳನವನ್ನು ನಡೆಸಬೇಕು. ಅದಕ್ಕಾಗಿ ಶೀಘ್ರದಲ್ಲೇ ಜಿಲ್ಲೆಯ ದಲಿತ ಮುಖಂಡರು, ಚಿಂತಕರು, ಬುದ್ಧಿಜೀವಿಗಳು ಮತ್ತು ಸಮಾಜಸೇವಕರ ಸಮ್ಮುಖದಲ್ಲಿ ಮತ್ತೊಂದು ಸಭೆ ಕರೆದು ಸಮ್ಮೇಳನದ ಕುರಿತು ಸಮಗ್ರ ತೀರ್ಮಾನ ಕೈಗೊಳ್ಳಬೇಕೆಂದು ಬಿ.ಎಸ್.ಪಿ ಪಕ್ಷ ಆಗ್ರಹಿಸಿದೆ.
ಬಿಎಸ್ಪಿ ಪಕ್ಷದ ಪ್ರಮುಖರಾದ ಜ್ಞಾನೇಶ್ವರ ಸಿಂಗಾರೆ, ಅಶೋಕ ಮಂಠಾಳ್ಕರ್, ಶಕ್ತಿಕಾಂತ ಭಾವಿದೊಡ್ಡಿ, ರಾಜಕುಮಾರ ಮೂಲಭಾರತಿ, ಸುರೇಶ ಜೋಜನಾಕರ್, ಅಂಬಾದಾಸ್ ಚಕ್ರವರ್ತಿ, ಮಹೇಶ್ ಭೋಲಾ, ಜಾಫರ್ ಖುರೇಷಿ , ಮಲ್ಲಿಕಾರ್ಜುನ ಕೆ., ಭಾರತ ಭಾಗೆಕರ್, ಸಚಿನ್ ಗಿರಿ, ಶಂಕರ ಫುಲೆ, ನಿಲೇಶ ಮೇಲಕೇರಿ ಅವರು ಪ್ರಕಟಣೆಯಲ್ಲಿ ಬುಧವಾರ ತಿಳಿಸಿದ್ದಾರೆ.
ಅಂಬೇಡ್ಕರ್ ವಿಚಾರಧಾರೆ ಸಮ್ಮೇಳನ ಮುಂದೂಡಿಕೆ; ಮೇ 1ರಂದು ಆಯೋಜಿಸಿ :
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ಮಾರ್ಚ್ 14 ಮತ್ತು 15ರಂದು ಬೀದರ್‌ನಲ್ಲಿ ಆಯೋಜಿಸಲು ಉದ್ದೇಶಿಸಿರುವ ರಾಷ್ಷ್ರೀಯ ಸಮ್ಮೇಳನವನ್ನು ಮುಂದೂಡಿ, ಕಾರ್ಮಿಕ ದಿನಾಚರಣೆ ದಿನವಾದ ಮೇ 1ರಂದು ಸಾರ್ವಜನಿಕರ ಭಾಗವಹಿಸುವಿಕೆಯಿಂದ ಭವ್ಯವಾಗಿ ನಡೆಸುವಂತೆ ದಲಿತ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.

