ಕ್ರೀಡೆಗಳು ಮಾನಸಿಕ ಒತ್ತಡ ನಿವಾರಿಸಿ ಏಕಾಗೃತೆ, ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗಿವೆ ಎಂದು ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಸೂರ್ಯವಂಶಿ ನುಡಿದರು.
ಬೀದರ ತಾಲೂಕಿನ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿ, ʼಕ್ರೀಡೆಗಳು ಮನಸ್ಸಿಗೆ ಆನಂದ ನೀಡುವ ಹಾರ್ಮೋನಗಳ ಬಿಡುಗಡೆಗೆ ಕಾರಣವಾಗುತ್ತವೆ. ಶಿಸ್ತು , ಸಮಯ ನಿರ್ವಹಣೆ, ತಂಡದೊಂದಿಗೆ ಕೆಲಸ ಮಾಡುವ ಕಲೆ, ಸೋಲನ್ನು ಸ್ವೀಕರಿಸುವುದು ಇತ್ಯಾದಿ ಕೌಶಲ್ಯಗಳನ್ನು ಬೆಳೆಸುತ್ತದೆ. ಕ್ರೀಡೆಗಳಿಂದ ಒಗ್ಗಟ್ಟು, ರಾಷ್ಟ್ರೀಯತೆ ಮತ್ತು ಸಾಮಾಜಿಕ ನಡುವಳಿಕೆ ರೂಢಿಯಾಗುವುದರಿಂದ ಶಾಲೆಗಳಲ್ಲಿ ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕುʼ ಎಂದರು.
ಪಶು ವೈದ್ಯಕೀಯ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಶಿವಕುಮಾರ ಗಡ್ಡಿ ಮಾತನಾಡಿ, ʼಇತ್ತೀಚೆಗೆ ಕ್ರೀಡಾ ಕ್ಷೇತ್ರದ ಕಡೆ ಆಸಕ್ತಿ ಕಡಿಮೆಯಾಗುತ್ತಿದೆ. ಆಟದ ಅವಧಿ ಬೇರೆ ವಿಷಯಗಳ ಪಾಠಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಮನೋಭಾವ ಹೋಗಬೇಕು. ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಮಾತ್ರವಲ್ಲ ಅನ್ನೋದನ್ನು ದೃಷ್ಟಿಯಲ್ಲಿಟ್ಟುಕೊಂಡು ಆಸಕ್ತಿಯಿರುವ ವಿವಿಧ ಕ್ರಿಡೆಗಳಿಗೆ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕುʼ ಎಂದು ನುಡಿದರು.

ಪ್ರಾಚಾರ್ಯ ಚನ್ನಬಸವ ಹೇಡೆ ಮಾತನಾಡಿ, ʼಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿ ಎಲ್ಲಾ ಕಾರ್ಯಯೋಜನೆಗಳನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷದಿಂದ ವಾರ್ಷಿಕ ಕ್ರೀಡಾ ಉತ್ಸವ ಆಯೋಜಿಸಿ ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಹೆಚ್ಚಿಸಲು ನಿರ್ಧರಿಸಲಾಗಿದೆʼ ಎಂದರು.
ಇದನ್ನೂ ಓದಿ : ಬೀದರ್ | ಕುತ್ತಿಗೆಗೆ ಗಾಳಿಪಟ ದಾರ ಸಿಲುಕಿ ವ್ಯಕ್ತಿ ಸಾವು
ಮನ್ನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ವೀರಭದ್ರಪ್ಪ ಮಾಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಮುಖರಾದ ಶ್ರೀಕಾಂತ ರಾಜಗೀರಾ, ತುಕಾರಾಮ ಮೊಳ್ಕೇರಿ, ಪ್ರದೀಪ ನಿಡೋದೆ, ಸಿದ್ಧಲಿಂಗಯ್ಯ ಮಠಪತಿ, ಶ್ರೀದೇವಿ ಸಾಲಿಮಠ, ಸವಿತಾ ಮಾಶೆಟ್ಟಿ, ಮಾಣಿಕ ಸಾಗರ, ವೈಭವಿ ಮಣಿಕ, ಶ್ರಾವಂತಿ ಅಂಬೆಸಂಗೆ, ಶಿವರಾಜ ನಳಗೀರೆ ವಸಂತ ರಾಠೋಡ, ಪ್ರತಿಭಾ ಚಿಂತಾಲೆ, ಪೂಜಾ ನಿಡೋದೆ, ಸೋನಾಬಾಯಿ, ಮನಿಷಾ ಮುಂತಾದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸವಿತಾ ಮಾಶೆಟ್ಟಿ ಸ್ವಾಗತಿಸಿದರು. ಉಪ ಪ್ರಾಚಾರ್ಯ ಗೌತಮ ಕುದರೆ ನಿರೂಪಿಸಿ, ವಂದಿಸಿದರು.