ಈ ಕುರಿತು ಪ್ರಮುಖರು ಬುಧವಾರ ಜಿಲ್ಲಾಧಿಕಾರಿಗಳ ಹೆಸರಿಗೆ ಬರೆದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ,ಕರಾಳೆ ಅವರಿಗೆ ಸಲ್ಲಿಸಿದ ಅವರು, ʼಸಮ್ಮೇಳನದ ಕುರಿತು ಜಿಲ್ಲಾದ್ಯಂತ ಸಮರ್ಪಕವಾದ ಸಾರ್ವಜನಿಕ ಜಾಹೀರಾತು ನೀಡಲಾಗಿಲ್ಲ ಹಾಗೂ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲು ಅಗತ್ಯವಾದ ಸಿದ್ಧತೆಗಳಿಗೆ ಸಮಯ ದೊರೆತಿಲ್ಲʼ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಮುಂದೂಡಿ ಬೀದರ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿ, ರಾಷ್ಟ್ರೀಯ ಮಟ್ಟದ ಅಂಬೇಡ್ಕರೈಟ್ ಚಿಂತಕರು ಮತ್ತು ವಕ್ತಾರರನ್ನು ಆಹ್ವಾನಿಸುವಂತೆ ಮನವಿ ಮಾಡಲಾಗಿದೆ. ಪ್ರಮುಖ ವಕ್ತಾರರಾಗಿ ಡಾ.ಸೂರಜ್ ಎಂಗಡೆ ಅವರನ್ನು ಆಹ್ವಾನಿಸುವಂತೆ ಪ್ರಮುಖರಾದ ವಿನೋದ್ ರತ್ನಾಕರ್, ಪ್ರಕಾಶ್ ರಾವಣ, ವಿನೀತ್ ಗಿರಿ, ರಾಹುಲ್ ಡಾಂಗೆ, ರಮೇಶ್ ಪಾಸ್ವಾನ್ ಹಾಗೂ ಸುಭಾಷ್ ಲಾಧಾ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಸಾಮಾಜಿಕ ಹೋರಾಟಗಾರ ಗಗನ್ ಫುಲೆ ಅವರು ತಮ್ಮ ಫೆಸ್‌ಬುಕ್‌ನಲ್ಲಿ ʼರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಅಂತೆ, ಇದು ಜಿಲ್ಲಾ ವಿಚಾರ ಸಂಕಿರಣ ಅಂತ ಬದಲಾವಣೆ ಮಾಡಿ, ಈ ಬೀದರ್ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಏನಾಗಿದೆ, ಬೀದರ್ ಜಿಲ್ಲೆ ಬಿಟ್ಟು ತೊಲಗು. ಇದಕ್ಕೆ ನಮ್ಮ ತೆರಿಗೆ ಹಣ ₹70 ಲಕ್ಷ ಖರ್ಚು ಮಾಡಬೇಕಾ?ʼ ಎಂದು ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಕೆಲವರು ʼರಾಷ್ಟ್ರೀಯ ವಿಚಾರ ಸಂಕಿರಣ ಇದಾ? ಇಲ್ಲಿ ಬಿಡಿ, ಗ್ರಾಮೀಣ ಸಂಕಿರಣಕ್ಕಿಂತಲೂ ಕಡೆ ಮಾಡಿದ್ದಿರಿ.ಕೂಡಲೇ ರದ್ದು ಮಾಡಿ ರಾಷ್ಟ್ರ ಮಟ್ಟದಲ್ಲಿ ಅಂಬೇಡ್ಕರ್ ಬಗ್ಗೆ ಆಳವಾಗಿ ಅರಿತವರನ್ನು ಕರೆಯಿಸಿ ಕಾರ್ಯಕ್ರಮ ಮಾಡಿʼ ಎಂಬ ಆಗ್ರಹದ ಕಾಮೆಂಟ್ ಬಂದಿವೆ.
ಸಮ್ಮೇಳನ ಮುಂದೂಡದಿದ್ದರೆ ಕಪ್ಪುಪಟ್ಟಿ ಪ್ರದರ್ಶಿಸಿ ಘೇರಾವ್: ದಲಿತ ಯುನಿಟಿ ಮೂಮೆಂಟ್
ಮಾರ್ಚ್ 14 ಮತ್ತು 15ರಂದು ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ಬೀದರ್ ನಗರದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಹಾಗೂ ವಿಚಾರ ಸಂಕಿರಣವನ್ನು ಒಂದೇ ವೇಳೆ ಎರಡು ಕಡೆ ಆಯೋಜಿಸಲು ನಿರ್ಧರಿಸಿರುವುದು ಅಂಬೇಡ್ಕರ್‌ವಾದಿಗಳಿಗೆ ಮಾಡುವ ದಿಶಾಭೋಲ್ ಎಂದು ದಲಿತ ಯುನಿಟಿ ಮೂಮೆಂಟ್ ಮುಖಂಡ ಪ್ರಕಾಶ ರಾವಣ ಆಕ್ಷೇಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼಸಮ್ಮೇಳನಕ್ಕೆ ಆಮಂತ್ರಣ ಪತ್ರಿಕೆ ಮಾಡಲಾಗಿದೆ. ಆದರೆ, ಅದರಲ್ಲಿ ಅಂಬೇಡ್ಕರ್‌ವಾದಿ ಚಿಂತಕರು ಮತ್ತು ಉಪನ್ಯಾಸಕರ ಹೆಸರುಗಳನ್ನು ಸೇರಿಸಲಾಗಿಲ್ಲ. ಈ ವಿಷಯದಲ್ಲಿಯೂ ಜಾತಿಯ ಆಧಾರದ ಮೇಲೆ ನಡೆದುಕೊಳ್ಳಲಾಗಿದೆ. ಸಮ್ಮೇಳನವನ್ನು ಮುಂದೂಡದಿದ್ದರೆ ಕಾರ್ಯಕ್ರಮಕ್ಕೆ ಆಗಮಿಸುವ ಜನಪ್ರತಿನಿಧಿಗಳಿಗೆ ಕಪ್ಪುಪಟ್ಟಿ ಪ್ರದರ್ಶಿಸಲಾಗುವುದುʼ ಎಂದು ಎಚ್ಚರಿಸಿದರು.

ಮುಖಂಡ ವಿನೀತ್ ಗಿರಿ ಮಾತನಾಡಿ, ʼಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಮ್ಮೇಳನ ಹೆಸರಿನಲ್ಲಿ ಅನುದಾನ ದುರ್ಬಳಕೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಯಾವುದೇ ಪೂರ್ವ ತಯಾರಿಯಿಲ್ಲದೆ ಎರಡು ಕಡೆ ಸಮ್ಮೇಳನ ಆಯೋಜಿಸಿ ₹70 ಲಕ್ಷ ಅನುದಾನ ಲೂಟಿ ಹೊಡೆಯುವ ತಂತ್ರ ಇದರಲ್ಲಿ ಅಡಗಿದೆ’ ಎಂದು ಹೇಳಿದರು.
‘ಜನಪ್ರತಿನಿಧಿಗಳು ತಮ್ಮ ಜನ್ಮದಿನಗಳಿಗೆ ನಗರಾದ್ಯಂತ ಕಟೌಟ್ ಮತ್ತು ಬ್ಯಾನರ್‌ಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಡಾ. ಬಾಬಾಸಾಹೇಬರ ವಿಚಾರಧಾರೆಗಳ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಒಂದೇ ಒಂದು ಕಟೌಟ್ ಅಥವಾ ಬ್ಯಾನರ್ ಕೂಡ ಹಾಕಿಲ್ಲ. ಯಾರಿಗೂ ಸಮರ್ಪಕ ಆಹ್ವಾನ ನೀಡಿಲ್ಲ. ರಂಗಮಂದಿರದಲ್ಲಿ ಮಾಡಲು ಇದು ಚಿಕ್ಕ ಕಾರ್ಯಕ್ರಮವೇ’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಬೀದರ್ | ಗಾಂಜಾ ಸಾಗಾಟ : ₹19.77 ಲಕ್ಷ ಮೌಲ್ಯದ ಸ್ವತ್ತು ಜಪ್ತಿ; ಹೊರ ರಾಜ್ಯದ 2 ಬಂಧನ
ಕಾರ್ಯಕ್ರಮವನ್ನು ಕನಿಷ್ಠ ಎರಡು ತಿಂಗಳು ಮುಂದೂಡಬೇಕು. ಅಂತರಾಷ್ಟ್ರೀಯ ಮಟ್ಟದ ಉಪನ್ಯಾಸಕರನ್ನು ಆಹ್ವಾನಿಸಿ ಸಮ್ಮೇಳನವನ್ನು ಭವ್ಯವಾಗಿ ನಡೆಸಬೇಕು. ಇಲ್ಲವಾದರೆ ಕಾರ್ಯಕ್ರಮಕ್ಕೆ ಆಗಮಿಸುವ ಜನಪ್ರತಿನಿಧಿಗಳಿಗೆ ಘೇರಾವ್ ಹಾಕಲಾಗುವುದು ಎಂದು ದಲಿತ ಯುನಿಟಿ ಮೂಮೆಂಟ್ ಮುಖಂಡರಾದ ರಾಹುಲ್ ಡಾಂಗೆ, ರಮೇಶ್ ಪಾಸ್ವಾನ್ ಎಚ್ಚರಿಕೆ ನೀಡಿದರು.





